ಆಳಂದ: ಸಕಾಲದಲ್ಲಿ ಮಳೆ ಬಾರದೆ ಬಿತ್ತಿದ ಬೆಳೆ ಕಳೆದುಕೊಂಡ ರೈತರು ನಿರಾಶರಾಗಿ ಕೂಲಿ ಕೆಲಸಕ್ಕೆ ಗ್ರಾಮ ತೊರೆಯಬಾರದು. ಉದ್ಯೋಗ ಖಾತ್ರಿ ಯೋಜನೆಯಡಿ ನೀಡುವ ಕೂಲಿ ಕೆಲಸದ ಲಾಭ ಪಡೆಯಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಾಬುಗೌಡ ಪಾಟೀಲ ಕಾರ್ಮಿಕರಲ್ಲಿ ಮನವಿ ಮಾಡಿದರು.
ತಾಲೂಕಿನ ಮಾಡಿಯಾಳ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ನಿರ್ವಹಣೆ ಉಸ್ತುವಾರಿ ವಹಿಸಿ ಅವರು ಮಾತನಾಡಿದರು. ಕೂಲಿ ಕೆಲಸಕ್ಕಾಗಿ ಪುಣೆ, ಮುಂಬೈ ಹಾಗೂ ಇನ್ನಿತರ ವಾಣಿಜ್ಯ ನಗರಗಳಿಗೆ ವಲಸೆ ಹೋಗುವುದು ಬೇಡ, ಗ್ರಾಮದಲ್ಲಿ ಇರುವ ಸರ್ಕಾರದ ಕೆಲಸದಲ್ಲಿ ತೊಡಗಿ ಅನುಕೂಲ ಮಾಡಿಕೊಳ್ಳಿ. ಇಟ್ಟಿಗೆ ಕೆಲಸಕ್ಕಾಗಿ ಕುಟುಂಬ ಸಮೇತ ಕೆಲವರು ವಲಸೆ ಹೋಗುತ್ತಾರೆ.
ಹೀಗಾಗಬಾರದು ಎಂದೇ ರಾಜ್ಯ ಸರ್ಕಾರ ವರ್ಷದಲ್ಲಿ ಒಂದು ಕುಟುಂಬಕ್ಕೆ ನೂರು ದಿನಗಳ ಕಾಲ ಕೂಲಿ ಕೆಲಸ ನೀಡುತ್ತದೆ. ಹೆಣ್ಣು ಗಂಡು ಇಬ್ಬರಿಗೂ ಸಮಾನ ವೇತನ ನೀಡಲಾಗುವುದು. ಕಾಮಗಾರಿ ಮುಗಿದ ವಾರದಲ್ಲಿ ಆಯ ಕಾರ್ಮಿಕರ ಖಾತೆಗೆ ಕೂಲಿ ಹಣ ಜಮಾ ಮಾಡಲಾಗುವುದು. ಆತ್ಮವಿಶ್ವಾಸದೊಂದಿಗೆ ಕಾಮಗಾರಿ ನಿರ್ವಹಿಸಲು ಮುಂದಾಗಿ ಎಂದು ಹೇಳಿದರು.
ಗ್ರಾಮದಲ್ಲಿ 1288 ಜನ ಕೂಲಿ ತಮ್ಮ ಹೆಸರು ನೊಂದಾಯಿಸಿದ್ದಾರೆ. ಸದ್ಯ 300 ಜನರು ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ತೊಡಗಿದ್ದಾರೆ. ಇದಕ್ಕೆ ಗ್ರಾಪಂ ಸದಸ್ಯರು, ತಾಪಂ ಸದಸ್ಯರು, ಗ್ರಾಮಸ್ಥರ ಸಂಪೂರ್ಣ ಸಹಕಾರ ದೊರೆಯುತ್ತಿದೆ. 5ರಿಂದ 6 ಸಾವಿರ ಮಾನವ ದಿನಗಳನ್ನು ಪೂರೈಸಲು ಚಿಂತನೆ ನಡೆದಿದೆ. ಆದರೆ, ಈಗಾಗಲೇ ಅರ್ಧ ವರ್ಷ ಪೂರ್ಣಗೊಂಡಿದ್ದರಿಂದ ಅವಕಾಶ ಕಡಿಮೆ ಇದೆ. ಇದ್ದ ಅವಧಿ ಯಲ್ಲಿ ಎಲ್ಲ ಬಡ ಕಾರ್ಮಿಕರಿಗೆ ಕೆಲಸ ದೊರಕಿಸಿಕೊಡಲು ಪ್ರಯತ್ನಿಸಲಾಗವುದು ಎಂದರು.
ಗ್ರಾಪಂ ಅಧ್ಯಕ್ಷ ಪ್ರಭಾಕರ ರಾಮಜಿ, ರಾಜ್ಯ ಸರ್ಕಾರ ನೂರು ದಿನಗಳ ಬದಲಿಗೆ ಒಂದು ಕುಟುಂಬಕ್ಕೆ 150 ದಿನಗಳ ಕಾಲ ಕೂಲಿ ಕೆಲಸ ನೀಡಬೇಕು. ಇದರಿಂದ ಗ್ರಾಮಸ್ಥರ ಗುಳೆ ತಡೆಯಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಪಂ ಸದಸ್ಯ ಪ್ರಭು ಸರಸಂಬಿ, ಗ್ರಾಪಂ ಸದಸ್ಯರಾದ ಸೈಫಾನ್ ಶೇಖ, ಸಿದ್ದಣ್ಣ ಬಂಡಿ, ರೇವಣಸಿದ್ದ ಖೈನ, ಪ್ರಭು ಮದರಿ ಹಾಗೂ ಪ್ರಮುಖರಾದ ಇಸ್ರು ಚವ್ಹಾಣ, ಪ್ರಭಾಕರ ಬೆಳಮಗಿ, ದತ್ತಾತ್ರೆಯ ಶಿರೂರ, ಬಾಬು ಮಾಶಾಳ ಹಾಜರಿದ್ದರು.