“ಜೀವನವನ್ನು ಒಳ್ಳೆಯ ರೀತಿಯಲ್ಲಿ ಬದುಕಿ, ಯಾರಿಗಾದರೂ ಸಹಾಯ ಮಾಡಿ …’ ಇನ್ನೇನು ಸಿನಿಮಾ ಮುಗಿಯಲು ಕೆಲವೇ ಕೆಲವು ನಿಮಿಷಗಳಿರುವಾಗ ಹೀಗೊಂದು ಸಂದೇಶವನ್ನು ನಿರ್ದೇಶಕರು, ರಂಗಾಯಣ ರಘು ಅವರಿಂದ ಹೇಳಿಸುತ್ತಾರೆ. ರಂಗಾಯಣ ರಘು ಅವರ ಪಾತ್ರ ಜಗತ್ತು, ಜೀವನ, ಭಿಕ್ಷಾಟನೆ ಕುರಿತಂತೆ ಒಂದು ದೊಡ್ಡ ಭಾಷಣವನ್ನೆ ಮಾಡಿಬಿಟ್ಟಿರುತ್ತದೆ. ಸಿನಿಮಾ ಶುರುವಾದಾಗಿನಿಂದ ನಿರ್ದೇಶಕರು ಏನೆಲ್ಲಾ ಹೇಳಬೇಕು ಅಂದುಕೊಂಡಿದ್ದರೋ, ಅವೆಲ್ಲವನ್ನು ಸಿನಿಮಾ ಮುಗಿಯುವ ಹೊತ್ತಿಗೆ ಒಂದೇ ಉಸಿರಿಗೆ ಹೇಳಿದ್ದಾರೆ.
ಹಾಗಾದರೆ ಆರಂಭದಿಂದ ಕೊನೆವರೆಗೆ ಸಿನಿಮಾದಲ್ಲಿ ಏನಿದೆ ಎಂದರೆ ಉತ್ತರಿಸೋದು ಕಷ್ಟ. ಏಕೆಂದರೆ ಇಲ್ಲಿ ನಿರ್ದೇಶಕರ ಆಶಯ ಚೆನ್ನಾಗಿದ್ದರೂ ಅದನ್ನು ಸಿಕ್ಕಾಪಟ್ಟೆ ಕಮರ್ಷಿಯಲ್ ಆಗಿ ತೋರಿಸಬೇಕೆಂಬ ಅವರ ಆಸೆಯ ಪರಿಣಾಮ ಸಿನಿಮಾ ಲಂಗು -ಲಗಾಮಿಲ್ಲದೇ ಸಾಗುತ್ತದೆ. ಹೊಡೆದಾಟ-ಬಡಿದಾಟವೇ ಈ ಚಿತ್ರದ ಹೈಲೈಟ್ ಎನ್ನಬಹುದು. ಆದರೆ, ಆ ಹೊಡೆದಾಟಕ್ಕೊಂದು ಉದ್ದೇಶವಿದೆಯೇ ಎಂದರೆ ಖಂಡಿತಾ ಇಲ್ಲ. ಆರಂಭದಿಂದ ಕೊನೆವರೆಗೂ ಈ ಸಿನಿಮಾ ನೆಗೆಟಿವ್ ಶೇಡ್‌ನಲ್ಲೇ ಸಾಗುತ್ತದೆ. ರಂಗಾಯಣ ರಘು ಪಾತ್ರದ ಉಪದೇಶವಷ್ಟೇ ಪಾಸಿಟಿವ್.
ಇವತ್ತು ಸಿನಿಮಾದ ಟ್ರೆಂಡ್ ಬದಲಾಗಿದೆ. ಸಿನಿಮಾ ವಾಸ್ತವತೆಗೆ ಹೆಚ್ಚು ಹತ್ತಿರವಾಗಿದೆ. ಅತಿಯಾದ ಬಿಲ್ಡಪ್‌ಗ್ಳನ್ನು ಪ್ರೇಕ್ಷಕ ಇಷ್ಟಪಡುತ್ತಿಲ್ಲ. ಕಮರ್ಷಿಯಲ್ ಸಿನಿಮಾದಲ್ಲಿ ಲಾಜಿಕ್ ಹುಡುಕಬಾರದು ನಿಜ. ಆದರೆ, ಕೆಲವು ಮೂಲ ಅಂಶಗಳನ್ನು ಬಿಟ್ಟು ಸಿನಿಮಾ ಮಾಡಿದರೆ ಅದನ್ನು ಅರಗಿಸಿಕೊಳ್ಳುವುದು ಕಷ್ಟ. “ಗಿರ್‌ಗಿಟ್ಲೆ’ ಸಿನಿಮಾದಲ್ಲಿ ಲಾಜಿಕ್‌ಗೆ ಸಿಗದ ಅಂಶಗಳನ್ನು ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ. ಎಲ್ಲಿಂದಲೋ ಬಂದ ಮೂವರು ಹೊಸ ಹುಡುಗರು, ಏಕಾಏಕಿ ಡಾನ್‌ಗಳ ಕೋಟೆಗೆ ನುಗ್ಗಿ, ತೊಡೆ ತಟ್ಟುತ್ತಾರೆ.
