ಪಂಜ: ಕೇವಲ ಅಧಿಕಾರಕ್ಕಾಗಿ ಅಲ್ಪಸಂಖ್ಯಾಕರಿಗೆ, ಪರಿಶಿಷ್ಟ ಜಾತಿ, ಪಂಗಡದವರಿಗೆ ಆಮಿಷಗಳನ್ನು ಒಡ್ಡಿ ಓಲೈಸುವ ರಾಜಕೀಯ ಕೆಲಸ ಕಾಂಗ್ರೆಸ್‌ನಿಂದ ನಿರಂತರವಾಗಿ ನಡೆಯುತ್ತಿದ್ದು, ಬಿಜೆಪಿ ಕೋಮುವಾದ ಪಕ್ಷವೆಂದು ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ ಎಂದು ಶಾಸಕ ಎಸ್.
ಅಂಗಾರ ಹೇಳಿದರು.
ಅವರು ಪಂಜ ಪ್ರಾ.ಕೃ.ಪ.ಸ. ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೇತ್ರ ಅಲ್ಪಸಂಖ್ಯಾಕ ಮೋರ್ಚಾ ವತಿಯಿಂದ ಜರಗಿದ ಬೃಹತ್ ಸಮರ್ಥನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ರಕ್ಷಣೆಗೆ ಕೈಜೋಡಿಸಿ
ಬಿಜೆಪಿ ಒಂದು ಒಳ್ಳೆಯ ಉದ್ದೇಶವನ್ನು ಇಟ್ಟುಕೊಂಡು ಆರಂಭಗೊಂಡ ಪಕ್ಷವಾಗಿದೆ. ಇಂದು ಕೇಂದ್ರದ ನರೇಂದ್ರ ಮೋದಿ ಸರಕಾರವನ್ನು ಇಡೀ ವಿಶ್ವವೇ ಒಪ್ಪಿದೆ. ದೇಶದ ರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕು. ಮುಂದೆ ರಾಜ್ಯದಲ್ಲೂ ಕೂಡ ಜನರು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದರು.
ತಕ್ಕ ಉತ್ತರ ನೀಡಿ
ಪಕ್ಷದ ಕುರಿತು ನಡೆಯುತ್ತಿರುವ ಅಪಪ್ರಚಾರಗಳಿಗೆ ಮುಂದಿನ ದಿನಗಳಲ್ಲಿ ಜನರು ತಕ್ಕ ಉತ್ತರ ನೀಡ ಬೇಕು ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಭಾರಿ ಅಪ್ಪಯ್ಯ ಮಣಿಯಾಣಿ ವಿಷಯ ಮಂಡನೆ ವೇಳೆ ಹೇಳಿದರು.
ಸುಳ್ಯ ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಲ್ಪಸಂಖ್ಯಾಕ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ| ಹಾಜಿ ಮುನೀರ್ ಭಾವ, ಕಾರ್ಯದರ್ಶಿ ಅಬ್ದುಲ್ ಕುಂಞಿ ನೇಲ್ಯಡ್ಕ, ಸಾಬು ಜೆಕಲ್, ಸುಳ್ಯ ವಿಧಾನಸಭಾ ಕ್ಷೇತ್ರ ಅಲ್ಪಸಂಖ್ಯಾಕ ಮೋರ್ಚಾ ಅಧ್ಯಕ್ಷ ಅಶ್ರಫ್ ಕಾಸಿಲೆ, ಪ್ರಧಾನ ಕಾರ್ಯದರ್ಶಿ ಫಯಾಜ್ ಕೆನರಾ, ತಾ.ಪಂ. ಉಪಾಧ್ಯಕ್ಷೆ ಶುಭದಾ ಎಸ್. ರೈ , ಡಾ| ರಾಮಯ್ಯ ಭಟ್, ಮಂಡಲ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ, ಪಂಜ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರೀ , ಉಪಾಧ್ಯಕ್ಷ ಲೋಕೇಶ್ ಬರೆಮೇಲು, ಬೆಳ್ಳಾರೆ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಪನ್ನೆ, ಮಾಜಿ ಅಧ್ಯಕ್ಷ ಲಿಗೋಧರ ಆಚಾರ್ಯ, ಚಿನ್ನಪ್ಪ ಗೌಡ ಚೊಟ್ಟೆಮಜಲು ಉಪಸ್ಥಿತರಿದ್ದರು. ರಾಕೇಶ್ ರೈ ಕೆಡೆಂಜಿ, ಶಿವಪ್ರಸಾದ್ ರೈ ನಿರೂಪಿಸಿದರು. ಅಶ್ರಫ್ ಕಾಸಿಲೆ ವಂದಿಸಿದರು.