Advertisement
“ನಗು’ ಎಲ್ಲರಿಗೂ ಅತೀ ಅಗತ್ಯವಾದ ಒಂದು ಸಂವೇದನೆ. ತನ್ನ ಮನಸ್ಸಿನ ಭಾವನೆಯನ್ನು ಅಭಿವ್ಯಕ್ತಿ ಪಡಿಸುವ ಮಾಧ್ಯಮವೂ ಹೌದು. ನಗುವಿಲ್ಲದೆ ಬದುಕಿಗೆ ಏನು ಸಾರ್ಥಕತೆ? ಪ್ರತಿದಿನದ ಆಗುಹೋಗುಗಳ ಮಧ್ಯೆ ಸಣ್ಣದೊಂದು ನಗು ಬಾರದಿದ್ದರೆ ಆ ದಿನವೇ ವ್ಯರ್ಥವಾದಂತೆ!
Related Articles
Advertisement
ಪುರಾಣಗಳಲ್ಲಾಗಲಿ, ಇತಿಹಾಸದಲ್ಲಾಗಲಿ ನಗುವನ್ನೇ ಜೀವನದ ಜೀವಾಳವಾಗಿಸಿಕೊಂಡ, ತುಂಟತನದ ಅಭಿವ್ಯಕ್ತಿಯಲ್ಲಿ ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸಿದ ಯಾರಾದರೂ ಹೆಣ್ಣನ್ನ ಉದಾಹರಿಸಲಾಗುವುದೆ? ಕೃಷ್ಣನಂತೆ ಬಾಲಲೀಲೆಗಳನ್ನು ಪ್ರದರ್ಶಿಸುತ್ತ ಜಗತ್ತನ್ನು ಆಕರ್ಷಿಸಿದ ಪುರುಷರು ಸಾಕಷ್ಟು ಮಂದಿ ಪುರಾಣಲೋಕದಲ್ಲಿರಬಹುದು. ಅಂದರೆ ಹೆಣ್ಣು ನಗಬಾರದೋ ಅಥವಾ ಆಕೆಗೆ ನಗಲು ಬಾರದೋ ಎಂಬುದು ಯೋಚಿಸತಕ್ಕ ವಿಷಯ.
ಇನ್ನೂ ಮುಂದುವರೆದು ನೋಡಿದರೆ, ಹೆಣ್ಣುಮಕ್ಕಳು ಹೇಗೆ ನಗಬೇಕು, ಎಂದು ನಗಬೇಕು ಎಂಬ ಬಗ್ಗೆ ಕಟ್ಟಳೆಗಳಿರುವುದು ಗಮನಕ್ಕೆ ಬರುತ್ತದೆ. ಈಗ ಕೊಂಚ ಬದಲಾವಣೆಯಾಗಿರಬಹುದು; ಆದರೆ, ಮನೆಗೆ ಬಂದವರೆದುರು ಗಂಡಸು ಹೇಗೂ ವರ್ತಿಸಬಹುದು, ಗಟ್ಟಿಧ್ವನಿಯಲ್ಲಿ ಮಾತನಾಡಬಹುದು, ಅಸಮಾಧಾನವನ್ನು ಸೂಚಿಸಬಹುದು; ಆದರೆ, ಹೆಂಗಸು ಮಾತ್ರ ನಗುನಗುತ್ತ “ಮನೆಯಲ್ಲಿ ಎಲ್ಲವೂ ಸರಿ ಇದೆ’ ಎಂಬಂತೆ ತೋರಿಸಬೇಕಾಗುತ್ತದೆ. ಇದು ಅವಳ ಪಾಲಿಗೆ ಇರುವ ಅನಿವಾರ್ಯತೆ. ಮನೆಯೊಳಗೆ ನಡೆದಿರುವ ಜಗಳದ ಗುಟ್ಟು ಹೊರಬರದಂತೆ ತಡೆದು ಮುಗುಳ್ನಗುವಿನ ಮುಖವಾಡ ಧರಿಸಿ ಆದರ್ಶ ಪತ್ನಿಯಾಗಬೇಕಾದ ನಿರ್ಬಂಧ ಆಕೆಗೆ ಮಾತ್ರವಿದೆ. ಗಂಡಸರಿಗಾದರೆ ಅದು ಅನಿವಾರ್ಯ ಸ್ಥಿತಿಯಲ್ಲ. ಮಕ್ಕಳೆದುರು ಕೂಡ ಆಕೆ ಮನಸ್ಸಿನ ಒಳಗನ್ನು ಹೊರಗೆಡಹುವ ಹಾಗಿಲ್ಲ. ಮಕ್ಕಳೆದುರು ಕೂಡ ತನ್ನ ದುಃಖದ ಚೀಲಗಳನ್ನು ತನ್ನೊಳಗೇ ಮಡಿಚಿಟ್ಟು ಕೊಳ್ಳಬೇಕಾದ ಕಷ್ಟದ ವ್ಯವಹಾರ!
“ನಗುನಗುತಾ ಬಾಳಮ್ಮ’ ಎಂದು ಪ್ರತ್ಯೇಕವಾಗಿ ಯಾಕೆ ಆಶೀರ್ವದಿಸುತ್ತಾರೆ ಎಂಬುದೇ ನನಗೆ ಅಚ್ಚರಿಯ ಸಂಗತಿ. “ನಿನ್ನ ಭಾವನೆಗಳನ್ನು ಹತ್ತಿಕ್ಕುವ ಸ್ಥಿತಿ ಮುಂದೆ ಬರಲಿದೆ. ಅದನ್ನು ಎದುರಿಸಲು ಸಿದ್ಧಳಾಗು’ ಎಂದು ಪರೋಕ್ಷವಾಗಿ ಸೂಚಿಸುವ ಮಾರ್ಗವೋ ಏನೊ! ಆಶೀರ್ವಾದ ಬಲದಿಂದಾದರೂ “ನಗುವನ್ನು ಮುಕ್ತವಾಗಿ ಅಭಿವ್ಯಕ್ತಿಸುವ ಸ್ಥೈರ್ಯ ಬರಲಿ’ ಎಂಬ ಆಶಯವೂ ಇದ್ದಿರಬಹುದು. ಅಂತೂ, ಗಾಂಭೀರ್ಯವನ್ನೇ ತನ್ನ ಲಕ್ಷಣವಾಗಿರಿಸಿಕೊಂಡ ಹೆಣ್ಣು ಸಹಜತೆಯನ್ನು ಮೆಟ್ಟಿ ನಿಲ್ಲಬೇಕಾದ ಸ್ಥಿತಿ ಈ ಕಾಲದಲ್ಲಿಯೂ ಇದೆ.
ಇಲ್ಲವೆಂದರೂ ಕೆಲವೊಮ್ಮೆ ಹೆಣ್ಣು ನಗಬೇಕಾಗುತ್ತದೆ; ಯಾವಾಗ ಎಂದು ಕೇಳುತ್ತೀರಾ? ತನ್ನಲ್ಲಿರುವ ಸಹಜ ಕೋಪತಾಪಗಳನ್ನು ನಗುವಿನ ಬಣ್ಣಕ್ಕೆ ಕರಗಿಸಬೇಕಾದ ಅನಿವಾರ್ಯ ಸಂದರ್ಭದಲ್ಲಿ !
– ರಶ್ಮಿ ಕುಂದಾಪುರ