ನಾವು ಜಗತ್ತಿನ ಧಾವಂತದಲ್ಲಿ ಆರೋಗ್ಯದ ಬಗ್ಗೆ, ಸಂಬಂಧಗಳ ಬಗ್ಗೆ ಎಲ್ಲೋ ಒಂದು ಕಡೆ ನಿರ್ಲಕ್ಷ್ಯ ತೋರುತ್ತಿದ್ದೇವೆ ಎಂಬ ಅನಿಸಿಕೆ ನನ್ನದು. ಎಲ್ಲ ಕ್ಷೇತ್ರಗಳು ತಾಂತ್ರಿಕತೆ ಮತ್ತು ಯಾಂತ್ರಿಕತೆಯನ್ನು ಒಪ್ಪಿಕೊಳ್ಳುತ್ತಿರುವ ಕಾಲಮಾನದಲ್ಲಿ ಅಡುಗೆಗಳು ಕೂಡ ಯಾಂತ್ರಿಕತೆಯನ್ನು ಒಪ್ಪಿಕೊಂಡಿದೆ. ಟ್ರೆಂಡ್‌ಗೆ ತಕ್ಕಹಾಗೆ ಆಹಾರ ಪದ್ಧತಿಗಳೂ ಕೂಡ ಬದಲಾಗುತ್ತಿವೆ. ಎಲ್ಲವೂ ಫಾಸ್ಟ್ ಆಗಬೇಕು ಎಂಬ ಯೋಚನೆಯಲ್ಲಿ ಫಾಸ್ಟ್‌ಫುಡ್‌ಗಳಿಗೆ ಜನ ಒಗ್ಗಿಕೊಂಡು ಬಿಟ್ಟಿದ್ದಾರೆ. ಪೌಷ್ಟಿಕಾಂಶರಹಿತ ಫಾಸ್ಟ್‌ಫುಡ್‌ಗಳು ನಮ್ಮನ್ನು ಅಷ್ಟೇ ಫಾಸ್ಟ್ ಆಗಿ ಆರೋಗ್ಯಹೀನರಾಗಿಸುತ್ತವೆ ಎಂಬ ಅರಿವು ನಮ್ಮಲ್ಲಿ ಇಲ್ಲವಾಗಿ ಹೋಗಿರುವುದು ಆಶ್ಚರ್ಯ ಅನ್ನಿಸುತ್ತದೆ.
ಮನುಷ್ಯನಿಗೆ ಪರಿಸ್ಥಿತಿಗೆ ಹೊಂದಿಕೊಳ್ಳುವ ಮತ್ತು ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುವಾಗ ಸ್ವಯಂ ನಿರ್ವಹಿಸಿಕೊಳ್ಳುವ ಸಾಮರ್ಥ್ಯವಿದೆ. ಆದರೆ, ಜೀವನ ಶೈಲಿಯೂ ಬಹಳ ಮುಖ್ಯವಾಗುತ್ತದೆ. ಸ್ವಯಂನಿಯಂತ್ರಣಗಳ ಹೊಂದಿರುವ ನಿರ್ಧಾರಗಳ ಒಗ್ಗೂಡುವಿಕೆಯಿಂದ ಅನಾರೋಗ್ಯಕ್ಕೂ ಅಥವಾ ಸಾವಿಗೂ ಕಾರಣವಾಗಬಹುದು ಎಂಬುದು ಮಾನವನಿಗೆ ತಿಳಿಯದಾಗಿರುವುದು ವಿಷಾದನೀಯ.
