Advertisement

ಬೇರೆಯವರ ಹಕ್ಕಿಗೆ ಚ್ಯುತಿ ತರಬೇಡಿ: ಮಾಣಿಕ್ಯ

06:59 AM Feb 14, 2019 | |

ಕಲಬುರಗಿ:ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಸಹಬಾಳ್ವೆಯ ಜೀವನ ನಮ್ಮದಾಗಿರಬೇಕಾದರೆ ನೆಲದ ಕಾನೂನನ್ನು ಗೌರವಿಸುವುದು ಮತ್ತು ಹಕ್ಕು-ಕರ್ತವ್ಯ ಪಾಲಿಸುವುದು ಅವಶ್ಯಕ. ಅಲ್ಲದೆ ಬೇರೆಯವರ ಹಕ್ಕಿಗೂ ಚ್ಯುತಿಯಾಗದಂತೆ ನಡೆದುಕೊಳ್ಳುವುದು ಉತ್ತಮ ಪ್ರಜೆ ಲಕ್ಷಣವಾಗಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಆರ್‌. ಮಾಣಿಕ್ಯ ಹೇಳಿದರು.

Advertisement

ನಗರದ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ), ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ಮೂಲಭೂತ ಕಾನೂನುಗಳು ಹಾಗೂ ಕಾಯಂ ಜನತಾ ನ್ಯಾಯಾಲಯ’ ನ್ಯಾಯ ಸಂಯೋಗ ಮತ್ತು ಫೋಕ್ಸೋ ಕಾಯ್ದೆ ಬಗ್ಗೆ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಹೇಗೆ ಕಾಲೇಜಿನ ನಿಯಮಗಳನ್ನು ಚಾಚು ತಪ್ಪದೆ ಪಾಲಿಸುತ್ತಾರೋ ಅದೇ ರೀತಿ ಸಮಾಜದಲ್ಲಿ ಕಾನೂನಿನ ಪರಿಪಾಲನೆ ಅತಿ ಅವಶ್ಯಕ ಎಂದು ಹೇಳಿದರು. 

ಜನನ-ಮರಣ ನೋಂದಣಿ ಬಗ್ಗೆ ತಿಳಿಹೇಳಿದ ಅವರು ಯಾವುದೇ ವ್ಯಕ್ತಿ ಮರಣ ಹೊಂದಿದಲ್ಲಿ ಆತನ ಆಸ್ತಿ ಕುಟುಂಬ ವರ್ಗಕ್ಕೆ ವರ್ಗಾವಣೆ ಆಗಬೇಕಾದರೆ 1952ರ ಜನನ-ಮರಣ ಕಾಯ್ದೆ ಪ್ರಕಾರ ಮರಣ ಪ್ರಮಾಣ ಪತ್ರ ಪಡೆಯುವುದು ಅವಶ್ಯಕ. ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ವಾಹನ ಮಾಲೀಕರಿಂದ ಸುಮಾರು 3ರಿಂದ 4 ಲಕ್ಷ ರೂ. ವರೆಗೆ ಪರಿಹಾರವನ್ನು ಕಾನೂನಿನ ಮೂಲಕ ಪಡೆಯಲು ಅವಕಾಶವಿದೆ ಎಂದರು.

ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯೆ, ನ್ಯಾಯವಾದಿ ಗೀತಾ ಸಜ್ಜನಶೆಟ್ಟಿ ಮಾತನಾಡಿ, ಆಧುನಿಕ ತಂತ್ರಜ್ಞಾನ ಯುಗದಲ್ಲಿ ಸಾಮಾಜಿಕ ಜಾಲತಾಣಗಳಾದ ಪೇಸ್‌ಬುಕ್‌, ವಾಟ್ಸ್‌ ಆ್ಯಪ್‌, ಟೆಲಿಗ್ರಾಂ, ಟ್ವಿಟರ್‌ ಮೂಲಕ ಅಶ್ಲೀಲ ಚಿತ್ರಗಳ ಬಳಕೆಯೂ ಹೆಚ್ಚುತ್ತಲಿದ್ದು, ಇದು ಸಹ ದೌರ್ಜನ್ಯದ ವ್ಯಾಪ್ತಿಗೆ ಬರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಯಾರಾದರೂ ಕಿರುಕುಳಕ್ಕೆ ಒಳಗಾದಲ್ಲಿ ಕೂಡಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಎಂದರು ಹೇಳಿದರು.

Advertisement

ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಅಧ್ಯಕ್ಷ ಸಿದ್ರಾಮಯ್ಯ ಹಿರೇಮಠ ಮಾತನಾಡಿ, ಮೂಲಭೂತ ಹಕ್ಕುಗಳ ಬಗ್ಗೆ ನಾವು ಹೆಚ್ಚು ಮಾತನಾಡುತ್ತೇವೆ. ಅದರ ಜೊತೆಗೆ ದೇಶ, ಅರಣ್ಯ, ಸಂಸ್ಕೃತಿ, ರಕ್ಷಣೆ ವಿಷಯದಲ್ಲಿ ಕರ್ತ್ಯವ್ಯಗಳಿಗೆ ಹೆಚ್ಚಿನ ಗಮನ ಕೂಡುವುದಿಲ್ಲ. ಹಕ್ಕುಗಳು ಬಯಸಿದಂತೆ ಕರ್ತವ್ಯದ ಪರಿಪಾಲನೆಯನ್ನು ಯಾರು ಮರೆಯಬಾರದು ಎಂದರು. ನ್ಯಾಯವಾದಿ ವೈಜನಾಥ ಎಸ್‌. ಝಳಕಿ ಅಪಘಾತ ವಿಮೆ ಮತ್ತು ಜನತಾ ನ್ಯಾಯಾಲಯದ ಬಗ್ಗೆ ಮಾಹಿತಿ ನೀಡಿದರು.

ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲರಾದ ರೂಬಿನಾ ಪರ್ವಿನ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸಹ ಸಿಬ್ಬಂದಿಗಳಾದ ರೇಷ್ಮಾ, ಮಂಜುಳಾ, ಗಜೇಂದ್ರ, ಶರಣಬಸಪ್ಪ ಕುಂಬಾರ ಹಾಗೂ ವಿದ್ಯಾರ್ಥಿಗಳು ಇದ್ದರು. ಸಹ ಶಿಕ್ಷಕಿ ಲಲಿತಾ ಪಾಟೀಲ್‌ ಸ್ವಾಗತಿಸಿ ವಂದಿಸಿದರು. ರಾಜಶ್ರೀ ಸಿ. ಬಾವಿ ನಿರೂಪಿಸಿದರು. 

ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ 18 ವರ್ಷದೊಳಗಿನ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಇತ್ತೀಚೆಗೆ ಅಧಿಕವಾಗುತ್ತಿದೆ. ಸಂತ್ರಸ್ತರು ಯಾವುದೇ ಕಾರಣಕ್ಕೂ ಎದೆಗುಂದದೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಲೈಂಗಿಕ ಕಿರುಕುಳ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗಳಿಗೆ ಫೋಕ್ಸೋ ಕಾಯ್ದೆಯಡಿ ಕಠಿಣ ಶಿಕ್ಷೆ ನೀಡುವುದರಿಂದ ಇದನ್ನು ನಿಯಂತ್ರಿಸಬಹುದಾಗಿದೆ.
  ಗೀತಾ ಸಜ್ಜನಶೆಟ್ಟಿ, ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next