Advertisement

ಜೆಡಿಎಸ್‌ ವಿಸಿಟಿಂಗ್‌ ಕಾರ್ಡ್‌ ಸ್ವಂತ ಕೆಲಸಕ್ಕೆ ಬಳಸಬೇಡಿ’

06:10 AM Sep 13, 2017 | |

ಬೆಂಗಳೂರು: ಜೆಡಿಎಸ್‌ ಪದಾಧಿಕಾರಿಗಳು ವಿಸಿಟಿಂಗ್‌ ಕಾರ್ಡ್‌ ಮಾಡಿಸಿಕೊಂಡು ಸ್ವಂತ ಕೆಲಸಕ್ಕೆ ಸೀಮಿತವಾಗದೆ ಪಕ್ಷ ಕಟ್ಟುವ ಕೆಲಸಕ್ಕೆ ಮುಂದಾಗಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೀಕ್ಷ್ಮವಾಗಿ ಹೇಳಿದ್ದಾರೆ.

Advertisement

ಪಕ್ಷದ ನೂತನ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಾನೂ ಸೇರಿದಂತೆ ನಾಯಕರು ಮಾತನಾಡುವಾಗ, ಸಂದರ್ಶನ ನೀಡುವಾಗ ಹಿಂದೆ ನಿಂತು ಫೋಸ್‌ ಕೊಟ್ಟರೆ ನೀವು ನಾಯಕರಾಗಿ ಬೆಳೆಯಲ್ಲ. ಜನರ ಮಧ್ಯೆ ಹೋಗಿ ಅವರ ಸಮಸ್ಯೆ ಅರಿತು ಸ್ಪಂದಿಸಿದರೆ ಮಾತ್ರ ನಾಯಕರಾಗುತ್ತೀರಿ ಎಂದು ಚಾಟಿ ಬೀಸಿದರು.

ಪಕ್ಷ ಕಟ್ಟಲು ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಅದನ್ನು ಸ್ವಂತ ಕೆಲಸಕ್ಕೆ ಬಳಕೆ ಮಾಡುವ ಮೂಲಕ ಆ ಸ್ಥಾನ ಘನತೆ ಕಳೆಯಬೇಡಿ. ಹುದ್ದೆಯ ಮಹತ್ವ ಅರಿದು ಕೆಲಸ ಮಾಡಿ ಎಂದು ಹೇಳಿದರು.

ರಾಜ್ಯಾದ್ಯಂತ ನಾನು ಒಬ್ಬನೇ ಪಕ್ಷ ಸಂಘಟನೆ ಮಾಡಲು ಸಾಧ್ಯವಿಲ್ಲ. ನೀವೆಲ್ಲರೂ ಜವಾಬ್ದಾರಿ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಜೆಡಿಎಸ್‌ ಪರ ವಾತಾವÃಣ ಇದೆ. ಆದರೆ, ಅದನ್ನು ನೀವು ಅರಿತು ಜನರ ಜತೆಗೂಡಿ ಕೆಲಸ ಮಾಡದಿದ್ದರೆ ಮತಗಳಾಗಿ ಪರಿವರ್ತನೆ ಮಾಡದಿದ್ದರೆ ಪಕ್ಷ ಅಧಿಕಾರಕ್ಕೆ ಬರುತ್ತಾ ಎಂದು ಪ್ರಶ್ನಿಸಿದರು.

ಹಾವೇರಿ ಜಿಲ್ಲೆಯಲ್ಲಿ  ಆತ್ಮಹತ್ಯೆ ಮಾಡಿಕೊಂಡ 77 ರೈತರಿಗೆ ಪಕ್ಷದ ವತಿಯಿಂದ ದೊಡ್ಡ ಕಾರ್ಯಕ್ರಮ ಮಾಡಿ 50 ರಿಂದ 1 ಲಕ್ಷ ರೂ. ಪರಿಹಾರ ಕೊಟ್ಟಿದ್ದೇನೆ. ಆದರೆ, ಮೊನ್ನೆ ನಡೆದ ಜಿಲ್ಲಾಧ್ಯಕ್ಷರ ಸಭೆಗೆ ಅಲ್ಲಿಂದ ಅಧ್ಯಕ್ಷರು ಬಿಟ್ಟರೆ ಯಾರೂ ಬಂದಿರಲಿಲ್ಲ. ನಮ್ಮ ದುಡಿಮೆಗೆ ಅರ್ಥ ಇಲ್ಲವೇ ಎಂದರು.

Advertisement

ಜೆಡಿಎಸ್‌ ಸರ್ಕಾರ ಇದ್ದಾಗ ಮಾಡಿದ ಕೆಲಸ ಕಾರ್ಯಗಳನ್ನು ಮನೆ ಮನೆಗೆ ತಲುಪಿಸಿ. ಬೆಂಗಳೂರಿನಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಆಡಳಿತಾವಧಿಯಲ್ಲಿ ಮಾಡಿರುವ ಅಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ. ಇದ್ಯಾವುದೂ ಮಾಡದೆ ಸುಮ್ಮನೆ ಸಭೆಗಳಿಗೆ ಬಂದು ಹೋದರೆ ಪ್ರಯೋಜನವಾಗದು ಎಂದು ಹೇಳಿದರು.

