Advertisement

ರೈತರೇ ಹಣ ಹಾಕಿ ರೈತರೇ ಕಥಾವಸ್ತುವಾದ ಸಿನಿಮಾ ಮಂಥನ್‌ ಒಮ್ಮೆ ನೋಡಿ

06:39 PM May 31, 2024 | Team Udayavani |

ಮಣಿಪಾಲ : ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ಮಂಥನ್ ಚಲನಚಿತ್ರ ಹೊಸ ರೂಪ ಪಡೆದು ಜೂನ್ 1 ಮತ್ತು 2 ರಂದು ದೇಶದ 50 ನಗರಗಳ 100 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಪೈಕಿ ರಾಜ್ಯದ ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಹಾಗೂ ಮೈಸೂರಿನ ಹನ್ನೆರಡು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ವೀಕ್ಷಣೆಗೆ ಲಭ್ಯವಾಗಲಿದೆ.

Advertisement

ಬೆಂಗಳೂರಿನಲ್ಲಿ ಪಿವಿಆರ್ ಮೆಗಾಸಿಟಿ, ಮಾರ್ಕೆಟ್‌ ಸಿಟಿ, ಡಿಸಿ ರೆಕ್ಸ್, ಓರಿಯಾನ್, ಐನಾಕ್ಸ್ ,ಮಾಲ್ ಆಫ್ ಏಷ್ಯಾ, ಸಿನೆಪೊಲಿಸ್ ನ ಆರ್ ಎಂಎಂ, ಶಾಂತಿನಿಕೇತನ್, ಸಿ. ಸೋಭಾ ಗ್ಲೋಬಲ್, ಮಂಗಳೂರಿನ ಪಿವಿಆರ್ ಫೋರಂ, ಮೈಸೂರಿನ ಪಿವಿಆರ್ ಫೋರಂ, ಐನಾಕ್ಸ್ ಮಾಲ್ ಐಎಫ್, ಹುಬ್ಬಳ್ಳಿಯ ಪಿವಿಆರ್ ಹುಬ್ಬಳ್ಳಿ ಹಾಗೂ ಧಾರವಾಡದ ಐನಾಕ್ಸ್ ಸ್ಮಾರ್ಟ್ ಸಿಟಿ ಥಿಯೇಟರುಗಳಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.

ಮಂಥನ್ ಬಹಳ ವಿಶಿಷ್ಟವಾದ ಸಿನಿಮಾ. 1976 ರಲ್ಲಿ ಶ್ಯಾಮ್ ಬೆನಗಲ್ ನಿರ್ದೇಶಿಸಿದ ಈ ಸಿನಿಮಾಕ್ಕೆ ನಿರ್ಮಾಪಕರಾದವರು ಗುಜರಾತಿನ 5 ಲಕ್ಷ ಮಂದಿ ರೈತರು. ಅವರು ತಲಾ ಎರಡು ರೂ. ಗಳನ್ನು ನೀಡಿ ಈ ಚಿತ್ರವನ್ನು ನಿರ್ಮಿಸಿದ್ದರು. ರೈತರಿಂದ ಹತ್ತು ಲಕ್ಷ ರೂ. ಗಳನ್ನು ಸಂಗ್ರಹಿಸಿ ಸಿನಿಮಾ ನಿರ್ಮಿಸಿದ ಕಾರಣ, ಭಾರತದ ಮೊದಲ ಕ್ರೌಡ್ ಫಂಡಿಂಗ್‌ ಸಿನಿಮಾವಿದು ಎಂಬ ಖ್ಯಾತಿ ಪಡೆದಿತ್ತು. ನ್ಯಾಷನಲ್ ಫಿಲ್ಮ್ ಆರ್ಕೈವ್ ರಿಸ್ಟೋರ್ ಮಾಡಿರುವ ಚಿತ್ರ  ಭಾರತದಾದ್ಯಂತ ಬಿಡುಗಡೆಯಾಗಲಿದೆ.

