ಮಾಯಕೊಂಡ: ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಶಿಕ್ಷಣ ಪಡೆಯಬೇಕು ಎಂದು ಶಾಸಕ ಪ್ರೊ| ಲಿಂಗಣ್ಣ ಕರೆ ನೀಡಿದರು. ಗ್ರಾಮದ ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2018-19 ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ ಹಾಗೂ ರೋವರ್ಮತ್ತು ರೇಂಜರ್ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ವಿದ್ಯಾವಂತರಿಗೆ ನೌಕರಿ ದೊರಕುವುದು ಕಷ್ಟಕರವಾಗಿದೆ.
ಜೀವನದಲ್ಲಿ ಪ್ರತಿಭಾವಂತರಿಗೆ ಅವಕಾಶಗಳು ಸಿಗುತ್ತವೆ. ಕೀಳರಿಮೆ ತೊರೆದು, ಉತ್ತಮ ವಿದ್ಯಾಭ್ಯಾಸ ಮಾಡಿ, ಸರ್ಕಾರದ ಸೌಲಭ್ಯಗಳನ್ನು ಪಡೆದು ತಂದೆ-ತಾಯಿ ಹಾಗೂ ಸಮಾಜಕ್ಕೆ ಹೆಸರು ತರುವಂತೆ ಉತ್ತಮರಾಗಬೇಕು ಎಂದರು.
ದಾವಣಗೆರೆ ದವನ್ ಕಾಲೇಜು ಪ್ರಾಚಾರ್ಯ ಪ್ರೊ| ಬಾತಿ ಬಸವರಾಜು ಮಾತನಾಡಿ. ಕನ್ನಡ ಭಾಷೆಯ ಜತೆಗೆ ಪ್ರಮುಖವಾಗಿ ಇಂಗ್ಲಿಷ್ ಭಾಷೆ ಕಲಿಯಬೇಕು. ಹಾಗೂ ಎಂದೂ ಪಲಾಯನವಾದ ವ್ಯಕ್ತಿತ್ವ ಬೇಡ ಎಂದರು. ಪ್ರಾಚಾರ್ಯ ಪಾಲಾಕ್ಷಿನಾಯ್ಕ, ಆಂಗ್ಲ ಪ್ರಾಧ್ಯಾಪಕ ಡಾ| ಚಂದ್ರಶೇಖರಪ್ಪ ಮಾತನಾಡಿದರು.
ಗ್ರಾಪಂ ಸದಸ್ಯ ಸಂಡೂರ್ ರಾಜಶೇಖರ್, ಡಾ| ಸುಪ್ರಿಯಾ ಆರ್, ರಾಘವೇಂದ್ರರಾವ್, ಮಂಜುನಾಥ, ಪ್ರಸನ್ನ, ನಟರಾಜು, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ, ಮುಖಂಡರಾದ ನೀಲಪ್ಪ, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಉಷಾ, ಪೂಜಾ, ಸಿಂಧು ಸಂಗಡಿಗರು ಪ್ರಾರ್ಥಿಸಿದರು.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ದ್ವಿತೀಯ ದರ್ಜೆ ಸಹಾಯಕ ಎಚ್.ಎಸ್. ತಿಲಕ್ ನಗದು ಬಹುಮಾನ ನೀಡಿ ಗೌರವಿಸಿದರು.