Advertisement

ಕೆಲಸ ಕಾರ್ಯಗಳಲ್ಲಿ ವಿಳಂಬ ಬೇಡ: ಡಿಸಿ ದಯಾನಂದ

04:39 PM Aug 10, 2018 | |

ಶಿವಮೊಗ್ಗ: ಸಾರ್ವಜನಿಕರ ಕೆಲಸ ಕಾರ್ಯಗಳನ್ನು ವಿಳಂಬ ಮಾಡದೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದು ನೂತನ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಅವರು ಪ್ರಗತಿ ಪರಿಶೀಲನೆ ನಡೆಸಿದರು.

Advertisement

ಕಾನೂನು ಚೌಕಟ್ಟಿನೊಳಗೆ ವಿಲೇವಾರಿ ಮಾಡಬಹುದಾದ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ
ಮಾಡಲು ಸಾಧ್ಯವಿಲ್ಲ ಎಂದು ಷರಾ ಬರೆದು ಕಡತವನ್ನು ಮುಕ್ತಾಯಗೊಳಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ನೀತಿಯನ್ನು ಅನುಸರಿಸಬಾರದು. ಸಕಾಲ ಯೋಜನೆ ಅಡಿ ಜಿಲ್ಲೆಯ ರ್‍ಯಾಂಕಿಂಗ್‌ ಉತ್ತಮ ಪಡಿಸಬೇಕು. ಸಕಾಲ ಯೋಜನೆಯಡಿ ನಿಗದಿತ ಸಮಯದ ಒಳಗಾಗಿ ಅರ್ಜಿ ವಿಲೇವಾರಿ ಮಾಡಲು ವಿಫಲರಾಗುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.

ಕಳೆದ ತಿಂಗಳು ಮುಖ್ಯಮಂತ್ರಿ ಅವರು ಎಲ್ಲಾ ಜಿಲ್ಲೆಗಳ ಪ್ರಗತಿ ಪರಿಶೀಲನೆ ನಡೆಸಿದ್ದು, ಈ ಸಂದರ್ಭದಲ್ಲಿ ಸೂಚಿಸಿರುವಂತೆ ಎಲ್ಲಾ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಚುರುಕುಗೊಳಿಸಬೇಕು. ಗಂಗಾ ಕಲ್ಯಾಣ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ನಾನಾ ನಿಗಮಗಳು ಇದುವರೆಗೆ ಕೊರೆದಿರುವ ಬೋರ್‌ವೆಲ್‌ ಗಳ ಸಂಖ್ಯೆ, ವಿದ್ಯುದ್ದೀಕರಣಕ್ಕೆ ಬಾಕಿ ಇರುವ ಪ್ರಕರಣಗಳು, ವಿಳಂಬಕ್ಕೆ ಕಾರಣ ಕುರಿತಾದ ಸಮಗ್ರ ಮಾಹಿತಿಯನ್ನು ಒಂದು ವಾರದ
ಒಳಗಾಗಿ ಸಲ್ಲಿಸಬೇಕು. ಈ ಕುರಿತು ಪ್ರತ್ಯೇಕವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಅವರು ಹೇಳಿದರು.

 ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿ, ಪರಿಹಾರ ವಿತರಣೆ ಕಾರ್ಯ, ಬೆಳೆ ವಿಮೆ ವಿತರಣೆಯಲ್ಲಿನ ವಿಳಂಬವನ್ನು ಸರಿಪಡಿಸಬೇಕು. ಕಂದಾಯ ಅದಾಲತ್‌ ಇನ್ನೂ 6 ತಿಂಗಳ ಕಾಲ ವಿಸ್ತರಿಸಲಾಗಿದ್ದು, ಜಿಲ್ಲೆಯಲ್ಲಿ ಪ್ರಸ್ತುತ 11ಸಾವಿರ
ಪ್ರಕರಣಗಳು ಬಾಕಿಯಿವೆ. ಅವುಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. 94ಸಿ ಮತ್ತು 94ಸಿಸಿ ಪ್ರಕರಣಗಳಲ್ಲಿ ಅರ್ಜಿಯನ್ನು ವಿಳಂಬ ಮಾಡದೆ ಅರ್ಹತೆ ಆಧಾರದಲ್ಲಿ ಇತ್ಯರ್ಥಗೊಳಿಸಬೇಕು ಎಂದು ತಿಳಿಸಿದರು.

ಹಸಿರು ಕರ್ನಾಟಕ ಕಾರ್ಯಕ್ರಮ: ಅರಣ್ಯೇತರ ಭೂಮಿ ಹಾಗೂ ಖಾಸಗಿ ಜಮೀನಿನಲ್ಲಿ ಸಸಿಗಳನ್ನು ಬೆಳೆಸುವ
ಮಹತ್ವಾಕಾಂಕ್ಷೆಯ ಹಸಿರು ಕರ್ನಾಟಕ ಕಾರ್ಯಕ್ರಮಕ್ಕೆ ಆ. 15ರಂದು ರಾಜ್ಯದಾದ್ಯಂತ ಚಾಲನೆ ದೊರೆಯಲಿದೆ. ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳು, ಸಂಘ-ಸಂಸ್ಥೆಗಳು ಕೈ ಜೋಡಿಸಬೇಕು ಎಂದರು. ಆ. 18ರವರೆಗೆ ಹಸಿರು ಕರ್ನಾಟಕ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ಶಾಲಾ- ಕಾಲೇಜು, ಅಂಗನವಾಡಿಗಳಲ್ಲಿ ಸಸಿಗಳನ್ನು ನೆಡಲು ಕಾರ್ಯಕ್ರಮ ರೂಪಿಸಬೇಕು.

Advertisement

ಇದೇ ರೀತಿ ರೈತರು ತಮ್ಮ ಜಮೀನಿನ ಸುತ್ತಲೂ ಗಿಡಗಳನ್ನು ನೆಡಲು ಪ್ರೋತ್ಸಾಹಿಸಬೇಕು. ಎಲ್ಲಾ ಸರ್ಕಾರಿ ಕಚೇರಿ ಆವರಣದಲ್ಲಿ ಸ್ಥಳಾವಕಾಶ ಇರುವ ಕಡೆಗಳಲ್ಲಿ ಸಸಿಗಳನ್ನು ನೆಡಬೇಕು. ಇದೇ ರೀತಿ ಕ್ವಾರಿಗಳು ಇರುವ ಕಡೆಗಳಲ್ಲಿ ಅದರ ಸುತ್ತಲೂ ಎರಡು ಸಾಲು ಸಸಿಗಳನ್ನು ಕಡ್ಡಾಯವಾಗಿ ನೆಡಲು ಆದೇಶ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯ 700 ಶಾಲೆ, ಅಂಗನವಾಡಿಗಳಲ್ಲಿ ತೆಂಗು, ನುಗ್ಗೆ, ಪಪ್ಪಾಯಿ, ಸಪೋಟ, ಬಾಳೆ ಗಿಡಗಳನ್ನು ಹಾಗೂ ತರಕಾರಿ ಬೀಜಗಳನ್ನು ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಯೋಗೀಶ್‌ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಮರಿಯಪ್ಪ ಮತ್ತಿತರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next