ಮೈಸೂರು: ಗ್ರಾಹಕರು ಹಕ್ಕುಗಳ ಜೊತೆಗೆ ತಮ್ಮ ಜವಾಬ್ದಾರಿಯ ಬಗ್ಗೆಯೂ ತಿಳಿವಳಿಕೆ ಹೊಂದಿರಬೇಕು ಎಂದು ಆಹಾರ ನಾಗರಿಕ ಸರಬರಾಜು ಹಾಗೂ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಪಿ. ಶಿವಣ್ಣ ಹೇಳಿದರು. ನಗರದ ದಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ ಸಭಾಂಗಣದಲ್ಲಿ ನಡೆದ ಮೈಸೂರು ಜಿಲ್ಲಾ ಮಟ್ಟದ ಶಾಲಾ ಗ್ರಾಹಕರ ಕ್ಲಬ್ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ವಂಚನೆ: ಗ್ರಾಹಕರ ಹಕ್ಕುಗಳ ಸಂರಕ್ಷಣೆ ಸಂವಿಧಾನದಲ್ಲೇ ಅಡಕವಾಗಿದೆ. ಇತ್ತೀಚೆಗೆ ಐಎಂಎ ಗ್ರಾಹಕರಿಂದ ದುಡ್ಡು ಪಡೆದು ವಂಚನೆ ಮಾಡಿತ್ತು. ಅತಿ ಲಾಭದ ಆಸೆ ತೋರಿಸಿ ಸಾರ್ವಜನಿಕರನ್ನು ಶೋಷಣೆ ಮಾಡಲಾಗುತ್ತಿದೆ. ಇದೆಲ್ಲದ್ದಕ್ಕೂ ಸಂವಿಧಾನದಲ್ಲಿ ಕಾಯಿದೆ ರೂಪಿಸಲಾಗಿದೆ. ಅಲ್ಲದೆ, ಸರಕಾರ ಶಾಲಾ ಹಂತದಲ್ಲೇ ಗ್ರಾಹಕರ ಕ್ಲಬ್ ರಚಿಸಿ, ಅರಿವು ಮೂಡಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಪಠ್ಯಪುಸ್ತಕದಲ್ಲಿ ಗ್ರಾಹಕರ ಜಾಗೃತಿ ವಿಷಯವನ್ನು ಸೇರಿಸುವ ಚಿಂತನೆ ಸರಕಾರದ ಮುಂದಿದೆ ಎಂದು ಹೇಳಿದರು.
ಕಾಯಿದೆ: ದಿನನಿತ್ಯ ಸಾಕಷ್ಟು ಅಗತ್ಯ ವಸ್ತುಗಳನ್ನು ಗ್ರಾಹಕರು ಖರೀದಿ ಮಾಡಬೇಕಿರುತ್ತದೆ. ಅಲ್ಲದೆ, ಭವಿಷ್ಯದ ಹಿತದೃಷ್ಟಿಯಿಂದ ಇತರ ಸಂಘ ಸಂಸ್ಥೆಗಳಲ್ಲಿ ಒಂದಷ್ಟು ಹಣವನ್ನು ವಿನಿಯೋಗಿಸುತ್ತಾರೆ. ಆದರೆ, ಅಲ್ಲಿ ಮೋಸ, ವಂಚನೆಗೆ ಒಳಗಾಗುತ್ತಾರೆ. ಈ ನಿಟ್ಟಿನಲ್ಲಿ 1986ರಲ್ಲಿ ಗ್ರಾಹಕರ ಸಂರಕ್ಷಣೆ ಕಾಯಿದೆ ಬಂತು. ಆದರೂ ಇಂದಿಗೂ ಸಾವಿರಾರು ಮಂದಿ ಗ್ರಾಹಕರು ವಂಚನೆ, ಶೋಷಣೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಗ್ರಾಹಕರ ಹಕ್ಕುಗಳ ರಕ್ಷಣೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಬೇಕಿದೆ. ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
