Advertisement

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

09:28 PM Oct 28, 2021 | Team Udayavani |

ಗದಗ: ಪ್ರಬಲ ಮತ್ತು ಮುಂದುವರಿದ ಜಾತಿಗಳ ಜನರಿಗೆ ಪ್ರವರ್ಗ 2ಎ ಮೀಸಲಾತಿ ನೀಡಿದರೆ ಹಿಂದುಳಿದ ಪಟ್ಟಿಯಲ್ಲಿರುವ ಜಾತಿಯವರಿಗೆ ಅಸ್ತಿತ್ವವೇ ಇಲ್ಲದಂತಾಗುತ್ತದೆ. ಈ ಬಗ್ಗೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ 197 ಜಾತಿಗಳ ಜನರು ಜಾಗೃತರಾಗಬೇಕು. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಕರೆ ನೀಡಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ಜಾತಿಗಳ ಜನರು ತಮ್ಮ ಹಕ್ಕುಗಳಿಗಾಗಿ ಯಾವತ್ತೂ ಹೋರಾಡಿದವರಲ್ಲ. ಹಿಂದುಳಿದ ವರ್ಗಗಳ ಜನರು ಮುಗ್ಧರು. ಹೀಗಾಗಿ ಮುಂದುವರಿದ ಜಾತಿ ಸಮುದಾಯಗಳ
ಜನರು ನಮ್ಮ ಸಂವಿಧಾನಾತ್ಮಕ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಹಿಂದುಳಿದವರ ಪರವಾಗಿ ಸದನದಲ್ಲಿ ಧ್ವನಿ ಎತ್ತಲು ನಿರೀಕ್ಷಿತ ಸಂಖ್ಯೆಯಲ್ಲಿ ನಮ್ಮ ಸಮುದಾಯಗಳ ಶಾಸಕರಿಲ್ಲ. ವಿವಿಧ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದ ಹಿಂದುಳಿದ ಜಾತಿಗಳ ನಾಯಕರಿಗೂ ಪ್ರಬಲ ಜಾತಿಗಳ ವಿರುದ್ಧ ಮಾತನಾಡುವ ಶಕ್ತಿ ಇಲ್ಲ ಎಂದು ಅಸಹಾಯಕತೆ ತೋಡಿಕೊಂಡರು.

ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಬಹುದು ಎಂದು ಸಂವಿಧಾನದಲ್ಲಿ ಉಲ್ಲೇಖೀಸಿದೆ. ಇದನ್ನೇ ನೆಪವಾಗಿಕೊಟ್ಟುಕೊಂಡು ಬೆಂಗಳೂರು ಭಾಗದಲ್ಲಿ ಒಕ್ಕಲಿಗರು, ಬಲಿಜ ಮತ್ತಿತರೆ ಸಮುದಾಯಗಳು ಹಾಗೂ ಉತ್ತರ ಕರ್ನಾಟಕದ ಪ್ರಬಲರಾಗಿರುವ ಲಿಂಗಾಯತ ಸಮುದಾಯಗಳೂ ತಮ್ಮ ರಾಜಕೀಯ ಶಕ್ತಿ ಬಳಸಿ 2ಎ ಮೀಸಲಾತಿ ಪಡೆದುಕೊಂಡಿದ್ದಾರೆ ಎಂದರು.

ಅದರ ಮುಂದುವರಿದ ಭಾಗವಾಗಿ ವೀರೈಶವ ಲಿಂಗಾಯತದ ಹಲವು ಉಪಜಾತಿಗಳು ಹಿಂದುಳಿದ ವರ್ಗಗಳ 2ಎ ಮೀಸಲಾತಿಗಾಗಿ ಒತ್ತಾಯಿಸುತ್ತಿವೆ. ಅವರ ಮನವಿಯನ್ನು ಪುರಸ್ಕರಿಸುವುದು ಮತ್ತು ತಿರಸ್ಕರಿಸುವುದು ಹಿಂದುಳಿದ ವರ್ಗಗಳ ಆಯೋಗದ
ವಿವೇಚನೆಗೆ ಬಿಟ್ಟಿದ್ದು. ಆದರೆ, ಪ್ರತಿಯೊಂದು ಜಾತಿಯವರೂ 2ಎ ಮೀಸಲಾತಿಯನ್ನೇ ಕೇಳುತ್ತಿರುವುದು ಸರಿಯಲ್ಲ ಎಂದು ಟೀಕಿಸಿದರು.

