Advertisement

ಮಕ್ಕಳ ಮೇಲೆ ಒತ್ತಡ ಹೇರಬೇಡಿ

08:50 PM Jan 11, 2020 | Lakshmi GovindaRaj |

ಕೆ.ಆರ್‌.ನಗರ: ಪೋಷಕರು ಮಕ್ಕಳ ಮೇಲೆ ಒತ್ತಡ ಹೇರದೆ ಅವರ ಅಭಿರುಚಿಗೆ ತಕ್ಕಂತೆ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿಕೊಟ್ಟಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಶಾಸಕ ಸಾ.ರಾ.ಮಹೇಶ್‌ ಹೇಳಿದರು. ಪಟ್ಟಣದ ಎಚ್‌.ಡಿ.ದೇವೇಗೌಡ ಭವನದಲ್ಲಿ ತಾಲೂಕು ಒಕ್ಕಲಿಗ ನೌಕರರ ಸ್ನೇಹ ಬಳಗದಿಂದ ಶನಿವಾರ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಶಾಲಾ-ಕಾಲೇಜು, ಶಿಕ್ಷಕರು ಹಾಗೂ ಪೋಷಕರಿಗೆ ಗೌರವ ತಂದು ಕೊಡಬೇಕು. ಅದೃಷ್ಟದ ಮೇಲೆ ನಂಬಿಕೆ ಇಡುವುದನ್ನು ಬಿಟ್ಟು ಸತತ ಪರಿಶ್ರಮದಿಂದ ಅಧ್ಯಯನ ಮಾಡಿದಾಗ ಉನ್ನತ ಮಟ್ಟಕ್ಕೇರಲು ಸಾಧ್ಯ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಶಿಕ್ಷಿತರಾಗುವುದರ ಜತೆಗೆ ಒಳ್ಳೆಯ ಸಂಸ್ಕಾರ ಕಲಿಯಬೇಕು. ಇದರಿಂದ ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗಲಿದೆ ಎಂದರು.

ಸೇವೆ ಸಲ್ಲಿಸಿ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನ ಪಡೆದ ನಂತರ ಸಮಾಜದಲ್ಲಿ ನೊಂದವರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಬೇಕು. ಆಗ ನಿಮ್ಮ ಕುಟುಂಬ ಮತ್ತು ನಿಮಗೆ ಯಶಸ್ಸು ದೊರೆಯಲಿದೆ ಎಂದು ಸಲಹೆ ನೀಡಿದರು.

ಉಚಿತ ತರಬೇತಿ: ನೌಕರರ ಸ್ನೇಹ ಬಳಗದ ಗೌರವಾಧ್ಯಕ್ಷ ಡಾ.ಟಿ.ಶಿವಪ್ರಸಾದ್‌ ಮಾತನಾಡಿ, ಕೆಎಎಸ್‌ ಮತ್ತು ಐಎಎಸ್‌ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಸಮಾಜದ ವಿದ್ಯಾರ್ಥಿಗಳಿಗೆ ಬಳಗದ ವತಿಯಿಂದ ಉಚಿತವಾಗಿ ತರಬೇತಿ ನೀಡಲು ನಿರ್ಧರಿಸಲಾಗಿದ್ದು, ಶೀಘ್ರ ಆ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಹಾಸ್ಟೆಲ್‌ ಆರಂಭಿಸಿ: ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ.ಅಣ್ಣೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿನಿಯರು ಉತ್ತಮ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಪಟ್ಟಣದಲ್ಲಿ ಬಾಲಕಿಯರ ವಿದ್ಯಾರ್ಥಿ ನಿಲಯ ಆರಂಭಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಶಾಸಕರು ಸಹಕಾರ ನೀಡಬೇಕು ಎಂದು ಕೋರಿದರು.

Advertisement

ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಮಿರ್ಲೆ ಶ್ರೀನಿವಾಸಗೌಡ, ನವನಗರ ಅರ್ಬನ್‌ ಕೋ-ಆಪರೇಟಿವ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ಬಸಂತ್‌, ತಾಪಂ ಅಧ್ಯಕ್ಷ ಎಂ.ನಾಗರಾಜು, ಕಾಂಗ್ರೆಸ್‌ ಮುಖಂಡ ಬಾಬುಹನುಮಾನ್‌ ಮಾತನಾಡಿದರು. ಸ್ನೇಹ ಬಳಗದ ಅಧ್ಯಕ್ಷ ಸಿ.ಜೆ.ಅರುಣ್‌ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ತಾಲೂಕು ಒಕ್ಕಲಿಗರ ಪತ್ತಿನ ಸಹಕಾರ ಸಂಘಕ್ಕೆ ಚಾಲನೆ ನೀಡಲಾಯಿತು.

