ಹುಬ್ಬಳ್ಳಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯಲ್ಲಿ ರಾಜಕಾಲುವೆ(ನೀರುಗಾಲುವೆ) ಮರು ನಿರ್ಮಾಣಕ್ಕೆ ಗುತ್ತಿಗೆ ಟೆಂಡರ್ ಹಾಕಿರುವ ಟಂಟಂ ಪೆದ್ದಗುರವಾ ರೆಡ್ಡಿ ನಕಲಿ ದಾಖಲೆಗಳನ್ನು ಸಲ್ಲಿಸಿದ್ದು, ಕೂಡಲೇ ಅವರ ಟೆಂಡರ್ ರದ್ದುಪಡಿಸಿ, ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆಯ ಎಸ್.ಆರ್.ಹಿರೇಮಠ ಒತ್ತಾಯಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಂಟಂ ಪೆದ್ದಗುರುವಾರೆಡ್ಡಿ ರಾಜಕಾಲುವೆಯ ಮರು ನಿರ್ಮಾಣ ಮಾಡುವ 54 ಕೋಟಿ ರೂ.ಮೊತ್ತದ ಟೆಂಡರ್ ಪಡೆಯಲು ತಾನು ಈ ಹಿಂದೆ ದೊಡ್ಡ ಪ್ರಮಾಣದ ಗುತ್ತಿಗೆ ಕಾಮಗಾರಿ ಕೈಗೊಂಡ ಕುರಿತಾಗಿ ಅನುಭವದ ದಾಖಲೆಗಳನ್ನು ಸಲ್ಲಿಸುವ ವೇಳೆ ಕೆಬಿಜೆಎನ್‌ಎಲ್‌ನಲ್ಲಿ ಕಾಮಗಾರಿ ಕೈಗೊಂಡಿದ್ದಾಗಿ ದಾಖಲೆ ಸಲ್ಲಿಸಿದ್ದಾರೆ. ಅದು ಸಂಪೂರ್ಣ ನಕಲಿ ಎಂದು ಆರೋಪಿಸಿದರು.
ಈಗಾಗಲೇ ಈ ಬಗ್ಗೆ ಬಿಬಿಎಂಪಿ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಚರ್ಚಿಸಲಾಗಿದ್ದು, ಟೆಂಡರ್ ತಡೆಗೆ ಕ್ರಮದ ಭರವಸೆ ದೊರೆತಿದೆ ಎಂದರು. ಸಮಾಜ ಪರಿವರ್ತನೆ ಸಮುದಾಯ ಸಂಸ್ಥೆಯ ಆಕ್ಷೇಪದ ಹಿನ್ನೆಲೆಯಲ್ಲಿ ಪೆದ್ದಗುರುವಾ ರೆಡ್ಡಿ ಮತ್ತೂಬ್ಬರ ಹೆಸರಲ್ಲಿ ತಾನೇ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾನೆ ಎಂಬ ಮಾಹಿತಿ ಇದೆ. ಸರಕಾರ ಕೂಡಲೇ ಮಧ್ಯ ಪ್ರವೇಶಿಸಿಸಬೇಕು ಎಂದು ಒತ್ತಾಯಿಸಿದರು.
ಜಾರ್ಜ್ ವಿರುದ್ಧವೂ ಆರೋಪ: ಪ್ರಿಸ್ಟೇಜ್ ಕಂಪೆನಿ ಗೋಮಾಳ ಭೂಮಿಯನ್ನು ಕಬಳಿಸಿದೆ. ಇದಕ್ಕೆ ಸಚಿವ ಕೆ.ಜೆ.ಜಾರ್ಜ್ ಅವರು ಬೆಂಬಲವಾಗಿ ನಿಂತಿದ್ದಾರೆ. ಇಲ್ಲದ ಕಂಪೆನಿ ಸೃಷ್ಟಿಸಿ ಬೆಂಗಳೂರು ಪೂರ್ವ ತಾಲೂಕಿನ ಪಟ್ಟಂದೂರು ಅಗ್ರಹಾರ ಗ್ರಾಮದಲ್ಲಿ ಗೋಮಾಳ ಭೂಮಿ ನುಂಗಲಾಗಿದೆ. ಕಂಪೆನಿ ಒಟ್ಟಾರೆಯಾಗಿ 8 ಎಕರೆ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಿದೆ.
ಪ್ರಿಸ್ಟೇಜ್ ಕಂಪೆನಿಯ ಇರ್ಫಾನ್ ರಜಾಕ್ ಹಾಗೂ ನಯೀಂ ಎನ್ನುವರು ಇದೀಗ ಕಟ್ಟಡದ ವಾಸಕ್ಕೆ ಸ್ವಾಧೀನ ಪ್ರಮಾಣ ಪತ್ರ ನೀಡುವಂತೆ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದು, ಬಿಬಿಎಂಪಿ ಕಾನೂನು ಸಲಹೆಗಾರರು ಕೊಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆ ತನ್ನ ಆಕ್ಷೇಪ ಸಲ್ಲಿಸಿದೆ. ಜೂ. 2ರಂದು ಖುದ್ದಾಗಿ ಬಿಬಿಎಂಪಿ ಆಯುಕ್ತರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಹಿರೇಮಠ ತಿಳಿಸಿದರು.