ದಾವಣಗೆರೆ: ನಗರದ ಪ್ರತಿಷ್ಠಿತ ವಸತಿ ಬಡಾವಣೆಗಳ ಮಧ್ಯದಲ್ಲಿರುವ ಶಾಮನೂರು ರಸ್ತೆಯಲ್ಲಿ ಹೊಸದಾಗಿ ಬಾರ್‌ಗಳಿಗೆ ಲೈಸೆನ್ಸ್ ನೀಡದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್.ಮಲ್ಲಿಕಾರ್ಜುನ್ ಅವರು ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಿದ್ದವೀರಪ್ಪ ಬಡಾವಣೆಯ ನಿವಾಸಿಗಳ ಮನವಿಗೆ ಸ್ಪಂದಿಸಿದ ಸಚಿವರು, ಅಬಕಾರಿ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಶಾಮನೂರು ರಸ್ತೆಯಲ್ಲಿ ಹೊಸದಾಗಿ ಬಾರ್‌ಗಳಿಗೆ ಲೈಸೆನ್ಸ್ ನೀಡಬಾರದೆಂದು ತಿಳಿಸಿದರು. ಈಗಾಗಲೇ ಶಾಮನೂರು ರಸ್ತೆಯಲ್ಲಿ 10ಕ್ಕೂ ಹೆಚ್ಚು ಬಾರ್ ಅಂಡ್ ರೆಸ್ಟೋರೆಂಟ್ ಗಳಿದ್ದು, ಮತ್ತೆ ಬಾರ್ ಆರಂಭಿಸುವ ಯತ್ನ ನಡೆಯುತ್ತಿದೆ ಎಂಬುದಾಗಿ ನಿವಾಸಿಗಳು ಸಚಿವರ ಗಮನಕ್ಕೆ ತಂದರು. ಆಗ ಸಚಿವರು, ಹೊಸ ಬಾರ್‌ಗಳಿಗೆ ಅವಕಾಶ ನೀಡುವುದನ್ನು ತಡೆಯುವುದರ ಜೊತೆಗೆ ಈಗ ಇರುವ ಬಾರ್‌ಗಳ ಸ್ಥಳಾಂತರಿಸುವ ಬಗ್ಗೆ ಪರಿಶೀಲನೆ ನಡೆಸಿ, ಕ್ರಮಕೈಗೊಳ್ಳಲು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಿದ್ದವೀರಪ್ಪ ಬಡಾವಣೆಗೆ ಹೊಂದಿಕೊಂಡಿರುವ ಶಾಮನೂರು ರಸ್ತೆಯಲ್ಲಿನ ಬಾರ್‌ಗಳಿಂದ ಸ್ಥಳೀಯ ನಿವಾಸಿಗಳು ಓಡಾಡುವುದೇ ದುಸ್ತರವಾಗಿದೆ. ಈಗ ಮತ್ತೆ ಬಾರ್ ಆರಂಭಗೊಂಡರೆ ಸ್ಥಳೀಯರಿಗೆ ಇನ್ನಷ್ಟು ತೊಂದರೆ ಆಗಲಿದೆ. ಹಾಗಾಗಿ ಶಾಮನೂರು ರಸ್ತೆಯಲ್ಲಿ ಹೊಸ ಬಾರ್‌ಗಳಿಗೆ ಲೈಸೆನ್ಸ್ ನೀಡಬಾರದು ಹಾಗೂ ಬೇರೆಡೆ ಇರುವ ಬಾರ್‌ಗಳನ್ನು ಈ ರಸ್ತೆಗೆ ಸ್ಥಳಾಂತರಕ್ಕೆ ಅವಕಾಶ ನೀಡಬಾರದು ಎಂದು ಸಚಿವರಿಗೆ ನಿವಾಸಿಗಳು ಮನವಿ ಮಾಡಿದರು.
ಆರ್.ಕೆ. ಶಾಸ್ತ್ರಿ, ಪಾಲಿಕೆ 31ನೇ ವಾರ್ಡ್ ಸದಸ್ಯ ಜಿ.ಬಿ.ಲಿಂಗರಾಜ್, ಲಕ್ಷ್ಮಿ ನಾರಾಯಣ, ಶ್ರೀನಿವಾಸ್, ಎನ್.ಜಿ. ಅಣ್ಣಯ್ಯ, ಲಕ್ಷ್ಮಿಪತಿ, ಎಂ.ವಿ. ವೆಂಕಟೇಶ್, ರಘು, ನಿರಂಜನ್, ಮಾರುತಿ, ಗುರು, ಸಿಂಧೆರಾಜ್, ಡಾ| ಶಶಿಕಲಾ ಕೃಷ್ಣಮೂರ್ತಿ, ಶಿವಮೂರ್ತಿ, ಗಣೇಶ್ ಇತರರು ಮನವಿ ಸಲ್ಲಿಸುವ
ಸಂದರ್ಭದಲ್ಲಿದ್ದರು.