Advertisement

“ಆಸೆ-ಆಮಿಷಗಳಿಗೆ ಬಲಿಯಾಗದಿರಿ’

01:31 PM Jul 03, 2018 | |

ಬಾಗಲಕೋಟೆ: ಪೊಲೀಸ್‌ ವೃತ್ತಿ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಸವಾಲುಗಳ ಜೊತೆಗೆ ಆಸೆ, ಆಮಿಷಗಳು ಬರಲಿದ್ದು,  ಆಮಿಷಗಳಿಗೆ ಬಲಿಯಾಗಬಾರದು ಎಂದು ಬೆಳಗಾವಿ ಉತ್ತರ ವಲಯದ ಪೊಲೀಸ್‌ ಮಹಾನಿರೀಕ್ಷಕ ಅಲೋಕಕುಮಾರ ಪೊಲೀಸ್‌ ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.

Advertisement

ನವನಗರ ಪೊಲೀಸ್‌ ಪರೇಡ್‌ ಮೈದಾನಲ್ಲಿ ಹಮ್ಮಿಕೊಂಡ 9ನೇ ತಂಡದ ಸಶಸ್ತ್ರ ಪೊಲೀಸ್‌ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಅಪರಾಧ ಎಸಗಿ ಬಂಧಿತರಾದ ಕೈದಿಗಳನ್ನು ನ್ಯಾಯಾಲಯ ಮತ್ತು ಆಸ್ಪತ್ರೆಗಳಿಗೆ ಕರೆದೊಯ್ಯುವ ವೇಳೆಯಲ್ಲಿ ಬಹಳಷ್ಟು ಅಪರಾಧಿಗಳು ಪರಾರಿಯಾಗುತ್ತಿದ್ದಾರೆ. ಪೊಲೀಸ್‌ ಸಿಬ್ಬಂದಿ ಜೊತೆ ಕೈ ಜೋಡಿಸಿ ಪರಾರಿಯಾಗುವಲ್ಲಿ ಕಾರಣೀಭೂತರಾಗಿದ್ದಾರೆ. ಇದರಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ ಎಂದರು.

ಸದ್ಯ ಪೊಲೀಸ್‌ ತರಬೇತಿ ಶಾಲೆಯಲ್ಲಿ ತರಬೇತಿ ಹೊಂದಿದ 116 ಜನ ಇಲಾಖೆಯ ಆಧಾರ ಸ್ತಂಭಗಳಾಗಿದ್ದು, ತಮ್ಮ ವೃತ್ತಿಯಲ್ಲಿ ಉತ್ತಮ ಸೇವೆ ಸಲ್ಲಿಸುವ ಮೂಲಕ ತಮ್ಮ ಕುಟುಂಬ ಹಾಗೂ ಇಲಾಖೆಗೆ ಒಳ್ಳೆಯ ಹೆಸರು ತರುವ ಕೆಲಸ ಮಾಡಬೇಕು ಎಂದರು.

116 ಜನರಲ್ಲಿ 47 ಜನ ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿದವರಾಗಿದ್ದೀರಿ. ನಿಮ್ಮ ಕರ್ತವ್ಯದಲ್ಲಿ ಕಲಿಕೆ ನಿರಂತರವಾಗಿರಲಿ. ತಮ್ಮ ಮುಂದಿನ ಜೀವನದಲ್ಲಿ ಮಾನಸಿಕ, ದೈಹಿಕವಾಗಿ ಸದೃಢರಾಗಿ ಶಿಸ್ತು ಮತ್ತು ಸಜ್ಜನಿಕೆ ಹಾಗೂ ಸಂಯಮಕ್ಕೆ ಮಾದರಿಯಾಗಿಬೇಕು ಎಂದರು. 

Advertisement

ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಂ ಮಾತನಾಡಿ, ನೀವು ದೈಹಿಕ, ಮಾನಸಿಕ ಮತ್ತು ಸಮತೋಲನದ ಎಲ್ಲ ಆಯಾಮಗಳನ್ನು ದಾಟಿ ಆಯ್ಕೆಯಾಗಿ ಬಂದಿದ್ದೀರಿ. ಈ ಪರೇಡ್‌ನ‌ಲ್ಲಿ ತಮ್ಮ ಚೈತನ್ಯ ಮೆರೆದಿದ್ದೀರಿ. ಉನ್ನತ ವ್ಯಾಸಂಗದ ನಂತರವೂ ಇಂತಹ ಸೇವೆಗೆ ಬರುತ್ತಿರುವುದು ಸಂತೋಷದ ಸಂಗತಿ ಎಂದು ತಿಳಿಸಿದರು.

ಡಿವೈಎಸ್ಪಿ ಎಸ್‌.ಬಿ. ಗಿರೀಶ ತರಬೇತಿ ಶಾಲೆಯ ವರದಿ ವಾಚಿಸಿದರು. ಇದೇ ಸಂದರ್ಭದಲ್ಲಿ 9ನೇ ತಂಡದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಆರಂಭದಲ್ಲಿ ಮುಖ್ಯ ಅತಿಥಿಗಳಿಂದ ತಂಡಗಳ ಪರಿವೀಕ್ಷಣೆ, ನಿಧಾನ ಹಾಗೂ ತ್ವರಿತಗತಿಯ ಪಥಸಂಚಲನ, ಗೌರವ ವಂದನೆ, ಧ್ವಜಗಳ ಆಗಮನ, ಪೊಲೀಸ್‌ ಬ್ಯಾಂಡ್‌ನಿಂದ ರಾಷ್ಟ್ರಗೀತೆ, ಪ್ರತಿಜ್ಞಾವಿಧಿ ಬೋಧನೆ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಒಳಾಂಗಣ ಮತ್ತು ಹೊರಾಂಗಣ ಬೋಧಕರಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ಸ್ವಾಗತಿಸಿದರು. ಜಾಸ್ಮಿನ್‌ ಕಿಲ್ಲೇದಾರ ನಿರೂಪಿಸಿದರು. ಸಂಜೀವ ಕಾಂಬಳೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next