Advertisement

ಕಣ್ಣು ಕಾಣಲ್ಲ ಎಂಬ ತಾತ್ಸಾರ ಭಾವ ಬೇಡ

10:06 AM Mar 10, 2019 | Team Udayavani |

ಶಹಾಪುರ: ವಯೋವೃದ್ಧರಿಗೆ ಸಾಮಾನ್ಯವಾಗಿ ಕಣ್ಣು ಕಾಣುವುದಿಲ್ಲ ಎಂಬ ತಾತ್ಸಾರ ಭಾವನೆಯಿಂದ ಹೊರಬನ್ನಿ ಎಂದು ಯಾದಗಿರಿ ಜಿಲ್ಲಾ ಅಂಧತ್ವ ನಿವಾರಣ ಅಧಿಕಾರಿ ಡಾ| ಭಗವಂತ ಅನವಾರ ಕರೆ ನೀಡಿದರು.

Advertisement

ಮಾಜಿ ಶಾಸಕ ದಿ| ಶಿವಶೇಖರಪ್ಪಗೌಡ ಪಾಟೀಲ ಶಿರವಾಳ ಅವರ 9ನೇ ಪುಣ್ಯಸ್ಮರಣೆ ಅಂಗವಾಗಿ ದಿ| ಶಿವಶೇಖರಪ್ಪಗೌಡ ಶಿರವಾಳ ಫೌಂಡೇಶನ್‌ ಟ್ರಸ್ಟ್‌ ವತಿಯಿಂದ ಆಯೋಜಿಸಲಾಗಿದ್ದ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಹುಟ್ಟು ಸಾವುಗಳ ಮಧ್ಯದ ಬದುಕಿನಲ್ಲಿ ಪ್ರಾಪಂಚಿಕ ಜೀವನ ಅಗತ್ಯವಿದೆ. ಅದನ್ನು ಸಮರ್ಪಕವಾಗಿ ಪೂರೈಸಬೇಕಾದಲ್ಲಿ ದೃಷ್ಟಿ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಬ್ಬರು ತಮ್ಮ ಕಣ್ಣುಗಳ ರಕ್ಷಣೆ ಬಗ್ಗೆ ಕಾಳಜಿವಹಿಸಬೇಕು. ನಿರ್ಲಕ್ಷ ಸಲ್ಲದು. ಕಣ್ಣಿನ ರಕ್ಷಣೆಗಾಗಿ ಸರ್ಕಾರ ವಿವಿಧ ಯೋಜನೆ ಜಾರಿಗೊಳಿಸಿದ್ದು, ದೃಷ್ಟಿ ಕಾಣದಂತೆ ಮಾಡುವ ಗ್ಲಾಕೋಮೊ ಎನ್ನುವ ಮಾರಕ ರೋಗದ ಜಾಗೃತಿಗಾಗಿ ಪ್ರತಿ ವರ್ಷ ಗ್ಲಾಕೋಮೊ ಸಪ್ತಾಹ ಆಯೋಜಿಸಲಾಗುತ್ತಿದೆ.

ಪ್ರತಿಯೊಬ್ಬರು ಅದರ ಸದುಪಯೋಗ ಪಡಿಸಿಕೊಳ್ಳಬೇಕು. ಅಲ್ಲದೆ 40 ವರ್ಷ ದಾಟಿದ ವಯಸ್ಸಿನವರು ಕಣ್ಣಿನ ತಪಾಸಣೆ ಮಾಡುವುದು ಅವಶ್ಯಕವಾಗಿದೆ. ತದನಂತರ ಕನಿಷ್ಠ 5 ವರ್ಷಕ್ಕೊಮ್ಮೆ ಕಣ್ಣಿನ ತಪಾಸಣೆ ಮಾಡಿಸಬೇಕು ಎಂದು ಸಲಹೆ ನೀಡಿದರು.

ಆರೋಗ್ಯ ಇಲಾಖೆ ನಿವೃತ್ತ ಅಧಿಕಾರಿ ಬಸವರಾಜ ಪಟ್ಟೇದ ಮಾತನಾಡಿದರು. ಬಿಜೆಪಿ ನಗರ ಅಧ್ಯಕ್ಷ ಲಾಲನಸಾಬ್‌ ಖುರೇಶಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಗುರು ಪಾಟೀಲ ಶಿರವಾಳ, ಡಾ| ಮಹಿಪಾಲರಡ್ಡಿ ಪಾಟೀಲ, ತಾಲೂಕು ಆರೋಗ್ಯ ಅಧಿಕಾರಿ ಡಾ| ರಮೇಶ ಗುತ್ತೇದಾರ, ನಗರ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ| ಮಲ್ಲಪ್ಪ ಕಣಜಿಗಿಕರ್‌, ನೇತ್ರ ತಜ್ಞ ಡಾ| ಜಗದೀಶ ಉಪ್ಪಿನ, ತಾಲೂಕು ನೌಕರರ ಸಂಘದ ಅಧ್ಯಕ್ಷ ಸುಧಾಕರ ಗುಡಿ, ನಗರಸಭೆ ಸದಸ್ಯ ವಸಂತಕುಮಾರ ಸುರಪುರಕರ್‌, ದಿನೇಶ ಜೈನ್‌, ಗುರು ಬಾಣತಿಹಾಳ ಇದ್ದರು.

