Advertisement

ಅನ್ನದಾತರೇ ಹಳ್ಳಿಗಳ ಬಿಡಬೇಡಿ

12:58 AM Feb 24, 2020 | Team Udayavani |

ಬೆಂಗಳೂರು: ದೇಶಕ್ಕೆ ಅನ್ನ ನೀಡುವ ರೈತರು ಯಾವುದೇ ಕಾರಣಕ್ಕೂ ಹಳ್ಳಿ ಬಿಟ್ಟು ನಗರಕ್ಕೆ ಬರಬಾರದು ಎಂದು ನಟ ಶಿವರಾಜ್‌ಕುಮಾರ್‌ ರೈತರಲ್ಲಿ ಮನವಿ ಮಾಡಿದರು. ಕನಕಪುರ ರಸ್ತೆಯ ಆರ್ಟ್‌ ಆಫ್ ಲಿವಿಂಗ್‌ನಲ್ಲಿ ಭಾನುವಾರ ಕೃಷಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

Advertisement

ಭೂ ತಾಯಿ ಕೂಡ ಹೆತ್ತ ತಾಯಿ ಇದ್ದಂತೆ. ಆ ತಾಯಿಯನ್ನು ನಂಬಿ ಹಳ್ಳಿಯಲ್ಲೇ ನೆಲೆ ನಿಂತು ದುಡಿಮೆ ಮಾಡಿ ಎಂದು ಮನವಿ ಮಾಡಿದರು. ಹಸಿದವರಿಗೆ ತುತ್ತು ನೀಡುತ್ತಿ ರುವ ಕೈಗಳು ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದ ಕಡೆಗೆ ಮುಖ ಮಾಡುತ್ತಿವೆ. ಹಳ್ಳಿಯಲ್ಲೇ ಸುಖ ಜೀವನವಿದ್ದು ಹಳ್ಳಿಯತ್ತ ಮುಖ ಮಾಡಿ ಎಂದರು.

ರೈತರು ನಗರ ಪ್ರದೇಶಕ್ಕೆ ಬರಬೇಡಿ ಎಂದು ನಾನೂ ಹೇಳುವುದಿಲ್ಲ. ಬಂದರೂ ಒಂದೆರಡು ದಿನ ಇಲ್ಲಿದ್ದು ಮತ್ತೆ ಹಳ್ಳಿಗಳಿಗೆ ಮರಳಿರಿ. ಅನ್ನ ನೀಡವ ಕೈಗಳು ಯಾವತ್ತೂ ಹಳ್ಳಿಯಲ್ಲಿರಬೇಕು ಎಂದರು. ಶಾಸಕ ರವಿಸುಬ್ರಹ್ಮಣ್ಯ ಮಾತನಾಡಿ, ಮನುಷ್ಯ ತನ್ನ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ತೋರುತ್ತಾನೆ.

ಆದರೆ ಅನ್ನ ನೀಡುವ ಭೂತಾಯಿ ಒಡಲಿಗೆ ರಾಸಾಯನಿಕ ಸಿಂಪಡಿಸುತ್ತಾನೆ. ಮಣ್ಣಿನಲ್ಲೂ ಅಸಂಖ್ಯಾತ ಜೀವಿಗಳಿವೆ. ಅವುಗಳಿಂದಲೂ ಪೋಷಕಾಂಶಗಳು ಇವೆ ಎನ್ನುವುದನ್ನು ಮನುಷ್ಯ ಸಂಕುಲ ಮರೆಯಬಾರದು ಎಂದರು. ಇತ್ತೀಚಿನ ದಿನಗಳಲ್ಲಿ ಅಧಿಕ ಬೆಳೆ ಬೆಳೆಯುವ ಉದ್ದೇಶದಿಂದ ರಾಸಾಯನಿಕ ಸಿಂಪಡಣೆ ಮಾಡುವ ಸಂಸ್ಕೃತಿ ಹೆಚ್ಚಾಗಿದೆ.

