Advertisement

ತಾಳ್ಮೆ ಪರೀಕ್ಷಿಸಬೇಡಿ ಪಾಕ್‌ಗೆ ಖಡಕ್‌ ಸಂದೇಶ

07:05 AM Jan 31, 2018 | Harsha Rao |

ಜಮ್ಮು/ಚಂಡೀಗಢ: “ಭಾರತದ ಸೌಜನ್ಯ ಗುಣವು ಬಹಳ ಪ್ರಭಾವಶಾಲಿಯಾಗಿದ್ದು. ಸುಖಾಸುಮ್ಮನೆ ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ.’

Advertisement

ಇಂತಹುದೊಂದು ಖಡಕ್‌ ಸಂದೇಶ ವನ್ನು ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್‌ ಅವರು ನೆರೆರಾಷ್ಟ್ರ ಪಾಕಿಸ್ತಾನಕ್ಕೆ ರವಾನಿಸಿದ್ದಾರೆ. ಕಳೆದ ಎರಡು ವಾರಗಳಿಂದ ಪಾಕ್‌ ಪಡೆ ನಡೆಸುತ್ತಿರುವ ನಿರಂತರ ಶೆಲ್‌ ದಾಳಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಅವರು ಈ ಮಾತುಗಳನ್ನಾಡಿದ್ದಾರೆ. ಮಂಗಳವಾರ ಚಂಡೀಗಢದ ಕಾರ್ಯ ಕ್ರಮವೊಂದರಲ್ಲಿ ಮಾತನಾಡಿದ ಸಚಿವ ರಾಜನಾಥ್‌, “3-4 ದಿನಗಳ ಹಿಂದೆ ಪಾಕ್‌ ರೇಂಜರ್‌ಗಳು ನಮ್ಮ ಬಿಎಸ್‌ಎಫ್ ಡಿಜಿ ಜತೆ ಮಾತುಕತೆ ನಡೆಸಿದ್ದರು.

ಕದನವಿರಾಮ ಉಲ್ಲಂಘನೆಯಂಥ ಪ್ರಕರಣಗಳು ಇನ್ನು ಮುಂದೆ ನಡೆಯುವುದಿಲ್ಲ ಎಂಬ ವಾಗ್ಧಾನವನ್ನೂ ಪಾಕ್‌ ರೇಂಜರ್‌ಗಳು ನೀಡಿದ್ದರು. ಆದರೆ, ಈಗ ಮಾತು ತಪ್ಪಿ ಗುಂಡಿನ ದಾಳಿ ಶುರುವಿಟ್ಟುಕೊಂಡಿದ್ದಾರೆ. ನಾನು ಈ ಕುರಿತು ಹೆಚ್ಚೇನೂ ಮಾತನಾಡು ವುದಿಲ್ಲ. ನಾನು ಹೇಳುವುದಿಷ್ಟೆ- ನಮ್ಮ ವಿಧೇಯತೆ ಹಾಗೂ ಸೌಜನ್ಯಕ್ಕೂ ಒಂದು ಮಿತಿಯಿದೆ.

ನೆರೆಯಲ್ಲಿರುವ ಎಲ್ಲರೊಂ ದಿಗೂ ಉತ್ತಮ ಸಂಬಂಧ ಹೊಂದ ಬೇಕೆಂದು ನಾವು ಬಯಸುತ್ತೇವೆ. ಆದರೆ ನಮ್ಮ ತಾಳ್ಮೆಯನ್ನು ಪರೀಕ್ಷಿಸುವುದು ಬೇಡ’ ಎಂದಿದ್ದಾರೆ. ಇದೇ ವೇಳೆ, ಭಾರತ-ಪಾಕ್‌ ಗಡಿಯಲ್ಲಿ ಬೇಲಿ ಹಾಕುವ ಕೆಲಸ ಭರದಿಂದ ಸಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. 2 ವಾರಗಳಲ್ಲಿ ಪಾಕ್‌ ನಡೆಸಿದ ಗುಂಡಿನ ದಾಳಿಗೆ 8 ಮಂದಿ ನಾಗರಿಕರು ಸೇರಿದಂತೆ 14 ಮಂದಿ ಸಾವಿಗೀಡಾಗಿದ್ದಾರೆ. 

