ಜಾವಗಲ್: ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ನಿರ್ಲಕ್ಷಿಸಬೇಡಿ ಎಂದು ಹಾಸನ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಕೆ.ಪದ್ಮಾ ಕರೆ ನೀಡಿದರು.
ಹಾಸನ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕದಿಂದ ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಹೋಬಳಿ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳ ಮೇಲೆಯೂ ದೌರ್ಜನ್ಯಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಇಂತಹ ಪ್ರಕರಣಗಳು ಮೊದಲಿಗೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾಕಾರ್ಯಕತೆìಯರಿಗೆ ತಿಳಿಯುತ್ತದೆ. ತಕ್ಷಣವೇ ಈ ಬಗ್ಗೆ ವರದಿ ಮಾಡಬೇಕು ಇಲ್ಲದಿದ್ದಲ್ಲಿ ಫೋಸ್ಕೋ ಕಾಯ್ದೆಯನ್ವಯ ತಪ್ಪಾಗುತ್ತದೆ ಎಂದು ತಿಳಿಸಿದರು.
ಇಲಾಖೆ ವತಿಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳಾ ತುರ್ತು ಚಿಕಿತ್ಸಾ ಘಟಕ, ತಾಲೂಕು ಕೇಂದ್ರಗಳ ಆಸ್ಪತ್ರೆಯಲ್ಲಿ ಗೆಳತಿ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಲಾಗಿದ್ದು, ಸಂತ್ರಸ್ತ ಹೆಣ್ಣು ಮಕ್ಕಳಿಗೆ ಸೂಕ್ತ ಚಿಕಿತ್ಸೆ, ಕಾನೂನು ನೆರವು, ಆಪ್ತ ಸಮಾಲೋಚನೆ ಜೊತೆಗೆ ತುರ್ತು ಪರಿಹಾರ ಕೊಡಿಸಲು ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ರಕ್ಷಣಾ ಘಟಕವು ಇಲಾಖೆಯ ಮಹತ್ವದ ಯೋಜನೆಯಾಗಿದೆ ಎಂದರು.
ಈ ಯೋಜನೆಯಡಿ ಸಂತ್ರಸ್ತ ಮಕ್ಕಳ ರಕ್ಷಣೆಗೆ 1098 ಮಕ್ಕಳ ಸಹಾಯವಾಣಿ, ಅನಾಥ, ಪರಿತ್ಯಕ್ತ ಹಾಗೂ ತ್ಯಜಿಸಲ್ಪಟ್ಟ ಮಕ್ಕಳನ್ನು ಕಾನೂನು ಬದ್ಧವಾಗಿ ದತ್ತು ನೀಡಲು ದತ್ತು ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಜೊತೆಗೆ ಪಾಲನೆ-ರಕ್ಷಣೆ ಅವಶ್ಯಕತೆ ಇರುವ ಮಕ್ಕಳಿಗೆ ಪುನರ್ ವಸತಿ, ಆಪ್ತ ಸಮಾಲೋಚನೆ ನೀಡಲು ಮಕ್ಕಳ ಕಲ್ಯಾಣ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಇಂತಹ ಹಲವಾರು ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ಮಕ್ಕಳನ್ನು ಸಂರಕ್ಷಿಸುವ ಜೊತೆಗೆ ಸೂಕ್ತ ಪುನರ್ ವಸತಿ ಕಲ್ಪಿಸಿ ಮಕ್ಕಳ ಸ್ನೇಹಿ ಜಿಲ್ಲೆಯನ್ನಾಗಿ ಪರಿವರ್ತಿಸಲು ಮಕ್ಕಳ ರಕ್ಷಣಾ ಘಟಕ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಕಾಂತರಾಜು ಮಾತನಾಡಿ, ಜಿಲ್ಲೆಯಲ್ಲಿ ಐಸಿಪಿಎಸ್ ಅನ್ನು ಪರಿಣಾಮ ಕಾರಿಯಾಗಿ ಜಾರಿಗೊ ಳಿಸಲಾಗುತ್ತಿದೆ. ದೇಶದ ಒಟ್ಟು ಮಕ್ಕಳಲ್ಲಿ ಶೇ.40 ಮಕ್ಕಳಿಗೆ ಸೂಕ್ತ ರಕ್ಷಣೆ, ಪಾಲನೆ ಹಾಗೂ ಪ್ರೀತಿ, ಆರೈಕೆ ಸಿಗುವ ನಿಟ್ಟಿನಲ್ಲಿ ಘಟಕ ಶ್ರಮಿಸುತ್ತಿದೆ. ಇದರ ಜೊತೆಗೆ ವಿವಿಧ ಇಲಾಖೆಗಳ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಮಕ್ಕಳ ಹಕ್ಕುಗಳು, ಕಾನೂನುಗಳು ಹಾಗೂ ಯೋಜನೆಗಳನ್ನು ತಿಳಿಸುವ ಮೂಲಕ ಅಧಿಕಾರಿ ಹಾಗೂ ಸಿಬ್ಬಂದಿಯಲ್ಲಿ ಮಕ್ಕಳ ರಕ್ಷಣೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಹೋಬಳಿ ಶಿಕ್ಷಣ ಸಂಯೋಜಕ ಕಿರಣ್, ಅಂಗನವಾಡಿ ಮೇಲ್ವಿಚಾರಕಿ ಇಂದ್ರಮ್ಮ, ರಕ್ಷಣಾಧಿಕಾರಿ (ಐ.ಸಿ) ಕುಮಾರಿ ರಶ್ಮಿ, ಆರ್.ಡಿ. ಲೋಹಿತ್ ಮಾತನಾಡಿದರು. ತರಬೇತಿ ಕಾರ್ಯಾಗಾರದಲ್ಲಿ ಆರೋಗ್ಯ, ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.