ಮೈಸೂರು: “ಲವ್ ಮ್ಯಾರೇಜ್ ಹೆಸರಲ್ಲಿ ಪೋಷಕರ ಕಣ್ಣೀರು ಹಾಕಿಸಬೇಡಿ. ಇತ್ತೀಚಿನ ವರ್ಷಗಳಲ್ಲಿ ಲವ್ ಮ್ಯಾರೇಜ್‌ಗಳ ಆಯಸ್ಸು 3 ತಿಂಗಳು, ಆರು ತಿಂಗಳಿಗೆ ಬಂದು ನಿಂತಿದ್ದು,ವಿಚ್ಛೇದನ ಪ್ರಕರಣಗಳು ಹೆಚ್ಚಾಗಿವೆ. ಇದರಿಂದ ನಿಮ್ಮ ಬದುಕೇ ಸರ್ವ ನಾಶವಾಗಿ ಹೋಗುತ್ತದೆ…’
-ಹೀಗೆ ವಿದ್ಯಾರ್ಥಿನಿಯರಿಗೆ ಬದುಕಿನ ಪಾಠ ಹೇಳಿದ್ದು ಮತ್ಯಾರೂ ಅಲ್ಲ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ.
ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿ ಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೆಲ್ಲ ತೊಟ್ಟಿಲಲ್ಲೇ ತಾಳಿ ಕಟ್ಟುತ್ತಿದ್ದರು. ನಂತರದಲ್ಲಿ 8, 9 ವರ್ಷಕ್ಕೆ ಮದುವೆ ಮಾಡಿಸುತ್ತಿದ್ದರು. ಅಕ್ಕ-ತಂಗಿಯರನ್ನೆಲ್ಲ ಮದುವೆ ಮಾಡಿ ನಾನು ಮದುವೆಯಾಗಿದ್ದು 32ನೇ ವರ್ಷಕ್ಕೆ ಎಂದು ತಮ್ಮ ಜೀವನದ ಘಟನೆಗಳನ್ನು ಸಚಿವರು ಮೆಲಕು ಹಾಕಿದರು.
ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕೂಡಲೇ ಜೀವನವೇ ಮುಗಿದು ಹೋಗುವುದಿಲ್ಲ. ಸೋಲೇ ಗೆಲುವಿನ ಮೆಟ್ಟಿಲು ಎಂದು ತಿಳಿದು ಎದೆಗುಂದದೆ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸೋಲು-ಗೆಲುವಿನ ಮೆಟ್ಟಿಲಿದ್ದ ಹಾಗೆ, ಕೆಲಸ ಮಾಡಿಕೊಂಡು ಓದಿ ಪಾಸಾದವರೂ ಇದ್ದಾರೆ.ಹೀಗಾಗಿ ಒಮ್ಮೆ ಅನುತ್ತೀರ್ಣರಾದ ಮಾತ್ರಕ್ಕೆ ಎದೆಗುಂದಬೇಕಿಲ್ಲ. ಆಗ ಬದುಕಿನ ಜವಾಬ್ದಾರಿ ಗೊತ್ತಾಗುತ್ತದೆ ಎಂದರು.