ಈಗ ಈ ಸಿನಿಮಾ ಮರು ಬಿಡುಗಡೆಯಾಗುತ್ತಿರುವುದಕ್ಕೆ ಕಾರಣವಿದೆ. 48 ವರ್ಷಗಳ ಬಳಿಕ ಈ ಸಿನಿಮಾವನ್ನು ಫಿಲ್ಮ್ ಹೆರಿಟೇಜ್ ಫೌಂಡೇಷನ್ (ಎಫ್ ಎಚ್ ಎಫ್) ಅವರು ರೆಸ್ಟೋರ್ (ಪುನರ್ ನಿರ್ಮಾಣ) ಮಾಡಿದ್ದಾರೆ. ಇತ್ತೀಚೆಗೆ ಫ್ರಾನ್ಸ್ ನ ಕಾನ್ಸ್ ನಲ್ಲಿ ಮುಗಿದ 77ನೇ ಚಲನಚಿತ್ರೋತ್ಸವದಲ್ಲೂ ಈ ಸಿನಿಮಾ ರೆಸ್ಟೋರ್ ಕ್ಲಾಸಿಕ್ ವಿಭಾಗದಲ್ಲಿ ಪ್ರದರ್ಶಿತವಾಗಿತ್ತು. ಈ ಚಿತ್ರದಲ್ಲಿನ ಪ್ರಮುಖ ನಟ ನಾಸಿರುದ್ದೀನ್ ಷಾ ಹಾಗೂ ಫೌಂಡೇಷನ್ ನ ಶಿವೇಂದ್ರ ಸಿಂಗ್ ಡುಂಗರ್ ಪುರ್ ಮತ್ತಿತರರು ಭಾಗವಹಿಸಿದ್ದನ್ನು ಸ್ಮರಿಸಬಹುದು. ಈ ಹಿನ್ನೆಲೆಯಲ್ಲಿ ಈ ಪುನರ್ ನಿರ್ಮಿತ ಪ್ರತಿಯನ್ನು ಸಿನಿಮಾ ಪ್ರೇಕ್ಷಕರು ವೀಕ್ಷಿಸಲಿ ಎಂದು ಮರು ಬಿಡುಗಡೆ ಮಾಡಲಾಗುತ್ತಿದೆ.

ಇದು ನಿಜವಾದಲೂ ರೈತರ ಸಿನಿಮಾ. ಬರೀ ಪಾತ್ರವಷ್ಟೇ ಅಲ್ಲ. ಇದರ ಕಥೆಯ ಹೂರಣವೂ ರೈತರ ಬದುಕಿನದ್ದೇ. ಜತೆಗೆ ಇದಕ್ಕೆ ಹಣ ಹೂಡಿದವರೂ ಅವರೇ. ಗುಜರಾತಿನ ಖೇಡ ಜಿಲ್ಲೆಯ ಆನಂದ್ ಗ್ರಾಮದಲ್ಲಿ ರೈತರು ಸೇರಿ ನಿರ್ಮಿಸಿದ ಹಾಲಿನ ಸೊಸೈಟಿಯ ಮೂಲಕ ಉಂಟಾದ ಕ್ಷೀರ ಕ್ರಾಂತಿಯೇ ಸಿನಿಮಾದ ಕಥಾವಸ್ತು. ಒಂದು ಸೊಸೈಟಿಯ ಯಶಸ್ಸು ಗುಜರಾತಿನ ಉಳಿದ ಹಳ್ಳಿಗಳಿಗೂ ಹಬ್ಬಿತು. ಎಲ್ಲ ಕಡೆಗೂ ಸೊಸೈಟಿಗಳು ಹುಟ್ಟಿಕೊಂಡವು. ಅವುಗಳಿಗೆ ಪೂರಕವಾಗಿ ಒಂದು ಯೂನಿಯನ್ ಆ ಸೊಸೈಟಿಯ (ಅಮುಲ್) ಸ್ಥಾಪನೆಗೆ ಮುನ್ನುಡಿಯಾಯಿತು. ಆ ಬಳಿಕ ಅದನ್ನು ಮುನ್ನಡೆಸಲು ಬಂದ ವರ್ಗೀಸ್ ಕುರಿಯನ್ ಇಡೀ ಸಹಕಾರ ಸಂಘಟನೆಯನ್ನು ಚಳವಳಿಯ ರೂಪಕ್ಕೆ ತಂದು ಕ್ಷೀರ ಕ್ರಾಂತಿಗೆ ಕಾರಣವಾದರು. ಈ ಸಿನಿಮಾವೂ ಸಹಕಾರ ಸಂಘಟನೆಯ ಶಕ್ತಿ ಹಾಗೂ ಸಾಧ್ಯತೆಯನ್ನು ಮುಖ್ಯ ನೆಲೆಯಲ್ಲಿ ಹೇಳಿದೆ. ಅದರೊಂದಿಗೆ ಅಂದಿನ ಸಾಮಾಜಿಕ ಸ್ಥಿತಿ ಗತಿಗಳನ್ನೂ ದಾಖಲಿಸುವ ಪ್ರಯತ್ನ ಮಾಡಿದೆ.