ಜಾತಿವಾರು ವರದಿ ಬಿಡುಗಡೆ ಮಾಡಿ: ರಾಜ್ಯದಲ್ಲಿ 1931ರ ನಂತರ ಜಾತಿವಾರು ಸ್ಥಿತಿಗತಿ ಕುರಿತ ಅಧ್ಯಯನ ಸಮೀಕ್ಷೆಗಳು ನಡೆದಿಲ್ಲ. ಹೀಗಾಗಿ ಸಿದ್ದರಾಮಯ್ಯ ಸರಕಾರ 170 ಕೋಟಿ ರೂ. ಖರ್ಚುಮಾಡಿ ಕಾಂತರಾಜ ಅವರ ನೇತೃತ್ವದಲ್ಲಿ 1.60 ಲಕ್ಷ ನೌಕರರು ಶ್ರಮಿಸಿ ವರದಿಯನ್ನು ತಯಾರಿಸಿದ್ದಾರೆ. ಅದನ್ನು ಪುರಸ್ಕರಿಸುವುದು, ತಿರಸ್ಕರಿಸುವುದು ಸರಕಾರದ ತೀರ್ಮಾನಕ್ಕೆ ಬಿಟ್ಟಿರುತ್ತದೆ. ಪ್ರಾಥಮಿಕವಾಗಿ ಅದನ್ನು ಪರಿಶೀಲಿಸಬೇಕು ಎಂದರು.

Advertisement

ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ: 197 ಜಾತಿಗಳಿಗೆ ಸಂಬಂಧಿಸಿದ ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ ಈ ವರ್ಷ 80 ಕೋಟಿ ಘೋಷಿಸಿದ್ದು, ಅದರಲ್ಲಿ ಕೇವಲ 20 ಕೋಟಿ ಬಿಡುಗಡೆಯಾಗಿದ್ದು, ನಿಗಮ ಸಿಬ್ಬಂದಿಗಳ ವೇತನಕ್ಕೆ ಸಾಲದು. ಆದರೆ, ಇತ್ತೀಚೆಗೆ ರಚನೆಯಾದ ಒಕ್ಕಲಿಗರ ಅಭಿವೃದ್ಧಿ ನಿಗಮ ಮತ್ತು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ತಲಾ 500 ಕೋಟಿ ರೂ. ನೀಡುವ ಮೂಲಕ ಮಲತಾಯಿ ಧೋರಣೆ ಅನುಸರಿಸಿದೆ ಎಂದು ದೂರಿದ ಅವರು, ದೇವರಾಜು ಅರಸು ಅಭಿವೃದ್ಧಿ ನಿಗಮಕ್ಕೆ ಕನಿಷ್ಟ 2 ಸಾವಿರ ಕೋಟಿ ರೂ. ನೀಡಬೇಕು ಎಂದು ಒತ್ತಾಯಿಸಿದರು. ಆರ್‌.ಡಿ. ಕಡ್ಲಿಕೊಪ್ಪ, ಬಸವರಾಜ ಬಲಸಗುಂಡಿ, ಹರೀಶ ಪೂಜಾರ, ಪ್ರಕಾಶ ಬೊಮ್ಮನಹಳ್ಳಿ, ಬಿ.ಎನ್‌. ಯರನಾಳ ಇದ್ದರು.

ಪ್ರವರ್ಗ 2ಎ ಮೀಸಲಾತಿ ಪಟ್ಟಿಗೆ ಸೇರಿಸಬಾರದು ಎಂದು ಒತ್ತಾಯಿಸಿ ನ. 10ರಂದು ಜಿಲ್ಲಾ ಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಾಗುತ್ತದೆ. ಮಾಜಿ ಸಿಎಂ ಸಿದ್ದರಾಮಯ್ಯ, ಹಾಲಿ ಮತ್ತು ಮಾಜಿ ಹಿಂದುಳಿದ ಜಾತಿಗಳ ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಕೆ.ಎಂ. ರಾಮಚಂದ್ರಪ್ಪ, ಹಿಂದುಳಿದ ವರ್ಗಗಳ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next