Advertisement

ನೆರೆ ರಾಜ್ಯದ ಕಿತಾಪತಿಗೆ ಅವಕಾಶ ಕೊಡಬೇಡಿ

01:10 AM Apr 06, 2022 | Team Udayavani |

ಬೆಂಗಳೂರು ಅಥವಾ ಹೈದರಾಬಾದ್‌- ಈ ಎರಡು ನಗರಗಳಲ್ಲಿ ಯಾವುದು ಉತ್ತಮ? ಈ ಪ್ರಶ್ನೆಯೊಂದು ಧುತ್ತನೇ ಎದ್ದಿದೆ. ಮಾ.30 ರಂದು ಬೆಂಗಳೂರಿನ ಸ್ಟಾರ್ಟ್‌ಅಪ್‌ವೊಂದರ ಸಿಇಒ ಬೆಂಗಳೂರಿನ ಮೂಲಸೌಕರ್ಯವನ್ನು ಟೀಕಿಸಿ ಮಾಡಿದ್ದ ಟ್ವೀಟ್‌ ಒಂದು ಎಲ್ಲ ವಾದ ವಿವಾದಕ್ಕೂ ಹೇತುವಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ನೆರೆಯ ತೆಲಂಗಾಣದ ಐಟಿ ಮತ್ತು ಕೈಗಾರಿಕಾ ಸಚಿವ ಕೆ.ಟಿ.ರಾಮರಾವ್‌, ಪ್ಯಾಕ್‌ ಮಾಡಿಕೊಂಡು ಹೈದರಾಬಾದ್‌ಗೆ ಬನ್ನಿ ಎಂಬ ಆಹ್ವಾನ ನೀಡಿರುವುದು ಭಾರೀ ಚರ್ಚೆಗೂ ಕಾರಣವಾಗಿದೆ.

Advertisement

ತೆಲಂಗಾಣದ ಸಚಿವರೊಬ್ಬರು ನಮ್ಮ ರಾಜ್ಯದ ಪರಿಸ್ಥಿತಿಯ ದುರ್ಬಳಕೆ ಮಾಡಿಕೊಳ್ಳಲು ಮೊದಲಿಗೆ ನಾವು ಅವಕಾಶ ನೀಡಬಾರದಿತ್ತು. ಹೈದರಾಬಾದ್‌ಗೆ ಬನ್ನಿ ಎನ್ನುವಷ್ಟು ಬೆಂಗಳೂರಿನ ಪರಿಸ್ಥಿತಿ ಹದಗೆಟ್ಟಿಲ್ಲ ಎನ್ನುವುದು ನಿಜವೇ. ಐಟಿ ಮಾತ್ರವಲ್ಲ, ಎಲ್ಲ ರೀತಿಯ ಕೈಗಾರಿಕೆಗಳಿಗೆ ಸರಕಾರಗಳು ಲಾಗಾಯ್ತಿನಿಂದ ಸೂಕ್ತ ಸೌಲಭ್ಯವನ್ನು ನೀಡಿದೆ. ಉದ್ಯಮಗಳಿಗೆ ಕರ್ನಾಟಕ ಪ್ರಶಸ್ತ ಎನ್ನುವುದು ಅನುಭವದ ಮಾತು. ಸಾಮಾನ್ಯವಾಗಿ ನಮ್ಮ ರಾಜ್ಯಗಳಿಗೆ ಬನ್ನಿ ಎಂದು ಆಹ್ವಾನ ನೀಡುವುದು ಹಾಗೂ ನೆರೆಯ ರಾಜ್ಯಗಳಿಗಿಂತ ಉತ್ತಮ ಸೌಲಭ್ಯ ನೀಡುತ್ತೇವೆ ಎನ್ನುವುದು ಯಾವುದೇ ರಾಜ್ಯಗಳ ಸಹಜವಾದ ಕೋರಿಕೆ ಹಾಗೂ ಮನವೊಲಿಸುವ ಪ್ರಕ್ರಿಯೆ. ಆದರೆ, ಇಲ್ಲಿ ನಡೆದಿರುವುದೇ ಬೇರೆ. ಬೆಂಗಳೂರನ್ನು ಬಿಟ್ಟು ಬನ್ನಿ ಎಂದು ಹೇಳಿರುವುದು ಒಂದು ರೀತಿಯಲ್ಲಿ ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದರೂ ತಪ್ಪಲ್ಲ. ಯಾವುದೇ ರಾಜ್ಯಗಳ ನಡುವೆ “ಆರೋಗ್ಯಕರ ಸ್ಪರ್ಧೆ’ ಇರಬೇಕಾಗಿರುವುದು ಅಗತ್ಯ ಮತ್ತು ಅನಿವಾರ್ಯ.