ಪತ್ರಕರ್ತರಾದ ಡಿ.ಜೆ.ವಿನಯ್‌, ಶಿವರಾಮು, ವೈದ್ಯರಾದ ಡಾ.ಚಂದ್ರಕಲಾ, ಡಾ.ಭವಾನಿ, ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಟಿ.ಡಿ.ಪ್ರಸಾದ್‌, ತಹಶೀಲ್ದಾರ್‌ ಹುದ್ದೆಗೆ ಆಯ್ಕೆಯಾಗಿರುವ ಹರ್ಷವರ್ಧನ್‌ ಮತ್ತಿತರರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಈ ವೇಳೆ ಎಪಿಎಂಸಿ ಅಧ್ಯಕ್ಷ ಕುಪ್ಪಳ್ಳಿ ಸೋಮಶೇಖರ್‌, ಪುರಸಭೆ ಸದಸ್ಯೆ ಮಂಜುಳಾ ಚಿಕ್ಕವೀರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎಸ್‌.ಯದುಗಿರೀಶ್‌, ಬಳಗದ ಉಪಾಧ್ಯಕ್ಷ ಕೆ.ಆರ್‌.ಹರೀಶ್‌, ಪ್ರಧಾನ ಕಾರ್ಯದರ್ಶಿ ಹೆಚ್‌.ಟಿ.ಮಂಜು, ಖಜಾಂಚಿ ಎ.ಮಂಜೇಗೌಡ, ಸಹ ಕಾರ್ಯದರ್ಶಿ ಎಸ್‌.ಕೆ.ಸುರೇಶ್‌, ನಿರ್ದೇಶಕರಾದ ಟಿ.ಎನ್‌.ಕುಮಾರೇಗೌಡ, ಉಮಾಶಂಕರ್‌, ಹೆಚ್‌.ಜೆ.ರವಿಕುಮಾರ್‌, ಸಿ.ವಿ.ರಾಜಣ್ಣ, ಕೆ.ಇ.ರಾಜೇಶ್‌, ಎ.ಮಂಜಣ್ಣ, ಡಿ.ರುಕ್ಮಿಣಿ, ಸುಕನ್ಯ, ಎಚ್‌.ಟಿ.ಮಂಜುಳಾ, ಬಿ.ಆರ್‌.ಕುಮಾರ್‌, ಟಿ.ಜಿ.ಸತೀಶ್‌, ವೈ.ಕೆ.ಮಹದೇವ್‌ ಇತರರಿದ್ದರು.

ನಾಲ್ಕು ಚುನಾವಣೆಯಲ್ಲೂ ಒಂದು ವರ್ಗ ನನಗೆ ಬೆಂಬಲಿಸಿಲ್ಲ: ಕೆ.ಆರ್‌.ನಗರ ತಾಲೂಕಿನಲ್ಲಿ ಕಳೆದ 17 ವರ್ಷಗಳ ನನ್ನ ಅಧಿಕಾರದ ಅವಧಿಯಲ್ಲಿ ಎಲ್ಲಾ ಸಮಾಜದವರಿಗೂ ಅಗತ್ಯ ಸವಲತ್ತುಗಳನ್ನು ಸಮಾನವಾಗಿ ವಿತರಿಸಿದ್ದೇನೆ. ಎಂದಿಗೂ ನಾನು ಜಾತಿ ರಾಜಕಾರಣ ಮಾಡಿಲ್ಲ. ಆದರೂ ತಾಲೂಕಿನಲ್ಲಿ ಒಂದು ವರ್ಗದವರು ಕಳೆದ ನಾಲ್ಕು ಚುನಾವಣೆಗಳಲ್ಲಿಯೂ ಜಾತಿ ಕಾರಣದಿಂದ ನನಗೆ ಬೆಂಬಲ ನೀಡಿಲ್ಲ ಎಂದು ಮಾಜಿ ಸಚಿವ ಸಾ.ರಾ.ಮಹೇಶ್‌ ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next