ಇದರಿಂದ ಭೂಮಿ ಕೂಡ ಕಲುಷಿತೊಳ್ಳುತ್ತದೆ. ಈ ನಿಟ್ಟಿನಲ್ಲಿ ಎಚ್ಚರಗೊಳ್ಳಬೇಕಾಗಿದೆ ಎಂದು ತಿಳಿಸಿದರು. ಮಣ್ಣಿನ ಸತ್ವದ ಬಗ್ಗೆ ಮಾಹಿತಿ ನೀಡಿದ ಮಣ್ಣು ತಜ್ಞ ಸಾಯಿಲ್‌ ವಾಸು, ಸಕಲ ಜೀವ ರಾಶಿಗಳು ಮಣ್ಣನಲ್ಲಿವೆ. ಅವುಗಳು ಭೂಮಿಗೆ ಹಲವು ರೀತಿಯಲ್ಲಿ ನೆರವಾಗುತ್ತಿವೆ.

Advertisement

ಅವುಗಳಿಗೆ ವಿಷ ಉಣಿಸುವ ಕೆಲಸ ಸಲ್ಲದು. ಜಗತ್ತಿನ ಏಳು-ಬೀಳುಗಳು ಮಣ್ಣಿನ ಮೇಲೆ ನಿಂತಿದೆ. ಮಣ್ಣಿನೊಂದಿಗೆ ಮನುಷ್ಯ ಅವಿನಾಭಾವ ಸಂಬಂಧ ಹೊಂದಿದ್ದಾನೆ. ಮಣ್ಣು ಸಂಜೀವಿನಿಯಾಗಿದ್ದು ಮತ್ತೂಂದು ಜೀವಕ್ಕೆ ಹುಟ್ಟುನೀಡುವ ತಾಕತ್ತಿದೆ ಎಂದು ತಿಳಿಸಿದರು. ಬೆಸ್ಟ್‌ ಯೂನಿವರ್ಸಿಟಿಯ ಕುಲಪತಿ ಡಾ.ಅಶೋಕ್‌ ಆಲೂರು, ಡಾ.ಪ್ರಭಾಕರ್‌ ರಾವ್‌, ಎಸ್‌.ಆರ್‌.ವೆಂಕಟೇಶ್‌ ಇತರರಿದ್ದರು.

ಸೂಕ್ತ ಬೆಂಬಲ ಬೆಲೆ ಅಗತ್ಯ: ಭಾರತದ ರೈತರಿಗೆ ಸಾವಯವ ಕೃಷಿ ಪದ್ಧತಿ ಹೊಸದೇನು ಅಲ್ಲ. ಹಲವು ವರ್ಷಗಳ ಹಿಂದೆ ಈ ಪದ್ಧತಿ ಅಳವಡಿಕೆಯಲ್ಲಿತ್ತು. ನಮ್ಮ ರೈತರು ಹೆಚ್ಚು ಸಾವಯವ ಕೃಷಿ ಪದ್ಧತಿ ಅಳವಡಿಸಿ ಕೊಳ್ಳುವುದಕ್ಕೆ ಸಿದ್ಧರಿದ್ದಾರೆ. ಆದರೆ, ಸೂಕ್ತ ಬೆಲೆ ಮತ್ತು ಮಾರುಕಟ್ಟೆ ಸೌಲಭ್ಯ ಲಭ್ಯವಾಗುತ್ತಿಲ್ಲ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದರು.

ವಿದೇಶಗಳಿಂದ ನಾವು ಚಿನ್ನವನ್ನು ಆಮದು ಮಾಡಬಹುದು ಆದರೆ ಭೂಮಿಯನ್ನು ಅಲ್ಲ. ದೊಡ್ಡ ದೊಡ್ಡ ಬಂಡವಾಳ ಶಾಹಿಗಳು ರೈತರ ಭೂಮಿಯನ್ನು ಅಧಿಕ ಬೆಲೆಕೊಟ್ಟು ಖರೀದಿಗೆ ಮುಂದಾಗುತ್ತಿವೆ. ಯಾವುದೇ ಕಾರಣಕ್ಕೂ ರೈತರು ಭೂಮಿ ಮಾರಾಟ ಮಾಡಬಾರದು.
-ರವಿಸುಬ್ರಹ್ಮಣ್ಯ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next