ಬೆಂಗಳೂರು: ಎಸ್ಎಸ್ಎಲ್ ಸಿ ಪರೀಕ್ಷೆ ರದ್ದು ಮಾಡುವುದು ಸರಿಯಲ್ಲ. ಪರೀಕ್ಷೆ ರದ್ಧು ಮಾಡಿದರೆ ಮಕ್ಕಳ ಭವಿಷ್ಯ ಕಷ್ಟ. ಕೆಲವು ಕಡೆ ಪೋಷಕರು ಪರೀಕ್ಷೆ ಬೇಡ ಎನ್ನುತ್ತಿದ್ದಾರೆ. ಆದರೆ ಶೇ 70 ರಷ್ಟು ಪೋಷಕರು ಪರೀಕ್ಷೆ ಬೇಕು ಎನ್ನುತ್ತಾರೆ. ಹಾಗಾಗಿ ಕೋವಿಡ್ ನೆಪ ಹೇಳಿ ಸರ್ಕಾರ ಪರೀಕ್ಷೆ ರದ್ಧು ಮಾಡುವ ಪ್ರಯತ್ನ ಮಾಡಬಾರದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ನಾನು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಬೇರೆ ರಾಜ್ಯಗಳ ವ್ಯವಸ್ಥೆ ಬೇರೆ, ನಮ್ಮಲ್ಲಿ ಬೇರೆ. ಬೇರೆ ರಾಜ್ಯಗಳಲ್ಲಿ ತ್ರಿಟಯರ್ ವ್ಯವಸ್ಥೆ ಇದೆ. ಮೂರು ಹಂತದ ಸ್ಕೂಲ್ ವಿಭಾಗವಿದೆ. ನಮ್ಮಲ್ಲಿ ಅಂತಹ ತ್ರಿಟಯರ್ ವ್ಯವಸ್ಥೆ ಇಲ್ಲ. ಎಸ್ಎಸ್ಎಲ್ ಸಿ ಆಗದೆ ಬೇರೆಯದಕ್ಕೆ ಹೋಗಲಾಗುವುದಿಲ್ಲ. ಹಾಗಾಗಿ ಪರೀಕ್ಷೆ ನಡೆಸದಿದ್ದರೆ ಮಕ್ಕಳು ಹಾಳಾಗಿ ಹೋಗುತ್ತಾರೆ ಎಂದರು.
ಇದನ್ನೂ ಓದಿ:ಸಿಎಂ ಯಡಿಯೂರಪ್ಪಗೆ ಕೋವಿಡ್ ಪಾಸಿಟಿವ್: ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್
ಮಕ್ಕಳಿಗೆ ಸ್ಯಾನಿಟೈಸ್, ಅಂತರದ ಬಗ್ಗೆ ತಿಳುವಳಿಕೆ ಮೂಡಿಸಲಿ. 20 ಮಂದಿಗೆ ಒಂದು ಕೊಠಡಿಯಲ್ಲಿ ಪರೀಕ್ಷೆ ನಡೆಸಲಿ. ಆದರೆ ಪರೀಕ್ಷೆ ರದ್ಧು ಮಾಡುವುದು ಬೇಡ ಎಂದರು.
ಪರೀಕ್ಷೆ ರದ್ದಾದರೆ ಎಂಟು ಲಕ್ಷ ಮಕ್ಕಳಿಗೂ ಒಂದೇ ಮಾರ್ಕ್ಸ್ ಕೊಡುತ್ತಾರೆ. ಒಂದೇ ಮಾರ್ಕ್ಸ್ ಇದ್ದರೆ ಬೇರೆ ಕಾಲೇಜ್ ಗೆ ಹೋದರೆ ಕಷ್ಟ. ಕಾಲೇಜ್ ಸೇರುವಾಗ ನಿನ್ನ ಮಾರ್ಕ್ಸ್ ಎಷ್ಟು ಎಂದು ಕೇಳುತ್ತಾರೆ. ಅದಕ್ಕೆ ಸರ್ಕಾರ ಪರೀಕ್ಷೆ ನಡೆಸಬೇಕು. ಡಿಹೆಚ್ ಒ, ಡಿಡಿಪಿಐಗೆ ಕಠಿಣ ನಿರ್ದೇಶನ ನೀಡಲಿ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆಸಿದರೆ ಉತ್ತಮ ಎಂದು ಬಸವರಾಜ ಹೊರಟ್ಟಿ ಹೇಳಿದರು.
ಇದನ್ನೂ ಓದಿ: ಮಾಸ್ಕ್ ಹಾಕಿಕೊಂಡ ದೇವಿ : ಈ ದೇವಾಲಯಕ್ಕೆ ಬರುವ ಭಕ್ತರಿಗೆ ಸಿಗುತ್ತೆ ವಿಶೇಷ ಪ್ರಸಾದ!