Advertisement

ಬಾರ್‌ಗೆ ಅನುಮತಿ ಬೇಡ: ನಾಯನಹಳ್ಳಿ ಗ್ರಾಮಸ್ಥರ ಪ್ರತಿಭಟನೆ

06:21 AM Jun 04, 2019 | Lakshmi GovindaRaj |

ಚಿಕ್ಕಬಳ್ಳಾಪುರ: ತಮ್ಮ ಗ್ರಾಮದಲ್ಲಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ನಡೆಸಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಸೋಮವಾರ ತಾಲೂಕಿನ ನಾಯಕನಹಳ್ಳಿಯ ನೂರಾರು ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ಗೆ ಮನವಿ ಸಲ್ಲಿಸಿದರು.

Advertisement

ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್‌.ಮುನಿಕೃಷ್ಣಪ್ಪ ನೇತೃತ್ವದಲ್ಲಿ ಗ್ರಾಮದ ರೈತರು, ಮಹಿಳೆಯರು ಜಮಾಯಿಸಿ ಡೀಸಿ ಕಚೇರಿ ಎದುರು ಪ್ರತಿಭಟನೆ ನಡೆಸುವ ಮೂಲಕ ಗ್ರಾಮದಲ್ಲಿ ಬಾರ್‌ ಅನುಮತಿ ನೀಡಲು ಮುಂದಾಗಿರುವ ಅಬಕಾರಿ ಇಲಾಖೆ ಅಧಿಕಾರಿಗಳ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗಲಾಟೆ, ಅಲೆದಾಟ: ನಾಯನಹಳ್ಳಿ ಗ್ರಾಮದಲ್ಲಿ ಈ ಹಿಂದೆ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಕಾರ್ಯನಿರ್ವಹಿಸಿ ಕುಡುಕರ ಹಾವಳಿ ಹೆಚ್ಚಾಗಿ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಉಂಟಾಗಿದೆ. ಅನೇಕ ಕುಟುಂಬಗಳ ಮಧ್ಯೆ ಗಲಾಟೆಗಳು ಸಂಭವಿಸಿ ಪ್ರಕರಣಗಳು ದಾಖಲಾಗಿ ಕೋರ್ಟ್‌ಗಳಿಗೆ ಅಲೆದಾಡಿದ್ದಾರೆ.

ಈಗ ಮತ್ತೆ ನಾಯನಹಳ್ಳಿ ಕ್ರಾಸ್‌ನಲ್ಲಿ ಬಾರ್‌ ನಡೆಸಲು ಮುಂದಾಗಿದ್ದು, ಇದರಿಂದ ಗ್ರಾಮಸ್ಥರ ನೆಮ್ಮದಿಗೆ ಭಂಗ ತರಲಿದೆ. ರಾಷ್ಟ್ರೀಯ ಹೆದ್ದಾರಿ 234 ರ ಹಾದು ಹೋಗಿರುವ ನಾಯನಹಳ್ಳಿಯಲ್ಲಿ ಬಾರ್‌ ಆರಂಭಗೊಂಡರೆ ಸವಾರರು ಅಲ್ಲಿಯೇ ಮದ್ಯ ಸೇವನೆಗೆ ಮುಂದಾಗುತ್ತಾರೆ. ಇದರಿಂದ ವಾಹನಗಳ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತವೆ. ಆದ್ದರಿಂದ ಜಿಲ್ಲಾಡಳಿತ ಗ್ರಾಮದಲ್ಲಿ ಬಾರ್‌ ಆರಂಭಕ್ಕೆ ಅನುಮತಿ ನೀಡಬಾರದೆಂದು ಪ್ರತಿಭಟನಾನಿರತ ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.

ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್‌.ಮುನಿಕೃಷ್ಣಪ್ಪ ಮಾತನಾಡಿ, ಅಬಕಾರಿ ಇಲಾಖೆ ಅಧಿಕಾರಿಗಳು ಲಿಕ್ಕರ್‌ ಮಾಫಿಯಗೆ ಮಣಿದು ಬಾರ್‌ ಆರಂಭಕ್ಕೆ ಅನುಮತಿ ನೀಡಲು ಮುಂದಾಗಿರುವುದರಿಂದ ಗ್ರಾಮದ ಬಡ ಹಾಗೂ ಮಧ್ಯಮ ವರ್ಗದ ಜನತೆ ಬೀದಿಪಾಲಾಗಲಿದ್ದಾರೆ ಎಂದರು.

Advertisement

ಬಾರ್‌ ಸ್ಥಾಪನೆ ಆಗುತ್ತಿರುವ ಸ್ಥಳದಲ್ಲಿಯೇ ಬಸ್‌ ನಿಲ್ದಾಣ, ಶುದ್ಧ ಕುಡಿವ ನೀರಿನ ಘಟಕ, ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆ ಇರುವುದರಿಂದ ಬಾರ್‌ ಸ್ಥಾಪನೆ ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು.

ಗ್ರಾಪಂ ಸದಸ್ಯರಾದ ನವೀನ್‌ ಕುಮಾರ್‌, ಗ್ರಾಮದ ಎಂಪಿಸಿಎಸ್‌ ಮಾಜಿ ಅಧ್ಯಕ್ಷರುಗಳಾದ ಪಿ,ನಾರಾಯಣಸ್ವಾಮಿ, ವೆಂಕಟೇಶ್‌, ಗ್ರಾಮಸ್ಥರಾದ ನರಸಿಂಹಪ್ಪ, ಸಿ.ಕೃಷ್ಣಮೂರ್ತಿ, ಅನಿಲ್‌ ಕುಮಾರ್‌, ಶ್ರೀನಿವಾಸರೆಡ್ಡಿ, ಮಂಜುನಾಥ, ರಾಮಕೃಷ್ಣಪ್ಪ, ಚಂದ್ರಪ್ಪ, ಲಕ್ಷ್ಮೀನಾರಾಯಣಪ್ಪ, ನಾರಾಯಣಸ್ವಾಮಿ ಸೇರಿದಂತೆ ಗ್ರಾಮದ 60 ಕ್ಕೂ ಹೆಚ್ಚು ರೈತರು, ಮಹಿಳೆಯರು, ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಬಾರ್‌ ಆರಂಭಕ್ಕೆ ಅನುಮತಿ ನೀಡಿರುವುದು ಖಂಡನೀಯ. ಅಬಕಾರಿ ಇಲಾಖೆ ಅಧಿಕಾರಿಗಳು ಪರವಾನಗೆಯನ್ನು ರದ್ದುಗೊಳಿಸದಿದ್ದರೆ ನಾಯನಹಳ್ಳಿ ಗ್ರಾಮದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸುತ್ತೇವೆ.
-ಪಿ.ನಾರಾಯಣಸ್ವಾಮಿ, ಗ್ರಾಮದ ಹಿರಿಯ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next