Advertisement

ಸರ್ಕಾರಿ ಆಸ್ಪತ್ರೆ ಸಿಬ್ಬಂದಿ, ಸ್ಕೌಟ್‌ ಮತ್ತು ಗೈಡ್ಸ್‌ ಕಾರ್ಯಕರ್ತರು, ಅಭಿಮಾನಿ ವರ್ಗದವರು ಭಾಗವಹಿಸಿದ್ದರು. ಬಸವರಾಜ ಗೋಗಿ ಸ್ವಾಗತಿಸಿದರು. ನಗರಸಭೆ ಸದಸ್ಯ ಬಸವರಾಜ ಆನೇಗುಂದಿ ನಿರೂಪಿಸಿ, ವಂದಿಸಿದರು. 

404 ಜನರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ
ಮಾಜಿ ಶಾಸಕ ದಿವಂಗತ ಶಿವಶೇಖರಪ್ಪಗೌಡ ಶಿರವಾಳ ಪುಣ್ಯ ಸ್ಮರಣೆ ಅಂಗವಾಗಿ ನಡೆದ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಒಟ್ಟು 404 ಜನರು ನೇತ್ರ ಶಸ್ತ್ರ ಚಿಕಿತ್ಸೆ ಲಾಭ ಪಡೆದುಕೊಂಡರು. ಶಿಬಿರದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಕ್ಕೂ ಹೆಚ್ಚು ಜನರ ನೇತ್ರ ತಪಾಸಣೆ ಮಾಡಲಾಯಿತು. 404 ಜನರಿಗೆ ಸರ್ಕಾರಿ ಆಸ್ಪತೆಯಲ್ಲಿ ನೇತ್ರ ಚಿಕಿತ್ಸೆ ನಡೆಸಲಾಯಿತು. ಜನಹಿತ್‌ ಐ ಕೇರ್‌ ಸೆಂಟರ್‌ನ ನುರಿತ ನೇತ್ರ ತಜ್ಞ ಡಾ| ಕೃಷ್ಣಮೋಹನ ಜಿಂಕಾ ಅವರ ತಂಡದಿಂದ ಯಶಸ್ವಿ ನೇತ್ರಾ ಶಸ್ತ್ರ ಚಿಕಿತ್ಸೆ ನಡೆದಿದೆ ಎಂದು ಟ್ರಸ್ಟ್‌ ಕಾರ್ಯದರ್ಶಿ ದಿನೇಶ ಜೈನ್‌ ತಿಳಿಸಿದ್ದಾರೆ

ಆಯುಷ್ಮಾನ್‌ ಭಾರತ
ಆರೋಗ್ಯ ಕಾರ್ಡ್‌ ಪಡೆಯಿರಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಆಯುಷ್ಮಾನ ಭಾರತ ಆರೋಗ್ಯ ಕಾರ್ಡ್‌ನ್ನು ಪ್ರತೊಯೊಬ್ಬರು ಪಡೆಯಬೇಕು. ಯಾವುದೇ ರೋಗದ ಚಿಕಿತ್ಸೆಗೆ ಈ ಕಾರ್ಡ್‌ನಿಂದ 5 ಲಕ್ಷ ರೂ. ವರೆಗೆ ಉಳಿತಾಯವಾಗಲಿದೆ ಎಂದು ಜಿಲ್ಲಾ ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ನೋಡಲ್‌ ಅಧಿಕಾರಿ ಡಾ| ಭಗವಂತ ಅನವಾರ ತಿಳಿಸಿದರು. ಆಧಾರ್‌ ಮತ್ತು ರೇಷನ್‌ ಕಾರ್ಡ್‌ ಸಮೇತ ಆಸ್ಪತ್ರೆ ಕಚೇರಿಗೆ ತೆರಳಿ ಆಯುಷ್ಮಾನ ಭಾರತ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಪಡೆಯಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next