7 ವರ್ಷ ಶಿಕ್ಷೆ: ಗ್ರಾಹಕರನ್ನು ಯಾರಾದರೂ ವಂಚಿಸಿದರೆ ಅವರಿಗೆ ಗ್ರಾಹಕರ ಕೋರ್ಟ್‌ನಿಂದ 7 ವರ್ಷ ಶಿಕ್ಷೆ ವಿಧಿಸಲಾಗುತ್ತದೆ. ಅಲ್ಲದೆ, ಜಿಲ್ಲಾ ಗ್ರಾಹಕರ ಸಂರಕ್ಷಣಾ ಪರಿಷತ್ತು ಗ್ರಾಹಕರಿಗೆ ಸುಲಭ ಮತ್ತು ತ್ವರಿತವಾಗಿ ಪರಿಹಾರ ಒದಗಿಸುತ್ತದೆ. ವಂಚನೆಗೊಳಗಾದ ಯಾರುಬೇಕಾದರೂ ಇಲ್ಲಿ ದೂರು ನೀಡಬಹುದು. ಅಲ್ಲದೆ, ಶಾಲಾ, ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳಿಗೆ ಈ ಬಗ್ಗೆ ಅರಿವು ಮೂಡಿಸಲು ಗ್ರಾಹಕರ ಕ್ಲಬ್ ಸ್ಥಾಪನೆ ಮಾಡಲಾಗಿದೆ. ಅನ್ಯಾಯ, ಶೋಷಣೆ ವಿರುದ್ಧ ಶಾಲಾಹಂತದಲ್ಲೇ ತಿಳಿವಳಿಕೆ ನೀಡಿದರೆ ಭವಿಷ್ಯದಲ್ಲಿ ಮೋಸ ಹೋಗುವುದನ್ನು ತಡೆಯಬಹುದು ಎಂಬುದು ಇದರ ಉದ್ದೇಶ.
ಹಾಗಾಗಿ ಸಾಮಾನ್ಯ ಶಿಕ್ಷಣದ ಜತೆಗೆ ಗ್ರಾಹಕರ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು. ದಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ ಅಧ್ಯಕ್ಷ ಡಾ.ಸುರೇಶ್, ಜೆಎಸ್‌ಎಸ್ ಕಾನೂನು ಕಾಲೇಜು ಡಾ.ನಟರಾಜ್, ಮಾಹಿತಿ ಹಕ್ಕು ಕಾರ್ಯಕರ್ತ ಜಿ.ಆರ್.ವಿದ್ಯಾರಣ್ಯ, ಅಖೀಲ ಭಾರತೀಯ ಗ್ರಾಹಕ ಪಂಚಾಯಿತಿ ಅಧ್ಯಕ್ಷ ಎಚ್.ಆರ್. ಸುಂದರೇಶನ್ ಇದ್ದರು.
ಪ್ರತಿ ಶಾಲೆಯಲ್ಲೂ ಗ್ರಾಹಕರ ಕ್ಲಬ್: ಸರಕಾರ ಎಲ್ಲಾ ಶಾಲೆಗಳಲ್ಲಿ ಗ್ರಾಹಕರ ಕ್ಲಬ್ ಇರಬೇಕೆಂದು ಆದೇಶ ಮಾಡಿದೆ. ಇದಕ್ಕಾಗಿ ವರ್ಷದಲ್ಲಿ 20 ಶಾಲೆಗಳಿಗೆ 10 ಸಾವಿರ ಸಹಾಯಧನ ನೀಡುತ್ತಿದೆ. ಆದರೂ ಶೇ.50ರಷ್ಟು ಮಾತ್ರ ಯಶಸ್ಸು ಸಾಧಿಸಲಾಗಿದೆ. ನಗರ, ತಾಲೂಕು, ಹೋಬಳಿಯಂತೆ ಗ್ರಾಮೀಣ ಭಾಗಗಳಲ್ಲೂ ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಬೇಕಿದೆ. ಪ್ರಬಂಧ, ಚರ್ಚಾಸ್ಪರ್ಧೆ, ಗುಂಪು ಚರ್ಚೆ ಮಾಡಲಾಗುತ್ತಿದೆ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಪಿ. ಶಿವಣ್ಣ ಹೇಳಿದರು.