ತೆಲಂಗಾಣ ಮತ್ತು ಕರ್ನಾಟಕದ ನಡುವಿನ ಈ “ಸ್ಪರ್ಧೆ’ಯನ್ನು “ಆರೋಗ್ಯಕರ’ ಎಂದೇ ಭಾವಿಸಿಕೊಳ್ಳೋಣ. ಆದರೆ, ಇದಕ್ಕೆ ನಮ್ಮ ರಾಜ್ಯದಲ್ಲಿ  ಸಿಕ್ಕಿರುವ ಪ್ರತಿಕ್ರಿಯೆ ಮಾತ್ರ ತೀರಾ ನಿರಾಶದಾಯಕ. ತೆಲಂಗಾಣ ಸರಕಾರ ಇಂಥದ್ದೊಂದು ಆಹ್ವಾನ ನೀಡಿದ ನಾಲ್ಕು ದಿನಗಳ ಅನಂತರ ನಮ್ಮ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿದ್ದಾರೆ. ಇದರಲ್ಲೇ ಸಿಲಿಕಾನ್‌ ಸಿಟಿ  ಎಂಬ ನಮ್ಮ ಹೆಗ್ಗಳಿಕೆಯನ್ನು ಉಳಿಸಿಕೊಳ್ಳುವಲ್ಲಿ ನಮ್ಮ ರಾಜ್ಯ ಸರಕಾರದ ಉತ್ಸುಕತೆಯನ್ನು ನಾವು ಅಳೆಯಬಹುದು. ಆದರೆ ಅನಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಕರ್ನಾಟಕ ಬಿಜೆಪಿ ಪರಸ್ಪರ ಕಾಲೆಳೆಯುತ್ತ ಕೂತಿರುವುದು ಶೋಚನೀಯ. ಇಂಥ ವಿಚಾರದಲ್ಲಿ ರಾಜಕೀಯಕ್ಕೆ ಅವಕಾಶ ಕೊಡುತ್ತಾ ಕೂತರೆ, ನೆರೆ ರಾಜ್ಯದವರಿಗೆ ಬೆಳ್ಳಿಯ ಬಟ್ಟಲಲ್ಲಿ ಅವಕಾಶ ಕೊಟ್ಟ ಹಾಗೆ ಎನ್ನುವುದನ್ನು ಮರೆಯಬಾರದು.

ನಾವಿಲ್ಲಿ ಮಾಡಬೇಕಿರುವುದು ನೆರೆ ರಾಜ್ಯದವರು ನಮ್ಮ ದೌರ್ಬಲ್ಯವನ್ನು ಬಳಸಿಕೊಳ್ಳದ ಹಾಗೆ ನೋಡಿಕೊಳ್ಳುವುದು. ಉದ್ಯಮಿಗಳು ಮೂಲಸೌಕರ್ಯವನ್ನು ಬಯಸುವುದು ತಪ್ಪೇನಿಲ್ಲ. ಹಾಗೊಂದು ವೇಳೆ ಅವರಿಂದ ಬೇಡಿಕೆ, ಆಗ್ರಹ ವ್ಯಕ್ತವಾಯಿತು ಎಂದರೆ ಸರಕಾರ ಆ ಬಗ್ಗೆ ಚಿಂತಿಸುವುದು ಒಳಿತು. ಬೆಂಗಳೂರಿನ ರಸ್ತೆ ಕುರಿತು ಹೈಕೋರ್ಟ್‌ ಛೀಮಾರಿ ಹಾಕಿರುವುದನ್ನು ಜನ ಮರೆತಿಲ್ಲ.

ಇತ್ತೀಚೆಗಿನ ವಿದ್ಯಮಾನಗಳು ಕ್ಷುಲ್ಲಕ ಸಂಗತಿಗಳ ಸುತ್ತಲೇ ಸುತ್ತುತ್ತಿದ್ದು, ಅಭಿವೃದ್ಧಿ ಬಗ್ಗೆ ಚರ್ಚೆ ಕ್ಷೀಣಿಸಿರುವುದು ಸುಳ್ಳೇನಲ್ಲ. ಈಚೆಗೆ ಬಯೋಕಾನ್‌ನ ಕಿರಣ್‌ ಮಜುಮ್‌ದಾರ್‌ಶಾ ಮಾಡಿರುವ ಟ್ವೀಟಿನಲ್ಲೂ ಇಂಥದ್ದೊಂದು ಅಸಮಾಧಾನ ಇತ್ತು. ಏನೇ ಇದ್ದರೂ ಅಭಿವೃದ್ಧಿ ವಿಚಾರದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಜತೆಗೂಡಿದರೆ ಸಮೃದ್ಧ ಕರ್ನಾಟಕ ಸಾಧ್ಯ. ಪರಸ್ಪರ ಕಾಲೆಳೆಯುವುದರಿಂದ ಪ್ರಗತಿ ಅಸಾಧ್ಯ. ಚುನಾವಣ ಸಮಯದಲ್ಲಿ  ಆರೋಪ-ಪ್ರತ್ಯಾರೋಪಗಳಿಂದ ರಾಜ್ಯ ಬೆತ್ತಲಾಗದಿರಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next