ಐಷಾರಾಮಿ ಕಾರನ್ನು ಬಾಡಿಗೆ ಪಡೆದು ಮಾಜಿ ಪೊಲೀಸ್ ಕಮಿಷನರ್‌ನ ಇಬ್ಬರು ಹೆಣ್ಣುಮಕ್ಕಳನ್ನು ಪ್ರೀತಿಗೆ ಬೀಳಿಸುತ್ತಾನೆ … ಕಮರ್ಷಿಯಲ್ ಚೌಕಟ್ಟಿನಲ್ಲಿ ನೋಡಿದರೂ ಊಹೆಗೆ ನಿಲುಕದ ಪ್ರಶ್ನೆಗಳಾಗಿಯೇ ಉಳಿಯುತ್ತದೆ. ಮುಖ್ಯವಾಗಿ ನಿರ್ದೇಶಕರು ಕ್ಲೈಮ್ಯಾಕ್ಸ್‌ವರೆಗೂ ಕಥೆಯನ್ನೇ ಬಿಚ್ಚಿಲ್ಲ. ಹುಡುಗರ ಶೋಕಿಯಾಟವನ್ನೇ ತೋರಿಸುತ್ತಾ ಹೋಗಿದ್ದಾರೆ. ಕೊನೆಯಲ್ಲಿ ಹೇಳಿದ ಅಂಶವನ್ನು ಆರಂಭದಲ್ಲೇ ಬೆಳೆಸುತ್ತಾ ಹೋಗಿದ್ದರೆ ಸಿನಿಮಾಕ್ಕೊಂದು ಅರ್ಥ ಸಿಗುತ್ತಿತ್ತು.
ಇವತ್ತು ರೌಡಿಸಂ, ಲಾಂಗು, ಮಚ್ಚು ಸಿನಿಮಾಗಳ ಜೊತೆಗೆ ಪ್ರೇಕ್ಷಕ ಕಥೆಯನ್ನೂ ಬಯಸುತ್ತಾನೆ. ಆದರೆ, ಇಲ್ಲಿ ಹೈವೋಲ್ಟೆಜ್ ಫೈಟ್‌ಗೆ ಅಬ್ಬರದ ರೀರೆಕಾರ್ಡಿಂಗ್ ನೀಡಲಾಗಿದೆಯಷ್ಟೇ. ಚಿತ್ರದಲ್ಲಿ ಬರುವ ಕೆಲವು ಪಾತ್ರಗಳಿಗೆ ಅರ್ಥ ಹಾಗೂ ದೃಶ್ಯಗಳ ಲಿಂಕ್ ಹುಡುಕಲು ಹೋಗದೇ ಇರೋದು ವಾಸಿ. ಚಿತ್ರದಲ್ಲಿ ಪ್ರದೀಪ್, ಗುರು, ಚಂದ್ರು ಪ್ರಮುಖ ಪಾತ್ರ ಮಾಡಿದ್ದಾರೆ. ನಟನೆಗಿಂತ ಆ್ಯಕ್ಷನ್‌ನಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ವೈಷ್ಣವಿ, ಅದ್ವಿತಿ ಒಂದೆರಡು ದೃಶ್ಯಗಳಿಗೆ ಸೀಮಿತವಾಗಿದ್ದಾರೆ. ಕೋಟೆ ಪ್ರಭಾಕರ್, ಸತ್ಯಪ್ರಕಾಶ್, ಪೆಟ್ರೋಲ್ ಪ್ರಸನ್ನ, ಶ್ರೀನಗರ ಕಿಟ್ಟಿ ಇತರರು ತಮ್ಮ ಪಾತ್ರದಲ್ಲಿ ಚೆನ್ನಾಗಿ ನಟಿಸಿದ್ದಾರೆ.
ಚಿತ್ರ: ಗಿರ್‌ಗಿಟ್ಲೆ
ನಿರ್ದೇಶನ: ರವಿಕಿರಣ್
ನಿರ್ಮಾಣ: ವೀರಾಂಜನೇಯ ಎಂಟರ್‌ಪ್ರೈಸಸ್
ತಾರಾಗಣ: ಪ್ರದೀಪ್, ಗುರು, ಚಂದ್ರು, ವೈಷ್ಣವಿ, ಅದ್ವಿತೀ, ಕೋಟೆ ಪ್ರಭಾಕರ್, ಸತ್ಯಪ್ರಕಾಶ್, ರಂಗಾಯಣ ರಘು, ಪೆಟ್ರೋಲ್ ಪ್ರಸನ್ನ, ಶ್ರೀನಗರ ಕಿಟ್ಟಿ ಮತ್ತಿತರರು.
* ರವಿ ರೈ