Advertisement

ಈ ಸಿನಿಮಾ 48 ವರ್ಷಗಳ ಹಿಂದೆ ಬಿಡುಗಡೆಯಾದಾಗ ಯಾರು ನೋಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರಂತೆ. ಆದರೆ ಅವೆಲ್ಲವನ್ನೂ ಸುಳ್ಳಾಗಿಸುವಂತೆ ಎಲ್ಲ ರೈತರು ಅಹಮದಾಬಾದ್‌, ವಡೋದರಂದಂಥ ನಗರಗಳಲ್ಲಿನ ಚಿತ್ರಮಂದಿರಗಳಿಗೆ ‘ನಮ್ಮ ಸಿನಿಮಾ ನಾವು ನೋಡದೆ ಇರಲಿಕ್ಕೆ ಸಾಧ್ಯವಿದೆಯೇ’ ಎಂದುಕೊಂಡು ಎತ್ತಿನಗಾಡಿಗಳಲ್ಲಿ ತಂಡೋಪತಂಡವಾಗಿ ಬಂದರಂತೆ. ಆ ಮೂಲಕ ಸಿನಿಮಾಕ್ಕೆ ಕಥಾವಸ್ತುವಾಗಿ, ಸಿನಿಮಾಕ್ಕೆ ಹಣ ಹೂಡಿಕೆ ಮಾಡಿ ಸಿನಿಮಾವನ್ನೂ ವೀಕ್ಷಿಸಿ ಯಶಸ್ಸುಗೊಳಿಸಿದ್ದರು.

ಈ ಸಿನಿಮಾಕ್ಕೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಇದರ ನಿರ್ದೇಶಕರಾದ ಶ್ಯಾಮ್ ಬೆನಗಲ್ ಕರ್ನಾಟಕ ಮೂಲದವರು. ಖ್ಯಾತ ನಟ ಹಾಗೂ ನಿರ್ದೇಶಕ ಗಿರೀಶ್ ಕಾರ್ನಾಡ್, ಮತ್ತೊಬ್ಬ ಪ್ರಸಿದ್ಧ ನಟ ಅನಂತನಾಗ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಸಿನಿಮಾವೂ ಅದ್ಭುತ ಪ್ರತಿಭೆಗಳ ಸಂಗಮವಾಗಿದ್ದು ಮತ್ತೊಂದು ವಿಶೇಷ. ಶ್ಯಾಮ್ ಬೆನಗಲ್ ರಂಥ ನಿರ್ದೇಶಕರಿಗೆ ಗಿರೀಶ್ ಕಾರ್ನಾಡ್, ನಾಸಿರುದ್ದೀನ್ ಷಾ, ಸ್ಮಿತಾ ಪಾಟೀಲ್, ಮೋಹನ್ ಅಗಾಸೆ, ಅನಂತನಾಗ್, ಅಮರೀಶ್ ಪುರಿ, ಛಾಯಾಗ್ರಹಣಕ್ಕೆ ಗೋವಿಂದ ನಿಹಲಾನಿ, ಸಂಭಾಷಣೆ ಖೈಫಿ ಆಜ್ಮಿಯವರದ್ದಾಗಿತ್ತು. ಚಿತ್ರಕಥೆ ವಿಜಯ್ ತೆಂಡುಲ್ಕರ್. ಒಬ್ಬರಿಗಿಂತ ಮತ್ತೊಬ್ಬರು ಪ್ರತಿಭಾ ಸಂಪನ್ನರು.

1976 ರಲ್ಲಿ ಈ ಚಿತ್ರಕ್ಕೆ ಹಾಗೂ ಚಿತ್ರಕಥೆಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು. ಅಲ್ಲದೇ ವನರಾಜ್ ಭಾಟಿಯಾ ಸಂಗೀತ ನಿರ್ದೇಶಿಸಿದ್ದ ಈ ಚಿತ್ರದ ಶೀರ್ಷಿಕೆ ಗೀತೆ ಹಾಡಿದ್ದಕ್ಕೆ ಪ್ರೀತಿ ಸಾಗರ್ ಅವರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿತ್ತು. ಈ ಸಿನಿಮಾ ಮುಂಬಯಿ, ಆಹಮದಾಬಾದ್‌, ವಡೋದರ, ಪುಣೆ, ನಾಗಪುರ, ದಿಲ್ಲಿ, ಚೆನ್ನೈ, ತಿರುವನಂತಪುರಂ, ಕೊಚ್ಚಿ, ಕೋಲ್ಕತ್ತಾ, ಭೋಪಾಲ್, ಇಂದೋರ್, ಪಾಟ್ನಾ, ಹೈದರಾಬಾದ್ ಮತ್ತಿತರ ನಗರಗಳಲ್ಲಿ ಬಿಡುಗಡೆಯಾಗಿದೆ. ರೈತರ ಸಿನಿಮಾ ನೋಡದಿದ್ದರೆ ಒಮ್ಮೆ ನೋಡಿ ಬಿಡಿ.

Advertisement

Udayavani is now on Telegram. Click here to join our channel and stay updated with the latest news.

Next