ಕಲಬುರಗಿ: ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಂಶೋಧನೆ ಎಂದರೆ ಕದ್ದ ವಿಷಯವನ್ನು ಅಂಟಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಇದು ತುಂಬಾ ಅಪಾಯ, ಆದ್ದರಿಂದ ವಿದ್ಯಾರ್ಥಿಗಳು ಸಂಶೋಧನೆ ಮಾಡುವ ಸ್ಥಳಗಳಿಗೆ, ವ್ಯಕ್ತಿಗಳಿಗೆ ಭೇಟಿ ಮಾಡಿ ವರದಿ ಮಾಡಿ ಎಂದು ಸೊಲ್ಲಾಪುರ ವಿವಿಯ ಕುಲಪತಿ ಪ್ರೋ| ಎನ್.ಮಾಲ್ದಾರ್ ಸಲಹೆ ನೀಡಿದರು.
ಗುಲಬರ್ಗಾ ವಿಶ್ವ ವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ಕುರಿತು ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಮಾಲೆ ಉದ್ಘಾಟಿಸಿ ಅವರು ಮಾತನಾಡಿದರು. ಸಂಶೋಧನೆ ನಕಲು ಮಾಡುವುದು ಸಂಶೋಧನೆ ಎನ್ನಿಸಿಕೊಳ್ಳುವುದಿಲ್ಲ. ಅದು ನಿಷ್ಪಯೋಜಕ ವರದಿಯಾಗುತ್ತದೆ.
ಇಂದು ಸಂಶೋಧನಾ ವಿದ್ಯಾರ್ಥಿಗಳು ಮಂಡಿಸುತ್ತಿರುವ ಸಂಶೋಧನಾ ಪ್ರಬಂಧಗಳನ್ನು ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟಿಸಿ ಇಲ್ಲವೇ ನಾಶವಾಗಿ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಶೋಧನಾ ವಿದ್ಯಾರ್ಥಿಗಳು ನೈಜ ಮತ್ತು ಸತ್ಯ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಸಂಶೋಧನೆ ಎನ್ನುವುದು ಕಾಪಿ ಪೇಸ್ಟ್ ಆದರೆ ಯಾವುದೇ ಪ್ರಯೋಜನವಿಲ್ಲ ಎಂದರು.
ಯುವ ಪೀಳಿಗೆ ಉದ್ಯೋಗ ಶೀಲರಾಗಬೇಕೆ ಹೊರತು, ಉದ್ಯೋಗದ ಆಕಾಂಕ್ಷಿಗಳಾಗಬಾರದು. ನೌಕರಿ ನೀಡುವವರಾಗಿ ಹೊರತು ನೌಕರಿ ಬೇಡುವವರಾಗಬೇಡಿ. ಒಂದು ಕಡೆ ಗುಣಮಟ್ಟದ ಶಿಕ್ಷಣ ನೀಡುವ ಚರ್ಚೆ ನಡೆದಿದ್ದರೆ, ಇನ್ನೊಂದೆಡೆ ಸಿಬ್ಬಂದಿ ಕೊರತೆ ಇದೆ. ಈ ಎರಡರ ನಡುವೆ ಗುಣಮಟ್ಟದ ಸಂಶೋಧನೆ ಹಾಗೂ ಶಿಕ್ಷಣ ನೀಡುವುದು ಹೇಗೆ ಎಂದು ಪ್ರಶ್ನಿಸಿದರು.
ಈಚೆಗೆ ನ್ಯಾಕ್ ಕಮೀಟಿ ಸಂಶೋಧನೆ ಪ್ರಕಾರ ಸಂಶೋಧನಾ ಕ್ಷೇತ್ರದಲ್ಲಿ ಸೌತ್ ಕೋರಿಯಾದಲ್ಲಿ ಪ್ರತಿ ಹತ್ತು ಸಾವಿರಕ್ಕೆ ನಾಲ್ಕು ಸಾವಿರ, ಅಮೆರಿಕಾ, ಕೆನಡಾದಲ್ಲಿ ಪ್ರತಿ ಹತ್ತು ಸಾವಿರಕ್ಕೆ 900, ರಷ್ಯಾದಲ್ಲಿ 500 ಮತ್ತು ಚೀನಾದಲ್ಲಿ 300 ಜನ, ಭಾರತದಲ್ಲಿ ಮಾತ್ರ 10 ಸಾವಿರಕ್ಕೆ ಕೇವಲ 17 ಜನ ಪೇಟೆಂಟ್ ಪಡೆಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಮೌಲ್ಯಮಾಪನ ಕುಲಸಚಿವ ಪ್ರೊ| ಸಿ.ಎಸ್. ಪಾಟೀಲ, ರಾಯಭಾರಿ ಆರ್.ಎಲ್, ಡಾ| ಕೆ.ವಿಜಯಕುಮಾರ, ಡಾ| ಪ್ರತಿಮಾ ಮಠದ, ಡಾ| ವೆಂಕಟರಾಮನ್ ಇದ್ದರು. ಸೂಕ್ಷ್ಮಜೀವಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.