Advertisement
ತಿಂಡಿ ತಿನಿಸುಗಳ ಪೊಟ್ಟಣಗಳನ್ನು ಅವುಗಳ ಬಾಳಿಕೆ ಅವಧಿ (ಎಕ್ಸ್‌ಪಾಯರಿ ಡೇಟ್) ಗಮನಿಸಿ ಖರೀದಿಸಬೇಕು. ಪ್ರಸ್ತುತ ಸರಕಾರ ದಿನಸಿ ಸಾಮಗ್ರಿ ಮತ್ತು ತರಕಾರಿ ಅಂಗಡಿಗಳನ್ನು ಮಾತ್ರ ತೆರೆಯಲು ಅವಕಾಶ ಕಲ್ಪಿಸಿದೆ. ಆದರೆ ಕೆಲವೆಡೆ ಸಿದ್ಧ ಆಹಾರವಸ್ತುಗಳ ಅಂಗಡಿಗಳು ಕೂಡ ತೆರೆಮರೆಯಲ್ಲಿ ವ್ಯಾಪಾರ ನಡೆಸುತ್ತಿವೆ. ಅಲ್ಲಿಗೆ ತೆರಳಿ ಕೈಗೆ ಸಿಕ್ಕಿದ್ದನ್ನು ಖರೀದಿಸಿಕೊಂಡು ಬರದಿರಿ. ಕೆಲವು ದಿನಸಿ ಅಂಗಡಿಗಳಲ್ಲಿ ತಿಂಡಿ ತಿನಿಸುಗಳು ಕೂಡ ಲಭ್ಯವಾಗಬಹುದು. ಇಂತಹ ತಿಂಡಿ ತಿನಿಸುಗಳ ಪೂರೈಕೆ ಈಗ ಸ್ಥಗಿತಗೊಂಡಿವೆ. ಹಾಗಾಗಿ ಈ ಹಿಂದೆ ವಿತರಕರಿಂದ ಖರೀದಿಸಿದ ಪೊಟ್ಟಣಗಳು ಅಂಗಡಿಗಳಲ್ಲಿ ಇರುತ್ತವೆ. ಇಂತಹ ತಿಂಡಿ-ತಿನಿಸುಗಳ ಬಾಳಿಕೆ ಅವಧಿ ಸಾಮಾನ್ಯವಾಗಿ ಒಂದು, ಎರಡು ತಿಂಗಳು ಇರುತ್ತದೆಯಾದರೂ ಕೆಲವು ತಿನಿಸುಗಳ ಬಾಳಿಕೆ ಅವಧಿ ತೀರಾ ಕಡಿಮೆಯೂ ಇರುತ್ತದೆ. ಇನ್ನು ಕೆಲವು ಪೊಟ್ಟಣಗಳಲ್ಲಿ ಎಕ್ಸ್‌ಪಾಯರಿ ಡೇಟ್, ಲೇಬಲ್ ಕೂಡ ಇರುವುದಿಲ್ಲ. ಹಾಗಾಗಿ ಹೆಚ್ಚಿನ ಜಾಗರೂಕತೆ ಬೇಕಾಗಿದೆ.
ತರಕಾರಿ, ಹಾಲು ಬಹುತೇಕ ಎಲ್ಲ ಪಟ್ಟಣ, ಗ್ರಾಮೀಣ ಪ್ರದೇಶಗಳಿಗೂ ಪೂರೈಕೆಯಾಗುತ್ತಿವೆ. ಮೊಟ್ಟೆ ಕೂಡ ಲಭ್ಯವಿದೆ. ಆದರೆ ಕೆಲವು ದಿನಸಿ ಸಾಮಗ್ರಿಗಳ ಕೊರತೆ ಉಂಟಾಗಿದೆ. ಬಿಸ್ಕಿಟ್, ಬ್ರೆಡ್ ಮೊದಲಾದ ತಿನಿಸುಗಳಿಗೆ ಬೇಡಿಕೆ ವ್ಯಕ್ತವಾಗಿದೆ. ಕೆಲವು ದಿನಸಿ ಅಂಗಡಿಗಳಲ್ಲಿ ಇದ್ದ ಬಿಸ್ಕಿಟ್ ಮತ್ತಿತರ ತಿನಿಸಿಗಳು ಬಹುತೇಕ ಖಾಲಿಯಾಗಿವೆ.