ಇಂತಹ ದಿನಗಳಲ್ಲಿ, ಆಳ್ವಾಸ್ ಕಾಲೇಜಿನ ಫುಡ್ ಸೈನ್ಸ್ ಅಂಡ್ ನ್ಯೂಟ್ರಿಶನ್ ಭಾಗ ಆಯೋಜಿಸಿದ ರಾಷ್ಟ್ರೀಯ ಪೋಷಣಾ ದಿನ ಆಚರಣೆ ಕಾರ್ಯಕ್ರಮದಲ್ಲಿ ಎಲ್ಲರನ್ನು ಕೈ ಬೀಸಿ ಕರೆದಿದ್ದು ಪೌಷ್ಟಿಕಾಂಶಗಳುಳ್ಳ ಸಿಹಿ ತಿಂಡಿತಿನಿಸುಗಳು. ಆರೋಗ್ಯ ಅಂದ್ರೆ ದೈಹಿಕ ಸುಸ್ಥಿತಿ ಮಾತ್ರವಲ್ಲ, ಸಂಪೂರ್ಣವಾಗಿ ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಸಮತೋಲನದಲ್ಲಿರು ವುದನ್ನು ಆರೋಗ್ಯ ಎಂದು ಹೇಳುತ್ತೇವೆ. ಅಂತಹ ವಾತಾವರಣ ಈ ಕಾರ್ಯಕ್ರಮದ ಮೂಲಕ ಸೃಷ್ಟಿಸುವುದಕ್ಕೆ ಮುನ್ನುಡಿ ಬರೆದ ವಿಭಾಗದ ಎಲ್ಲಾ ವಿದ್ಯಾರ್ಥಿಗಳ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಅಲ್ಲದೆ ಯಾವುದೇ ಹಬ್ಬದ ಸಿಹಿ ತಿಂಡಿಗಳಿಗೆ ಕಡಿಮೆ ಇಲ್ಲದ ಈ ತಿನಿಸುಗಳು ವಿಭಾಗದ ವಿದ್ಯಾರ್ಥಿಗಳಿಂದಲೇ ತಯಾರಿಸಲ್ಪಟ್ಟಿದ್ದು ಎನ್ನುವುದು ಮತ್ತೂ ವಿಶೇಷ.
ಕೊಕನಟ್ ರೈಸ್ ಕಾಯ್ನ, ಚಕ್ಕಕುರು ಪಾಯಸಮ್, ನ್ಯೂಟ್ರಿ ಬಿಸ್ಕೆಟ್ಸ್, ಮಲ್ಟಿಗ್ರೇನ್ ರೋಟಿ, ಪೋಹ ಲಡ್ಡು, ಗ್ರೌಂಡ್‌ನಟ್ ಬರ್ಫಿ, ಸೋಲ್ಕಾಧಿ (ತೆಂಗಿನಕಾಯಿ ಹಾಲಿನ ಜ್ಯೂಸ್), ಓಟ್ಸ್ ಮಿಲ್ಕ್ಶೇಕ್ (ತೋಕೆ ಗೋಧಿಯ ಜ್ಯೂಸ್), ಬಿಸ್ಕಸ್ ಟೀ (ದಾಸವಾಳ ಹೂವಿನ ಚಹಾ), ವಾವ್Ø ! ಏನ್ ಬೇಕು, ಏನ್ ಬೇಡ ಹೇಳಿ. ಈ ತಿಂಡಿತಿನಿಸು, ಜ್ಯೂಸ್‌ಗಳ ಹೆಸರನ್ನ ಕೇಳಿದ್ರೇ ಬಾಯಲ್ಲಿ ನೀರು ಸುರಿಯಲಾರಂಭಿಸುತ್ತದೆ. ಇನ್ನು ತಿಂದ್ರೆ? ಹೇಳಲು ಪದಗಳೇ ಇಲ್ಲ.
ಈ ಆಹಾರಗಳು ಯಾವ ಫಾಸ್ಟ್ ಫುಡ್‌ಗೆ ಕಡಿಮೆ ಇದೆ ಹೇಳಿ. ಹಾಗಾಗಿಯೇ ಈ ಕಾರ್ಯಕ್ರಮ ಗೆದ್ದಿದ್ದು, ಪೌಷ್ಟಿಕ ಆಹಾರ ತಯಾರಿಸಿದ್ದರಿಂದ ಅಲ್ಲ. ಆ ತಿಂಡಿತಿನಿಸುಗಳ ಬಗ್ಗೆ ಆರೋಗ್ಯ ಸಲಹೆ, ಮಾಹಿತಿಗಳನ್ನು , ಉಪಯೋಗಗಳನ್ನು ತಿಳಿಸಿದ್ದರಿಂದ. ಆರೋಗ್ಯಕರ ಆಹಾರ ಪದ್ಧತಿಗಳಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಾಧ್ಯ ಎಂಬ ಆಶಯದಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು ಜನಮನ್ನಣೆಗೆ ಪಾತ್ರವಾಗಿದೆ.
ಶ್ರೀರಾಜ್ ಎಸ್. ಆಚಾರ್ಯ
ಆಳ್ವಾಸ್ ಕಾಲೇಜು, ಮೂಡಬಿದ್ರಿ