ಬೇಲೂರು: ಪಟ್ಟಣದ ನೆಹರು ನಗರದ ಶಿವಜ್ಯೋತಿ ಪಣ ಬೀದಿಯ ಜನ ವಸತಿ ಜಾಗದಲ್ಲಿ ಬಾರ್ ನಡೆಸಲು ಅನುಮತಿ ನೀಡಬಾರದೆಂದು ಆಗ್ರಹಿಸಿ ಮಹಿಳೆಯರು ಅಬಕಾರಿ ಇಲಾಖೆ ಕಚೇರಿ ಮುಂದೆ ಶುಕ್ರವಾರ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಹೆದ್ದಾರಿಯಿಂದ 500 ಮೀ. ದೂರದಲ್ಲಿ ಮದ್ಯದಂಗಡಿ ಇರಬೇಕೆಂಬ ಸುಪ್ರೀಂ ಕೋರ್ಟ ಆದೇಶದಂತೆ ದೀಪಕ್ ಬಾರ್ ಮಾಲೀಕರು ಬೀದಿಯಲ್ಲಿ ಜನ-ನಿವಾಸದಲ್ಲಿ ಮದ್ಯದಂಗಡಿಯನ್ನು ತೆರೆದಿದ್ದಾರೆ. ಮದ್ಯದಂಗಡಿ ತೆರೆಯಬಾರದು ಎಂದು ಇಲ್ಲಿನ ಮಹಿಳಾ ಸಂಘಗಳು ಪುರಸಭೆ ಮುಂಭಾಗ ಪ್ರತಿಭಟನೆ ನಡೆಸಿದರೂ ಬಾರ್ ಮಾಲೀಕ ಉಡಾಫೆ ತೋರಿದ್ದಾರೆಂದು ಆರೋಪಿಸಿದರು.
ಕ್ರಮ ಖಂಡನೀಯ: ಈ ಪ್ರದೇಶದ ಸುತ್ತ-ಮುತ್ತ ಬಹುತೇಕ ಕೂಲಿ ಕೆಲಸ ಮಾಡಿಕೊಂಡ ಜೀವನ ಸಾಗಿಸುವ ಬಡ ಕುಟುಂಬಗಳಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳು ಅನುಮತಿ ನೀಡಿರುವ ಕ್ರಮ ತೀವ್ರ ಖಂಡನೀಯ ಎಂದರು. ಪುರಸಭೆ ಸದಸ್ಯ ಮಂಜುನಾಥ್ ಮಾತನಾಡಿ, ಸುಪ್ರೀಂ ಕೋರ್ಟ್ ನೀಡಿರುವ ಹೆದ್ದಾರಿಗಳ ಮದ್ಯದಂಗಡಿಗಳನ್ನು ತೆರವು ಮಾಡಬೇಕೆಂಬ ಆದೇಶ ಸ್ವಾಗತಾರ್ಹ.
ಆದರೆ ಹೆದ್ದಾರಿಯಿಂದ ತೆರವುಗೊಂಡ ಮದ್ಯದಂಗಡಿಗಳನ್ನು ಜನ-ನಿವಾಸಗಳಲ್ಲಿ ತೆರೆಯುವ ಕ್ರಮ ಯಾವ ನ್ಯಾಯದ್ದು ಎಂದು ಪ್ರಶ್ನಿಸಿದರು. ಶಿವಜ್ಯೋತಿ ಪಣ ಬೀದಿ ಜನವಸತಿ ಸ್ಥಳವಾಗಿದ್ದು, ಬಾರ್ ಮಾಡುವುದರಿಂದ ಇಲ್ಲಿನ ಕುಟುಂಬಗಳ ನೆಮ್ಮದಿ ಹಾಳಾಗುತ್ತದೆ. ಇದನ್ನು ಗಮನಹರಿಸಿ ಇಲಾಖೆ ಅಧಿಕಾರಿಗಳು ಬಾರ್ ನೆಡೆಸಲು ಅನುಮತಿ ನೀಡಬಾರದೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಮಹಿಳಾ ಸಂಘಟನೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.