Advertisement

ಗಣಿಗಾರಿಕೆಯಿಂದ ಪರಿಸರಕ್ಕೆ ಆಗದಿರಲಿ ಧಕ್ಕೆ

06:00 AM Feb 15, 2019 | Team Udayavani |

ಕಲಬುರಗಿ: ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯಲ್ಲಿ ಅತಿ ಹೆಚ್ಚು ಗಣಿಗಾರಿಕೆಗೆ ಪರವಾನಗಿ ನೀಡಲಾಗಿದೆ. ಗಣಿ ಗುತ್ತಿಗೆ ಪಡೆದವರು ಪರಿಸರ ಹಾಳು ಮಾಡದಂತೆ ಎಚ್ಚರಿಕೆ ವಹಿಸಿ ಗಣಿಗಾರಿಕೆಯಲ್ಲಿ ತೊಡಗಬೇಕಾದ ಅವಶ್ಯಕತೆಯಿದೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಹೇಳಿದರು.

Advertisement

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಜಿಲ್ಲಾಧಿಕಾರಿ ಕಾರ್ಯಾಲಯ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಗಣಿ ಗುತ್ತಿಗೆ ಪಡೆದವರಿಗೆ ಗಣಿ-ಭೂವಿಜ್ಞಾನ ಇಲಾಖೆ ಕಾಯ್ದೆ ಮತ್ತು ನಿಯಮ, ಗಣಿ ಸುರಕ್ಷತೆ ವಿಧಾನ, ಸ್ಫೋಟಕ ವಿಧಾನ ಮತ್ತು ಪರಿಸರ ಸಂರಕ್ಷಣೆ ಕುರಿತು ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಸಮನಾಗಿ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕಲಬುರಗಿ ವಿಭಾಗದಲ್ಲಿ ಹೆಚ್‌.ಕೆ.ಆರ್‌.ಡಿ.ಬಿ.ಯಿಂದ ಭೃಹತ್‌ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದು, ಅವುಗಳಿಗೆ ಅವಶ್ಯಕವಿರುವ ಮರಳು, ಜೆಲ್ಲಿ, ಕಲ್ಲುಗಳಂತಹ ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ. 

ಗಣಿ ಗುತ್ತಿಗೆ ಪಡೆದವರು ಗಣಿ ಮತ್ತು ಭೂ ವಿಜ್ಞಾನಗಳ ಅಧಿನಿಯಮ ಪರಿಪಾಲಿಸಬೇಕು. ಈ ಹಿಂದೆ ಪರಿಸರಕ್ಕೆ ಸಂಬಂಧಪಟ್ಟ ಕಾಳಜಿ ಕಡಿಮೆ ಇತ್ತು. ಇತ್ತೀಚೆಯ ಎರಡು ದಶಕಗಳಿಂದ ಪರಿಸರ ಜಾಗೃತಿ ಹೆಚ್ಚಾಗಿದ್ದು, ವಿವಿಧ ಸಂಸ್ಥೆಗಳು ಪರಿಸರ ಸಂರಕ್ಷಣೆಯಲ್ಲಿ ತೊಡಗಿವೆ. ರಾಷ್ಟ್ರೀಯ ಹಸಿರು ಟ್ರಿಬುನಲ್‌ ಸಹಿತ ಪರಿಸರಕ್ಕೆ ಹಾನಿ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತಿದೆ ಎಂದರು. 

ಜಿಲ್ಲೆಯಲ್ಲಿ 16 ಬೃಹತ್‌ ಮತ್ತು 180 ಸಣ್ಣ ಗಣಿ ಗುತ್ತಿಗೆಗೆ ಪರವಾನಗಿ ನೀಡಲಾಗಿದೆ. ಗಣಿ ಗುತ್ತಿಗೆ ಪಡೆದವರು ಗಣಿ ನಿಯಮ ಪಾಲಿಸದಿದ್ದಲ್ಲಿ ಗಣಿ ನಿಯಮಗಳ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ವಹಿಸಲಾಗುವುದು. ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ಸೂಕ್ತ ರೀತಿಯಲ್ಲಿ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ನ್ಯಾಯಯುತವಾಗಿ ಮರಳು ಗಣಿಗಾರಿಕೆ ಮಾಡುವವರಿಗೆ ಯಾವುದೇ ತೊಂದರೆಯಿಲ್ಲ.

