Advertisement
“ಕುಮಾರಿ 21 ಎಫ್’ ತೆಲುಗಿನ ರಿಮೇಕ್ ಚಿತ್ರ. ಇದು ಪ್ರಣಾಮ್ ಬಳಿ ನಾಲ್ಕು ಸಲ ಬಂತಂತೆ. ಮೊದಲು ಬಂದವರ ಬಳಿ, “ಇಲ್ಲಿ ಆ್ಯಕ್ಷನ್ ಇಲ್ಲ, ಸ್ವಲ್ಪ ಸೇರಿಸಿದರೆ ಚೆನ್ನಾಗಿರುತ್ತೆ’ ಅಂತ ಪ್ರಣಾಮ್ ಹೇಳಿದ್ದೇ ತಡ, ಆ ನಿರ್ದೇಶಕರು ಸರಿ ಆ್ಯಕ್ಷನ್ ಸೇರಿಸ್ತೀನಿ ಅಂತ ಹೋದವರು ಪುನಃ ಬರಲಿಲ್ಲವಂತೆ. ಆಮೇಲೆ ಇನ್ಯಾರೋ ಕಡೆಯಿಂದ ಎರಡು ಸಲ ಇದೇ ಸಿನಿಮಾ ಹುಡುಕಿ ಪ್ರಣಾಮ್ ಬಳಿ ಬಂದಿದೆ. ಕೊನೆಗೆ ಸುಕುಮಾರ್ ಅವರು ದೇವರಾಜ್‌ಗೆ ಫೋನಾಯಿಸಿ, ನಮ್ಮ ಅಸೋಸಿಯೇಟ್ ಶ್ರೀಮನ್ ಬರುತ್ತಾರೆ. ಮಾತಾಡಿ ಅಂದರಂತೆ. ಶ್ರೀಮನ್ ಕೂಡ ಇದೇ ಚಿತ್ರ ಹಿಡಿದು ಬಂದಿದ್ದರಿಂದ ಕೊನೆಗೆ ಸಿನಿಮಾ ಯಾಕೋ, ಪ್ರಣಾಮ್ ಬಳಿಯೇ ಸುತ್ತುತ್ತಿದೆ ಅಂದುಕೊಂಡು ಎಲ್ಲರೂ ಕುಳಿತು ಚಿತ್ರ ನೋಡಿ, ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹಾಗೆ ನಡೆದ ಸಿನಿಮಾ ಮಾಡುವ ಪ್ರಕ್ರಿಯೆ, ಈಗ ಬಿಡುಗಡೆ ಹಂತಕ್ಕೆ ಬಂದಿದೆ.
ನಾಯಕನಾಗಿ ಮೊದಲ ಚಿತ್ರವಿದು. ಸಹಜವಾಗಿಯೇ ಭಯವಿತ್ತು. ಅದರಲ್ಲೂ ಕೆಲ ದೃಶ್ಯಗಳಲ್ಲಿ, ಎಮೋಷನ್ಸ್ ಸೀನ್ ಗಳಲ್ಲಿ ಆ ನರ್ವಸ್ ಆಗಿದ್ದುಂಟು. ಯಾಕೆಂದರೆ, ಉದ್ದನೆಯ ಡೈಲಾಗ್ ಜೊತೆ, ಒಂದೇ ಶಾಟ್ ಸೀನ್‌ನಲ್ಲಿ ಅದನ್ನು ಓಕೆ ಮಾಡಬೇಕಿತ್ತು. ಪುಟಗಟ್ಟಲೆ ಡೈಲಾಗ್ ಹೇಳ್ತೀನಾ,