ಎಫ್ಐಆರ್‌ ಖಂಡಿಸಿ ಬಿಜೆಪಿ ಶಾಸಕನ ಪ್ರತಿಭಟನೆ
ಶೋಪಿಯಾನ್‌ನಲ್ಲಿ ಕಲ್ಲುತೂರಾಟದಲ್ಲಿ ತೊಡಗಿದ್ದ ಇಬ್ಬರು ಯುವಕರ ಹತ್ಯೆ ಪ್ರಕರಣ ಸಂಬಂಧ ಸೇನೆಯ ಮೇಜರ್‌ವೊಬ್ಬರ ಮೇಲೆ ಎಫ್ಐಆರ್‌ ದಾಖಲಿಸಿರುವ ವಿಚಾರ ಇನ್ನಷ್ಟು ವಿವಾದಕ್ಕೀಡಾಗಿದೆ. ಇದನ್ನು ಖಂಡಿಸಿ  ಮಂಗಳವಾರ ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ರಾಜೀವ್‌ ಶರ್ಮಾ ಅವರು ಪ್ರತಿಭಟನೆ ನಡೆಸಿದ್ದಾರೆ. ಎಫ್ಐಆರ್‌ ವಾಪಸ್‌ ಪಡೆಯುವಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದು ಅವರು ಸಭಾಧ್ಯಕ್ಷರಿಗೆ ಆಗ್ರಹವನ್ನೂ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಮಿತ್ರಪಕ್ಷಗಳಾದ ಪಿಡಿಪಿ ಮತ್ತು ಬಿಜೆಪಿ ನಡುವೆ ಭಿನ್ನಮತವೂ ಉಂಟಾಗಿದೆ. 

Advertisement

ಪಾಕಿಸ್ತಾನದಿಂದ ಮತ್ತೆ ಶೆಲ್‌ ದಾಳಿ
ಮತ್ತೆ ಕ್ಯಾತೆ ಶುರು ಮಾಡಿರುವ ಪಾಕಿಸ್ತಾನ ಮಂಗಳವಾರ ಬೆಳಗ್ಗೆ ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ನೌಶೆರಾ ವಲಯದಲ್ಲಿ ಶೆಲ್‌ ದಾಳಿ ನಡೆಸಿದೆ. ಗಡಿಗ್ರಾಮಗಳು ಹಾಗೂ ಮುಂಚೂಣಿ ನೆಲೆಗಳನ್ನು ಗುರಿಯಾಗಿಸಿ ಗುಂಡಿನ ದಾಳಿಯನ್ನು ನಡೆಸಲಾಗಿದೆ. ಇದಕ್ಕೆ ಭಾರತೀಯ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ವರದಿಯಾಗಿಲ್ಲ. ಪಾಕ್‌ ದಾಳಿ ಮುಂದುವರಿದಿರುವ ಕಾರಣ ಕಳೆದ ವಾರವೇ ಮುಚ್ಚಲಾಗಿದ್ದ ಗಡಿ ಗ್ರಾಮದ ಶಾಲೆಗಳನ್ನು ಇನ್ನೂ ತೆರೆದಿಲ್ಲ. ಏತನ್ಮಧ್ಯೆ, ಎಲ್‌ಒಸಿಯಲ್ಲಿನ ಪರಿಸ್ಥಿತಿ ಗಂಭೀರವಾಗಿದ್ದು, ಅಲ್ಲಿಂದ ಸ್ಥಳಾಂತರಗೊಂಡಿರುವ ಗ್ರಾಮಸ್ಥರಿಗೆ ಸುರಕ್ಷಿತ ವಸತಿ ಸೌಲಭ್ಯ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಜಮ್ಮು-ಕಾಶ್ಮೀರ ಅಸೆಂಬ್ಲಿಯಲ್ಲಿ ಡಿಸಿಎಂ ನಿರ್ಮಲ್‌ ಸಿಂಗ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next