Advertisement

ಅಕ್ರಮ ಮರಳು ಸಾಗಾಣಿಕೆ ತಡೆಯಲು ಕಟ್ಟಿಸಂಗಾವಿ ಹತ್ತಿರ ಚೆಕ್‌ಪೋಸ್ಟ್‌ ನಿರ್ಮಿಸಲಾಗಿದ್ದು, ದೇವದುರ್ಗ, ಶಹಾಪುರ ಕಡೆಗಳಿಂದ ಜಿಲ್ಲೆಗೆ ಆಗಮಿಸುವ ಮರಳಿನ ಮೇಲೆ ನಿಗಾ ಇಡಲಾಗಿದೆ ಎಂದರು.

ಬಳ್ಳಾರಿ ವಲಯದ ಮೈನ್ಸ್‌ ಸೇಫ್ಟ ನಿರ್ದೇಶಕ ಮನೀಶ ಮುರುಕುಟೆ ಮಾತನಾಡಿ, ಗಣಿ ವ್ಯವಸ್ಥಾಪಕರು ಗಣಿಯಲ್ಲಿ ಸಣ್ಣ ಪ್ರಮಾಣದ  ಸ್ಪೋಟಕ ಬಳಸಲು ಸಶಕ್ತರಾಗಿರುತ್ತಾರೆ. 33 ಮಿಲಿ ಮೀಟರ್‌ ವ್ಯಾಸ ಹಾಗೂ ಎರಡು ಮೀಟರ್‌ಗಿಂತ ಹೆಚ್ಚಿನ ಆಳದಲ್ಲಿ ಸ್ಪೋಟಕ ಬಳಸುವವರು ಡಿ.ಜಿ.ಎಂ. ಎಸ್‌.ದಿಂದ ವಿಶೇಷ ಪರವಾನಗಿ ಪಡೆಯಬೇಕು. ಪರವಾನಗಿ ಇಲ್ಲದೇ ಸ್ಪೋಟಕ ಬಳಸುವುದು ಗಂಭೀರ ಅಪರಾಧವಾಗಿದೆ ಎಂದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಪಿ. ರೇಣುಕಾದೇವಿ, ಭೂ ವಿಜ್ಞಾನಿಗಳು, ಗಣಿ ಗುತ್ತಿಗೆ ಪಡೆದವರು ಹಾಜರಿದ್ದರು. ಪರವಾನಗಿ ಕಡ್ಡಾಯ ದೇಶದಲ್ಲಿ 89 ತರಹದ ಖನಿಜಗಳ ಗಣಿಗಾರಿಕೆ ನಡೆಯುತ್ತಿದೆ. ದೇಶದ ಒಟ್ಟು ದೇಶಿಯ ಉತ್ಪಾದನೆಯ ಶೇ. 2.5ರಷ್ಟು ಭಾಗ ಖನಿಜ ಗಣಿಗಾರಿಕೆಯದ್ದಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಬಳ್ಳಾರಿಯ ಡಿ.ಜಿ.ಎಂ.ಎಸ್‌. ಕಚೇರಿಯಿಂದ 13 ಲೈಮ್‌ ಸ್ಟೋನ್‌ ಹಾಗೂ ಎರಡು ಸ್ಟೋನ್‌ ಪಾಲಿಶ್‌ ಗಣಿಗಾರಿಕೆಗೆ ಪರವಾನಗಿ ನೀಡಲಾಗಿದೆ. ಪರವಾನಗಿ ಪಡೆದ ಗಣಿಗಳ ಮೇಲೆ ಡಿ.ಜಿ.ಎಂ.ಎಸ್‌. ಕಚೇರಿ ಕಾಲಕಾಲಕ್ಕೆ ತಪಾಸಣೆ ಕೈಗೊಂಡು ಪರಿಶೀಲಿಸುತ್ತದೆ. ಪರವಾನಗಿ ಪಡೆಯದ ಗಣಿಗಳ ಮೇಲೆ ರಾಜ್ಯ ಸರ್ಕಾರ ರಾಜ್ಯದ ಖನಿಜ ಕಳುವು ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುತ್ತದೆ. ಕಾರಣ ಗಣಿಗಾರಿಕೆಯಲ್ಲಿ ತೊಡಗಿರುವ ಎಲ್ಲರೂ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು.  ಮನೀಶ ಮುರುಕುಟೆ, ಬಳ್ಳಾರಿ ವಲಯದ ಮೈನ್ಸ್‌ ಸೇಫ್ಟಿ ನಿರ್ದೇಶಕ 

Advertisement

Udayavani is now on Telegram. Click here to join our channel and stay updated with the latest news.

Next