ಹೇಳುವಾಗ, ಬಾಡಿಲಾಂಗ್ವೇಜ್ ಮರಿತೀನಾ, ಡೈಲಾಗ್ ಕಡೆ ಗಮನಕೊಟ್ಟರೆ, ಎಲ್ಲಿ ನಟನೆ ಹಾಳಾಗಿ ಹೋಗುತ್ತೋ ಎಂಬ ಭಯದೊಂದಿಗೆ
ಆ ಸೀನ್‌ನಲ್ಲಿ ತೊಡಗಿಕೊಂಡೆ. ಎಲ್ಲೂ ಸಮಸ್ಯೆ ಆಗಲಿಲ್ಲ. ಇದೆಲ್ಲಾ ಸಾಧ್ಯವಾಗಿದ್ದು, ಅಪ್ಪ ಮತ್ತು ಅಣ್ಣನ ಸಹಕಾರ, ಪ್ರೋತ್ಸಾಹದಿಂದ. ಅವರನ್ನು ನೋಡಿಕೊಂಡು ಬೆಳೆದವನು. ಹಾಗಾಗಿ ನಟನೆ ಅನ್ನೋದು ಅಷ್ಟೊಂದು ಕಷ್ಟ ಎನಿಸಲಿಲ್ಲ’ ಎಂದು ಚಿತ್ರದ ಘಟನೆ ವಿವರಿಸುತ್ತಾರೆ ಪ್ರಣಾಮ್. ಮೊದಲ ಚಿತ್ರದಲ್ಲೇ ಒಂದಷ್ಟು ರೊಮ್ಯಾಂಟಿಕ್ ಸೀನ್‌ಗಳಿವೆ. ಸೆಟ್‌ನಲ್ಲಿ ತುಂಬಾ ಜನರಿದ್ದರು. ಆ ಸೀನ್ ಕೊಂಚ ಕಷ್ಟವೆನಿಸಿತ್ತು. ರೊಮ್ಯಾಂಟಿಕ್ ಸೀನ್ ಮೊದಲ ಅನುಭವ. ಹೇಗೋ, ಏನೋ ಎಂಬ ಒಂದು ರೀತಿಯ ಮುಜುಗರ. ಆದರೆ, ಕೋ ಸ್ಟಾರ್ ಕಂಫರ್ಟಬಲ್ ಆಗಿದ್ದರು. ಅಲ್ಲಿದ್ದವರೆಲ್ಲರ ಸಹಕಾರವೂ ಚೆನ್ನಾಗಿತ್ತು. ಹಾಗಾಗಿ ಆ ರೊಮ್ಯಾಂಟಿಕ್ ದೃಶ್ಯದಲ್ಲೆಲ್ಲೂ ವೀಕ್ ಎನಿಸದಂತೆ ಮಾಡಿ ತೋರಿಸಿದೆ. ಸೆಟ್‌ಗೆ ಅಪ್ಪ, ಅಣ್ಣ ಬಂದಾಗ, ನನ್ನ ನಟನೆ ನೋಡಿ ಕೆಲ ಸಲಹೆ, ಸೂಚನೆಗಳನ್ನು ಕೊಟ್ಟಿದ್ದುಂಟು. ಡ್ಯಾಡಿ ಡೈಲಾಗ್ ಜೊತೆ ಹಾವ-ಭಾವ ಮುಖ್ಯ ಎಂಬುದನ್ನು ತಿಳಿಸಿಕೊಟ್ಟರು. ಎದುರಿಗಿದ್ದವರ ಮುಂದೆ ನಿಂತು ಡೈಲಾಗ್ ಹೇಳುವಾಗ, ಬೇರೆಲ್ಲೂ ಗಮನಿಸದೆ, ಅವರ ಕಣ್ಣು ನೋಡಿಯೇ ಡೈಲಾಗ್ ಹೇಳಬೇಕು ಎಂದು ಅಣ್ಣನೂ ಹೇಳಿದ. ಅದೆಲ್ಲವೂ ಇಲ್ಲಿ ಉಪಯೋಗಕ್ಕೆ ಬಂತು’ ಎಂಬುದನ್ನು ಹೇಳಲು ಮರೆಯಲಿಲ್ಲ ಪ್ರಣಾಮ್.