ನಮ್ಮ ಉಳಿವಿಗಾಗಿ ಜೆಡಿಎಸ್‌ ಅಧಿಕಾರಕ್ಕೆ ಬರುವುದು ಬೇಡ. ರಾಜ್ಯದ ಜನರ ಉಳಿವಿಗಾಗಿ ಪಕ್ಷ ಅಧಿಕಾರಕ್ಕೆ ಬರಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಿ. ಆರು ತಿಂಗಳು ಶ್ರಮ ಹಾಕಿದರೆ ಐದು ವರ್ಷ ಅಧಿಕಾರ ನಡೆಸಬಹುದು ಎಂದು ತಿಳಿಸಿದರು.

ಚುನಾವಣಾ ಪೂರ್ವ ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅವೆಲ್ಲವೂ ಆಧಾರ ರಹಿತ. ಜನರ ಮನಸ್ಸು ಜೆಡಿಎಸ್‌ ಕಡೆ ಇದೆ. ಅವರ ಸಮಸ್ಯೆಗಳಿಗೆ ನೀವು ಸ್ಪಂದಿಸಬೇಕಿದೆ ಎಂದರು.

ಸಾಲ ಮನ್ನಾ, ವಿದ್ಯುತ್‌
ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ದಿನದ 24 ಗಂಟೆ ವಿದ್ಯುತ್‌ ಪೂರೈಕೆ ಮಾಡಲಾಗುವುದು. ವಾಣಿಜ್ಯ ಮತ್ತು ಕೈಗಾರಿಕೋದ್ಯಮದ ಬೆಳವಣಿಗೆಗೆ ಯೋಜನೆ ರೂಪಿಸಲಾಗುವುದು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಿ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಐಟಿ-ಬಿಟಿ ವಲಯ ಅಭಿವೃದ್ಧಿಗೆ ಜನತಾದಳದ ಕೊಡುಗೆ ಕಡಿಮೆಯೇನಿಲ್ಲ. ಇದನ್ನು ಜನರಿಗೆ ತಿಳಿಸಿ. ಸಂಚಾರ ದಟ್ಟಣೆ ಮುಕ್ತ, ತ್ಯಾಜ್ಯ ಮುಕ್ತ, ಸುಸಜ್ಜಿತ ಮೂಲಸೌಕರ್ಯ ಅಭಿವೃದ್ಧಿಗೆ ಜೆಡಿಎಸ್‌ ಬೆಂಬಲಿಸುವಂತೆ ಮತದಾರರಿಗೆ ಮನವಿ ಮಾಡಿ ಎಂದು ಹೇಳಿದರು.

ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲು ಪಕ್ಷದ ಕಚೇರಿ ಇರಬೇಕು. ಆ ನಿಟ್ಟಿನಲ್ಲಿ  ಈಗಿನಿಂದಲೇ ಕಾರ್ಯೋನ್ಮುಖರಾಗಿ. ಶಾಸಕರು, ಆಯಾ ಕ್ಷೇತ್ರದ ಅಧ್ಯಕ್ಷರು ಇದರ ಬಗ್ಗೆ ಗಮನ ನೀಡಬೇಕು ಎಂದು ತಿಳಿಸಿದರು.

ಬೂತ್‌ ಮಟ್ಟದಲ್ಲಿ ಪಕ್ಷದ ಸಕ್ರಿಯ ಕಾರ್ಯಕರ್ತರ ಪಡೆ ರಚಿಸಿ. ಪಕ್ಷದ ಕಾರ್ಯಕ್ರಮಗಳನ್ನು ತಿಳಿಸಿ. ಕುಮಾರಸ್ವಾಮಿ ಒಬ್ಬರಿಂದಲೇ ಏನೂ ಆಗದು. ನೀವೆಲ್ಲೂ ಕೈ ಜೋಡಿಸಿ ಎಂದು ಹೇಳಿದರು.

ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲೆಬೇಕು ಎಂದು ಪಣತೊಟ್ಟಿದ್ದೇನೆ. ನೀವು ಸಹಕರಿಸಿ. ಹೊಣೆಗಾರಿಕೆ ವಹಿಸಿಕೊಂಡವರು ಸರಿಯಾಗಿ ಕೆಲಸ ಮಾಡದಿದ್ದರೆ ಮುಲಾಜಿಲ್ಲದೆ ತೆಗೆದುಹಾಕಲಾಗುವುದು ಎಂದು ತಿಳಿಸಿದರು.

ಜೆಡಿಎಸ್‌ ರಾಜ್ಯದಲ್ಲಿ ಆಧಿಕಾರಕ್ಕೆ ಬರುವುದು ಖಚಿತ. ಎಲ್ಲ ಸಮುದಾಯದವರನ್ನೂ ಒಟ್ಟುಗೂಡಿಸಿಕೊಂಡು ಐಕ್ಯತೆಯಿಂದ ಶ್ರಮ ಹಾಕಿ. ಪಕ್ಷ ಕಟ್ಟಿದವರ ಮರೆಯಬೇಡಿ. ಕುಮಾರಸ್ವಾಮಿಗೆ ಸಾಥ್‌ ನೀಡಿ, ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನನ್ನ ರಾಜಕೀಯ ಜೀವನದಲ್ಲಿ ಸಾಕಷ್ಟು ನೋಡಿದ್ದೇನೆ.
– ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next