ಹಟ್ಟಿ ಚಿನ್ನದ ಗಣಿ: ಬೇಸಿಗೆ ಆರಂಭವಾಗುತ್ತಿದ್ದಂತೆ ಬಡವರ ಫ್ರೀಜ್ ಎಂದೇ ಹೇಳಲಾಗುವ ಮಣ್ಣಿನ ಗಡಿಗೆ, ಹೂಜಿಗಳು ಸ್ಥಳೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಬಿಸಿಲಲ್ಲಿ ನೀರು ತಣ್ಣಗಾಗಿಸುವ ಮಣ್ಣಿನ ಗಡಿಗೆ, ಹೂಜಿ ಖರೀದಿಗೆ ಜನ ಮುಂದಾಗಿದ್ದು, ಬೇಡಿಕೆ ಹೆಚ್ಚಿದೆ. ಬಿಸಿಲಿನ ತಾಪ ಹೆಚ್ಚಾದಂತೆ ಕೊಡ ಡ್ರಮ್‌ಗಳಲ್ಲಿನ ನೀರು ಕೂಡ ಬಿಸಿಯಾಗುತ್ತಿದೆ. ಹೀಗಾಗಿ ಕೆಂಪು ಮಣ್ಣಿನಿಂದ ತಯಾರಿಸಲಾದ ಈ ಮಡಿಕೆಗಳಲ್ಲಿ ನೀರು ತಂಪಾಗಿರುತ್ತದೆ. ಫ್ರೀಜ್ ಖರೀದಿಸಲು ಆಗದವರು ಕಡಿಮೆ ಬೆಲೆಯ ಮಣ್ಣಿನ ಗಡಿಗೆ ಹೂಜಿ ಖರೀದಿಸುತ್ತಿದ್ದಾರೆ.
ಯಾದಗಿರಿ, ಸುರಪುರದಿಂದ ಆಗಮನ: ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ಮಣ್ಣಿನ ಮಡಿಕೆ ಮಾರಾಟ ಜೋರಾಗಿದೆ. 5 ಲೀಟರ್‌ನಿಂದ 15 ಲೀಟರ್ ನೀರು ಸಂಗ್ರಹಿಸುವ ಮಣ್ಣಿನ ಮಡಿಕೆ ಹೂಜಿಗಳನ್ನು ಇಡಲಾಗಿದೆ. ನೆರೆಯ ಸುರುಪುರ, ಯಾದಗಿರಿ ಸೇರಿ ಇತರೆ ತಾಲೂಕುಗಳ ಕುಂಬಾರರು ಮತ್ತು
ಕುಂಬಾರರಿಂದ ಖರೀದಿಸಿದವರು ಇಲ್ಲಿ ಮಣ್ಣಿನ ಮಡಿಕೆ ಮಾರಾಟ ಮಾಡುತ್ತಿದ್ದಾರೆ.
ಬಿಸಿಲಿನ ತಾಪಕ್ಕೆ ತತ್ತರಿಸಿದ ಜನತೆ: ಪಟ್ಟಣದಲ್ಲಿ ಬೇಸಿಗೆ ಆರಂಭದಲ್ಲಿ ತಾಪಮಾನ 36 ಡಿಗ್ರಿಗೆ ತಲುಪಿದೆ. ಬಿಸಿಲಿನ ಹೊಡೆತ ತಾಳಲಾರದೆ ಜನ ತಂಪು ಪಾನೀಯ, ನೀರಿನ ಅಂಶವಿರುವ ಕಲ್ಲಂಗಡಿ, ಕರಬೂಜ್, ಎಳನೀರು, ಲಿಂಬು ಶರಬತ್, ಕಬ್ಬಿನ ಹಾಲು, ಹಣ್ಣಿನ ರಸ ಸೇವನೆಗೆ ಮುಂದಾಗಿದ್ದಾರೆ. ಬೆಳಗ್ಗೆ 10 ಗಂಟೆಯಾಗುತ್ತಿದ್ದಂತೆ ಬಿಸಿಲಿನಿಂದ ರಕ್ಷಣೆಗಾಗಿ ಮರದ ನೆರಳಿನಾಸರೆ ಪಡೆಯುವುದು ಸಾಮಾನ್ಯವಾಗಿದೆ.
ಹೂಜಿಗಳ 80ರಿಂದ 180 ರೂ.ಗಳವರೆಗೆ ಇದೆ. ಬೇರೆ ಕಡೆಯಿಂದ ಖರೀದಿಸಿ ಮಾರಾಟ ಮಾಡುವುದರಿಂದ ಗಾಡಿಯ ಖರ್ಚು ತೆಗೆದು ಒಂದು ಮಡಿಕೆಗೆ 60 ರೂ. ಉಳಿಯುತ್ತದೆ 50 ಸಾವಿರಕ್ಕೂ ಹೆಚ್ಚು ಮೌಲ್ಯದ ಮಡಿಕೆಗಳನ್ನು ತಂದಿದ್ದು, ಮಾರಿದರೆ 15 ಸಾವಿರ ರೂ. ಲಾಭ ಸಿಗುತ್ತದೆ. ಹೀಗಾಗಿ ಬೆಸಿಗೆಯಲ್ಲಿ ಬೇರೆ ಬೇರೆ ಸ್ಥಳಗಳಿಗೆ ತೆರಳಿ ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳುತ್ತೇವೆ.
ಅಮರಪ್ಪ ಸುರಪುರ, ಮಡಿಕೆ ವ್ಯಾಪಾರಿ