ಬೆಂಗಳೂರು: ಧಾರ್ಮಿಕತೆಯನ್ನೇ ಮುಖ್ಯವಾಗಿಸಿಕೊಂಡು ಚಟುವಟಿಕೆ ನಡೆಸುವ ರಾಜಕೀಯ ಪಕ್ಷಗಳ ಮೇಲೆ ಸರ್ಕಾರ ನಿಷೇಧ ಹೇರಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಆಗ್ರಹಿಸಿದ್ದಾರೆ.
ಶಾಸಕರ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ “ಕವಲು ದಾರಿಯಲ್ಲಿ ಪ್ರಜಾಪ್ರಭುತ್ವ’ ಕುರಿತ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಎಲ್ಲರೂ ಸಹಬಾಳ್ವೆಯಿಂದ ಬದುಕಬೇಕು ಎಂದು ರಾಜ್ಯಾಂಗ ಹೇಳುತ್ತದೆ. ಆದರೆ ಧರ್ಮದ ಹೆಸರಿನಲ್ಲಿ ದೇಶ ಒಡೆಯುವ ಕೆಲಸ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ದಿನೇ ದಿನೆ ಅಸಹನೆ ಹಾಗೂ ಮನುಷ್ಯರನ್ನು ಕೊಲ್ಲುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಲ್ಲೆಗಳು ಮೊದಲು ನಿಲ್ಲಬೇಕು ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕರ್ನಾಟದಲ್ಲಿ ಅಧಿಪತ್ಯ ಸ್ಥಾಪಿಸಲು ಹಲವು ದಿನಗಳ ಕಾಲ ಇಲ್ಲಿಯೇ ಮೊಕ್ಕಾ ಹೂಡಿದ್ದರು. ಕರ್ನಾಟ ಗೆದ್ದರೆ ಇಡೀ ದೇಶ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು ಎಂಬುದು ಅವರ ಕನಸಾಗಿತ್ತು. ಆದರೆ ಅವರ ಯೋಜನೆ ಫಲಿಸಲಿಲ್ಲ ಎಂದು ಹೇಳಿದರು.
ಆಗಸ್ಟ್ ಕ್ರಾಂತಿ ಟ್ರಸ್ಟ್‌ನ ಸಂಚಾಲಕ ಮಂಗ್ಳೂರ ವಿಜಯ ಮಾತನಾಡಿ, ಪ್ರಜಾಪ್ರಭುತ್ವ ಇಂದು ಅಪಾಯದಲ್ಲಿದ್ದು, ಇದು ಹೀಗೇ ಮುಂದುವರಿದರೆ ಭವಿಷ್ಯದಲ್ಲಿ ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದರು. ಸ್ವರಾಜ್ ಅಭಿಯಾನದ ಸದಸ್ಯೆ ಪುಷ್ಪಾ, ಮಾಜಿ ಶಾಸಕ ಬಿ.ಆರ್.ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಇಲಿ, ಹೆಗ್ಗಣಗಳ ಬಾಲಕ್ಕೆ ಬಾಂಬ್ ಕಟ್ಟುತ್ತಿದೆ: ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನನಗೆ ಹಿಂಸೆ, ಅಹಿಂಸೆ ಅಂದರೆ ಅರ್ಥವಾಗುತ್ತಿರಲಿಲ್ಲ. ಹೋರಾಟ ಮಾಡಿ ಬ್ರಿಟಿಷರನ್ನು ಭಾರತದಿಂದ ಹೊರಗೆ ಅಟ್ಟಬೇಕು ಎಂಬುವುದೊಂದೇ ನಮ್ಮ ಉದ್ದೇಶವಾಗಿತ್ತು. ಹೀಗಾಗಿ ಕಾಗದ ಪತ್ರಗಳನ್ನು ಸುಡಲು ಪೋಸ್ಟ್ ಬಾಕ್ಸ್‌ನಲ್ಲಿ ಟೈಂ ಬಾಂಬ್ ಇಡುತ್ತಿದ್ದೆ. ಇಲಿ, ಹೆಗ್ಗಣಗಳನ್ನು ಹಿಡಿದು ಅವುಗಳ ಬಾಲಕ್ಕೆ ಟೈಂ ಬಾಂಬ್ ಕಟ್ಟುತ್ತಿದ್ದೆ. ಇವು ಬ್ರಿಟಿಷ್ ಅಧಿಕಾರಿಗಳು ಇದ್ದ ಕಟ್ಟಡದೊಳಕ್ಕೆ ಹೋದ ಕೆಲವೇ ಕ್ಷಣಗಳ ನಂತರ ಬಾಂಬ್ ಸ್ಫೋಟವಾಗುತ್ತಿತ್ತು ಎಂದು ದೊರೆಸ್ವಾಮಿ ಹೋರಾಟದ ದಿನಗಳನ್ನು ನೆನಪಿಸಿಕೊಂಡರು.