Advertisement

ಕಾಂಗ್ರೆಸ್‌ ಪಕ್ಷವನ್ನು  ಹಾಳು ಮಾಡಬೇಡಿ: ವಿಶ್ವನಾಥ್‌

10:33 AM Mar 26, 2017 | Harsha Rao |

ಮೈಸೂರು: “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೀವು ಸರ್ಕಾರವನ್ನು ಹೇಗೆ ಬೇಕಾದರೂ ಹಾಳು ಮಾಡಿ. ಆದರೆ, 130 ವರ್ಷ ಇತಿಹಾಸವಿರುವ ಕಾಂಗ್ರೆಸ್‌ ಪಕ್ಷವನ್ನು ಹಾಳು ಮಾಡಬೇಡಿ’ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಂಸದ ಎಚ್‌. ವಿಶ್ವನಾಥ್‌ ವಾಗ್ಧಾಳಿ ನಡೆಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರವೇ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ, ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್‌ ಪಕ್ಷದೊಳಗೆ ಆಗುತ್ತಿರುವ ಬೆಳವಣಿಗೆಗಳನ್ನು ಗಮನಕ್ಕೆ ತರುತ್ತೇನೆ. ಈ ಎಲ್ಲಾ ವಿಷಯಗಳನ್ನು ಕೇಳುವುದು ಅಥವಾ ಬಿಡುವುದು ಅವರ ವಿವೇಚನೆಗೆ ಬಿಟ್ಟಿದ್ದು. ಆದರೆ, ಪಕ್ಷದ ಹಿರಿಯರ ಮುಂದೆ ನಿವೇದನೆ ಮಾಡಿಕೊಳ್ಳುವುದು ತಮ್ಮ ಕರ್ತವ್ಯ ಎಂದರು.

Advertisement

ಈಡುಗಾಯಿ ಒಡೆದು ಬರ್ತೇನೆ: ಉಪಚುನಾವಣೆ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಸಂಪುಟ ಸಚಿವರು ಇರಬೇಕಾದರೆ ನಾವೆಲ್ಲ ಯಾವ ಲೆಕ್ಕ. ಶೀಘ್ರವೇ ಎರಡೂ ಕ್ಷೇತ್ರಗಳಿಗೂ ಭೇಟಿ ನೀಡಿ ನಂಜುಂಡೇಶ್ವರ ಹಾಗೂ ಗೋಪಾಲಸ್ವಾಮಿ ಬಳಿಯೂ ಪಕ್ಷ ಉಳಿಸುವಂತೆ ನಿವೇದನೆ ಮಾಡಿಕೊಳ್ಳುತ್ತೇನೆ. ನಂಜನಗೂಡಿನ ನಂಜುಂಡೇಶ್ವರನ ಬಳಿ ಕಾಂಗ್ರೆಸ್‌ ಪಕ್ಷವನ್ನು ಉಳಿಸುವಂತೆ ಸಾಷ್ಟಾಂಗ ನಮಸ್ಕಾರ ಹಾಕಿ ಈಡುಗಾಯಿ ಒಡೆದು ಬರುತ್ತೇನೆ ಎಂದು ವಿಶ್ವನಾಥ್‌ ಹೇಳಿದರು.

ಕಾಂಗ್ರೆಸ್‌ನ ಕಾಗಲವಾಡಿ ಶಿವಣ್ಣ ಬಿಜೆಪಿಗೆ
ಮೈಸೂರು:
ತೀವ್ರ ಕುತೂಹಲ ಮೂಡಿಸಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆ ಕಣ ರಂಗೇರುತ್ತಿರುವಂತೆಯೇ ಕಾಂಗ್ರೆಸ್‌ನಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿದೆ. ಕಾಂಗ್ರೆಸ್‌ ಮುಖಂಡ,
ಚಾಮರಾಜನಗರ ಕ್ಷೇತ್ರದ ಮಾಜಿ ಸಂಸದ ಕಾಗಲವಾಡಿ ಎಂ. ಶಿವಣ್ಣ ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಲು ಮುಂದಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೈ ಪಾಳಯವನ್ನು ಬಿಡಲು ತೀರ್ಮಾನಿಸಿರುವ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಕಾಗಲವಾಡಿ ಎಂ.ಶಿವಣ್ಣ, ಬಿಜೆಪಿಯತ್ತ ಮುಖ ಮಾಡಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಬಿಜೆಪಿ ರಾಜಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾಗಿ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.

ಬಿಜೆಪಿ ಸೇರುತ್ತೇನೆ: ಬಿಜೆಪಿ ನಾಯಕರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ, ಸದ್ಯದಲ್ಲೇ ಬಿಜೆಪಿ ಸೇರಲಿದ್ದು, ಎರಡೂ ಕ್ಷೇತ್ರಗಳ ಉಪಚುನಾವಣೆಗೂ ಮುನ್ನವೇ ಬಿಜೆಪಿ ಸೇರ್ಪಡೆಯಾಗುತ್ತೇನೆ. ಹಲವು
ವರ್ಷದಿಂದ ಕಾಂಗ್ರೆಸ್‌ ಪಕ್ಷಕ್ಕಾಗಿ ಶ್ರಮಿಸಿರುವ ತಮ್ಮನ್ನು ಕಾಂಗ್ರೆಸ್‌ನಲ್ಲಿ ಕಡೆಗಣಿಸಲಾಗಿದ್ದು, ಕಾಂಗ್ರೆಸ್‌ ಪಕ್ಷದ ಸ್ಥಿತಿಯೂ ಉತ್ತಮವಾಗಿಲ್ಲ. ಅಲ್ಲದೆ ಪಕ್ಷದಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿರುವ ಹಿನ್ನೆಲೆಯಲ್ಲಿ ತಾವು ಸಹ
ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಲು ತೀರ್ಮಾನಿಸಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next