Related Articles
Advertisement
ಒಂದೇ ಮನೆಯಲ್ಲೀಗ ಮೂವರು ಹೀರೋಗಳಿದ್ದಾರೆ. ಆ ಬಗ್ಗೆ ಪ್ರಣಾಮ್‌ಗೆ ಎಲ್ಲಿಲ್ಲದ ಹೆಮ್ಮೆ. ಹಾಗಂತ, ಅವರ ಮಧ್ಯೆ ಯಾವ ಕಾಂಪಿಟೇಷನ್ನೂ ಇಲ್ಲ. “ಡ್ಯಾಡಿ ಮಾಡಿದ ಸಾಧನೆ ಮುಂದೆ ನಾವೇನೂ ಇಲ್ಲ. ಅವರನ್ನು ತಲುಪಲು ಅಸಾಧ್ಯದ ಮಾತು. ಇನ್ನು, ಅಣ್ಣ ಬೆಳೆದಿದ್ದಾನೆ. ಅವನ ಮಟ್ಟಕ್ಕೆ ನಾನು ತಲುಪಬೇಕೆಂದರೆ, ಇನ್ನೂ ಹತ್ತು ವರ್ಷವಂತೂ ಬೇಕು. ಮನೆಯಲ್ಲಿ ಮೂವರು ಕಲಾವಿದರಿದ್ದೇವೆ. ನಿಜ. ಒಟ್ಟಿಗೆ ನಟಿಸುವ ಆಸೆಯೇನೋ ಇದೆ. ಅಂತಹ ಅವಕಾಶ ಸಿಕ್ಕರೆ, ಆ ರೀತಿಯ ಕಥೆ, ಪಾತ್ರ ಬಂದರೆ ಖಂಡಿತ ಮಾಡ್ತೀವಿ’ ಎನ್ನುತ್ತಾರೆ ಪ್ರಣಾಮ್.
“ಕನ್ನಡದಲ್ಲಿ ಈಗ ಹೆಚ್ಚು ಪ್ರಯೋಗಗಳು ನಡೆಯುತ್ತಿವೆ. ನನಗೆ ಹೊಸ ಜಾನರ್ ಕಥೆಗಳೆಂದರೆ ಇಷ್ಟ. ಡ್ಯಾಡಿ ಕೂಡ “ಹುಲಿಯಾ’ ಎಂಬ ಪ್ರಯೋಗಾತ್ಮಕ ಚಿತ್ರದಲ್ಲೂ ನಟಿಸಿದ್ದರು. ಅಣ್ಣ ಕೂಡ “ಅರ್ಜುನ’ ಎಂಬ ಚಿತ್ರ ಮಾಡಿದ್ದರು. ಅಲ್ಲಿ ನಟನೆಗೆ ಹೆಚ್ಚು ಅವಕಾಶವಿತ್ತು. ಅದೇ ತರಹದ ಚಿತ್ರಕಥೆಗಳಿದ್ದರೆ ಖಂಡಿ ಮಾಡ್ತೀನಿ’ ಎಂದು ಹೇಳುವ ಪ್ರಣಾಮ್, “ಕುಮಾರಿ 21 ಎಫ್’ ಚಿತ್ರವನ್ನು ಎದುರು ನೋಡುತ್ತಿದ್ದಾರೆ. ಮುಖ್ಯವಾಗಿ ಈ ಚಿತ್ರವನ್ನು ಹುಡುಗ, ಹುಡುಗಿಯರು ನೋಡಬೇಕೆಂಬುದು ಅವರ ಆಶಯ. ಅದಕ್ಕೆ ಕಾರಣ ಕೊಡುವ ಅವರು, “ಈ ಚಿತ್ರದಲ್ಲಿ “ಡೋಂಟ್ ಟಚ್ ವುಮೆನ್’ ಎಂಬ ಸಂದೇಶವಿದೆ. ನಾಯಕಿ ಅಂದರೆ, ಬೇರೆ ಜನರಿಗೆ ಬೇರೆ ಬೇರೆ ಕಲ್ಪನೆಗಳಿರುತ್ತವೆ ಯಾರೋ ಹೇಳಿದ್ದನ್ನು ಕೇಳಿ ತಪ್ಪು ಅರ್ಥೈಸಿಕೊಳ್ಳುವುದರಿಂದ ಏನೆಲ್ಲಾ ಆಗುತ್ತೆ ಎಂಬ ಸಾರಾಂಶ ಇಲ್ಲಿದೆ. ಎಲ್ಲವನ್ನೂ ಹೇಳುವುದಕ್ಕಿಂತ ಚಿತ್ರವನ್ನೊಮ್ಮೆ ನೋಡಿದರೆ, ಎಲ್ಲಾ ಅರ್ಥ ಆಗುತ್ತೆ’ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ಪ್ರಣಾಮ್.
ವಿಜಯ್ ಭರಮಸಾಗರ