Advertisement

ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿ ಘೋಷಿಸಬೇಡಿ; ಸೋಲಿಗರ ಪ್ರತಿಭಟನೆ

06:30 PM May 26, 2022 | Team Udayavani |

ಚಾಮರಾಜನಗರ: ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿ ಘೋಷಿಸಬಾರದೆಂದು ಒತ್ತಾಯಿಸಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ ಹಾಗೂ ಹನೂರು ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಆವರಣದಿಂದ ಮೆರವಣಿಗೆ ಹೊರಟ ಪ್ರತಿಭ
ಟನಾಕಾರರು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಧರಣಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ.ಸಿ.ಮಾದೇಗೌಡ ಮಾತನಾಡಿ, ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಅರಣ್ಯಪ್ರದೇಶದಲ್ಲಿ 56 ಪೋಡುಗಳು, ಕಾಲೋನಿಗಳಲ್ಲಿ 2500 ಸೋಲಿಗ ಕುಟುಂಬಗಳು ಸಮಾರು 15000 ಜನರ ಅರಣ್ಯದ ಮಧ್ಯದಲ್ಲಿ ಮತ್ತು ಅಂಚಿನಲ್ಲಿ ವಾಸವಾಗಿದ್ದು, ಅರಣ್ಯದಲ್ಲಿ ದೊರೆಯುವ ಕಿರು ಅರಣ್ಯ ಉತ್ಪನ್ನಗಳು ಹಾಗೂ ಅರಣ್ಯ ಭೂಮಿಯಲ್ಲಿ ವ್ಯವಸಾಯ ಮಾಡಿ ಜೀವನ ನಡೆಸುತ್ತಿದ್ದೇವೆ. ಸೋಲಿಗರಾದ ನಾವುಗಳು ಈ ಅರಣ್ಯಪ್ರದೇಶವನ್ನು ಮತ್ತು ವನ್ಯಜೀವಿಗಳನ್ನು ಶತಶತಮಾನಗಳಿಂದಲೂ ಸಂರಕ್ಷಿಸಿಕೊಂಡು ಬಂದಿರುತ್ತದೆ ಎಂದರು.

ಮಲೇಮಹದೇಶ್ವರಸ್ವಾಮಿ ಸೋಲಿಗರ ಕುಲದೈವವಾಗಿರುತ್ತದೆ. ಮತ್ತು ಮಲೆ ಮಹದೇಶ್ವರ ಸ್ವಾಮಿಯವರು ಈ ಪ್ರದೇಶಕ್ಕೆ ಬರುವುದಕ್ಕಿಂತಲೂ ಹಿಂದಿನಿಂದಲೂ ಸೋಲಿಗರು ಇಲ್ಲಿ ನೆಲೆಸಿರುತ್ತೇವೆ. ಹುಲಿ ಇತರೆ ಪ್ರಾಣಿಗಳು ಮತ್ತು ಸೋಲಿಗರು ಶತಶತಮಾನಗಳಿಂದಲೂ ಒಟ್ಟಿಗೆ ಬದುಕುತ್ತಿದ್ದೇವೆ. ಹುಲಿಗಳ ನಡವಳಿಕೆ ಸೋಲಿಗರಿಗೆ ಗೊತ್ತಿದೆ.

ಸೋಲಿಗರ ನಡವಳಿಕೆ ಹುಲಿಗಳಿಗೆ ತಿಳಿದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕಾನೂನು ಪ್ರಕಾರ ಗ್ರಾಮಸಭೆ ನಡೆಸದೆ ಮತ್ತು 19 ಮತ್ತು 21ನೇ ಅಧಿಸೂಚನೆ ಹೊರಡಿಸದೆ ಗ್ರಾಮಸಭೆಯ ಒಪ್ಪಿಗೆ ಇಲ್ಲದೆ ಘೋಷಿಸುವುದು ಕಾನೂನು ಉಲ್ಲಂಘನೆಯಾಗುತ್ತದೆ ಎಂದರು.

Advertisement

ಮಲೇಮಹದೇಶ್ವರ ಬೆಟ್ಟ ಪವಿತ್ರ ಕ್ಷೇತ್ರವಾಗಿರುವುದರಿಂದ ದಿನನಿತ್ಯ ಲಕ್ಷಾಂತರ ಭಕ್ತಾದಿಗಳು ದೇವರ ದರ್ಶನ ಪಡೆಯಲು ಭೇಟಿ ನೀಡುತ್ತಿದ್ದಾರೆ. ಈ ಯೋಜನೆಯಿಂದ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನಗಳು ನಿಷೇಧ ಮತ್ತು ಕಾಲು ನಡಿಗೆ ನಿಷೇಧದಿಂದ ಮಾದಪ್ಪನ ಭಕ್ತಾದಿಗಳಿಗೆ ತೊಂದರೆಯಾಗುತ್ತದೆ. ಈ ಅರಣ್ಯಪ್ರದೇಶದಲ್ಲಿ ಸೋಲಿಗರ 56 ಪೋಡುಗಳು ಬೇ2ಗಂಪಣಿಗ ಸಮುದಾಯದವರು ಹಾಗೂ ಇತರೆ ಸಮುದಾಯಗಳು ಸುಮಾರು 150 ಗ್ರಾಮಗಳು ಅರಣ್ಯದ ಮಧ್ಯದಲ್ಲಿ ಮತ್ತು ಅರಣ್ಯದ ಅಂಚಿನಲ್ಲಿ ವಾಸವಿರುತ್ತಾರೆ. ಈ ಯೋಜನೆಯಿಂದ ಈ ಎಲ್ಲಾ ಗ್ರಾಮಗಳಿಗೂ ಸಹ ತೊಂದರೆಯಾಗುತ್ತದೆ.

ಪರಿಸರವಾದಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳ ಒತ್ತಡಕ್ಕೆ ಮಣಿದು ಹುಲಿಗಳ ಸಂಖ್ಯೆ ತುಂಬ ಕಡಿಮೆ ಇದ್ದರೂ ಸಹ ಘೋಷಿಸುವುದು ಸರಿಯಾದ ಕ್ರಮವಲ್ಲ. ಇದೊಂದು ಕಾನೂನಬಾಹಿರವಾದ ಕ್ರಮವಾಗಿರುತ್ತದೆ. ಆದ್ದರಿಂದ ಈ ಹುಲಿಯೋಜನೆ ಘೋಷಣೆಯನ್ನು ಕೈ ಬಿಡಬೇಕು ಎಂದು ಡಾ. ಸಿ.ಮಾದೇಗೌಡ ಒತ್ತಾಯಿಸಿದರು. ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಮಹದೇವ, ಯಳಂದೂರು ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ದಾಸೇಗೌಡ, ಕಾರ್ಯದರ್ಶಿ ಜಡೇಗೌಡ, ಹನೂರು ತಾಲೂಕು ಅಧ್ಯಕ್ಷ ಯು ರಂಗೇಗೌಡ, ಕಾರ್ಯದರ್ಶಿ ವಿ.ಮುತ್ತ ಯ್ಯ, ಚಾಮರಾಜ ನಗರ ಅಧ್ಯಕ್ಷ ಸಿ.ಕೋಣೂರೇಗೌಡ, ಕಾರ್ಯದರ್ಶಿ ನಂಜೇಗೌಡ, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷೆ ಪುಟ್ಟಮ್ಮ, ಕಾರ್ಯದರ್ಶಿ ಮಾಧು, ಮುಖಂಡರಾದ ಮಹದೇವಯ್ಯ, ಎಂ.ರಂಗೇಗೌಡ, ಮುನಿಯಮ್ಮ, ಮಾದಪ್ಪ, ಚಂದ್ರಪ್ಪ, ಮಹದೇವಯ್ಯ, ನಾಗಮ್ಮ ಬಸಮ್ಮ ಇದ್ದರು.

ಅರಣ್ಯಪ್ರದೇಶದಲ್ಲಿರುವ ಸೋಲಿಗರಿಗೂ ಸಮಸ್ಯೆ
ಅರಣ್ಯ ಹಕ್ಕು ಕಾಯಿದೆ 2006ರಡಿಯಲ್ಲಿ 25 ಸಮುದಾಯ ಹಕ್ಕುಗಳು ಮತ್ತು 600 ಕುಟುಂಬಗಳಿಗೆ ಭೂಮಿಯ ಹಕ್ಕು ಪಡೆದುಕೊಂಡಿರುತ್ತೇವೆ. ಇನ್ನೂ ಸಹ ಭೂಮಿ ಮತ್ತು ಸಮುದಾಯದ ಹಕ್ಕುಗಳು ಬಾಕಿ ಇರುತ್ತದೆ. ಹುಲಿ ಯೋಜನೆ ಘೋಷಣೆ ಮಾಡಿದರೆ ಹಕ್ಕುಗಳಿಗೆ ತೊಂದರೆಯಾಗುತ್ತದೆ. ಹಾಗಾಗಿ ಮೊದಲು ಹಕ್ಕುಗಳನ್ನು ನೀಡಬೇಕು ಹುಲಿ ಯೋಜನೆಯಿಂದ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಮನೆ, ರಸ್ತೆ, ವಿದ್ಯುತ್‌ ಸಂಪರ್ಕಗಳ ಮೇಲೆ ನಿರ್ಬಂಧ ಹೇರಲಾಗುತ್ತದೆ. ಈಗಾಗಲೇ ಬಿಳಿಗಿರಿರಂಗಸ್ವಾಮಿ ದೇವಸ್ಥಾನ ಹುಲಿ ಯೋಜನೆ ಮತ್ತು ಬಂಡಿಪುರ ಹುಲಿ ಯೋಜನೆ ಪ್ರದೇಶದಲ್ಲಿ ನಮ್ಮ ಸೋಲಿಗ ಸಮುದಾಯದವರಿಗೆ ಅನೇಕ ಮೂಲಭೂತ ಸೌಲಭ್ಯಗಳಿಗೆ ನಿರ್ಬಂಧ ಹೇರಿ ತೋದರೆ ನೀಡುತ್ತಿದ್ದಾರೆ. ಅದೇ ಸಮಸ್ಯೆಗಳು ಮಲೇಮಹದೇಶ್ವರ ಅರಣ್ಯಪ್ರದೇಶದಲ್ಲಿರುವ ಸೋಲಿಗರಿಗೂ ಆಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next