ವಾಡಿ: ಗ್ರಾಪಂ ಕೇಂದ್ರ ಸ್ಥಾನ ಹೊಂದಿರುವ ರಾವೂರ ಗ್ರಾಮದ ದಲಿತರ ಬಡಾವಣೆಗೆ ಕೂಡುವ ಹದಗೆಟ್ಟ ರಸ್ತೆ, ಪಾದಚಾರಿಗಳ ಪಾಲಿಗೆ ನರಕದ ರಸ್ತೆಯಾಗಿ ಕಾಡುತ್ತಿದೆ. ಗ್ರಾಮದ ಕಟ್ಟಕಡೆ ಬಡಾವಣೆ ದಲಿತರದ್ದಾಗಿದ್ದು, ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಹೆಸರಿನಲ್ಲಿ ಇದ್ದ ರಸ್ತೆಯನ್ನು ಬಗೆದಿರುವ ಗ್ರಾಪಂ ಆಡಳಿತ, ಎರಡು ತಿಂಗಳಾದರೂ ಕಾಮಗಾರಿ ಆರಂಭಿಸದೆ ಜನರ ಆಕ್ರೋಶಕ್ಕೆ ಗುರಿಯಾಗಿದೆ.
ಮುಖ್ಯ ರಸ್ತೆಯಿಂದ ದಲಿತರ ಬಡಾವಣೆಯ ಅಂಬೇಡ್ಕರ್ ಸಮುದಾಯ ಭವನದ ವರೆಗೆ ಸಿಸಿ ರಸ್ತೆ ನಿರ್ಮಿಸಲು ಮುಂದಾಗಿರುವ ಗ್ರಾಪಂ ಅಧಿಕಾರಿಗಳು, ಬೇಕಾಬಿಟ್ಟಿ ಚರಂಡಿ ನಿರ್ಮಿಸಿ ಸಮಸ್ಯೆ ತಂದಿಟ್ಟಿದ್ದಾರೆ. ಚೀಪುಗಲ್ಲುಗಳ ರಾಶಿ ಮತ್ತು ಬಚ್ಚಲು ನೀರಿನಿಂದ ಆವರಿಸಿರುವ ರಸ್ತೆ ಪಾದಚಾರಿಗಳ ಜೀವ ಹಿಂಡುತ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಗ್ರಾಪಂ ಅನುದಾನದಡಿ 25ಲಕ್ಷ ರೂ. ವೆಚ್ಚದಡಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅತ್ತ ಚರಂಡಿಯೂ ಪೂರ್ಣಗೊಂಡಿಲ್ಲ. ಇತ್ತ ರಸ್ತೆ ಕಾಮಗಾರಿಯೂ ಆರಂಭಗೊಳಿಸಿಲ್ಲ. ಇದರಿಂದ ಜನ ಸಂಚಾರ ದುಸ್ತರದಿಂದ ಕೂಡಿದ್ದು, ಮಕ್ಕಳು ಮತ್ತು ವಯಸ್ಕರು ನಡೆದಾಡಲಾಗದೆ ಏಳು ಬೀಳು ಕಾಣುತ್ತ ಮನೆ ಸೇರಿಕೊಳ್ಳುವಂತಾಗಿದೆ.
ಚರಂಡಿಗೆ ಕೂಡಬೇಕಾದ ಗೃಹಬಳಕೆ ನೀರು ರಸ್ತೆಗೆ ಹರಿದು ರಸ್ತೆ ಮತ್ತಷ್ಟು ಹದಗೆಡಲು ಕಾರಣವಾಗಿದೆ. ಈ ಕುರಿತು ಗ್ರಾಪಂ ಅಧಿಕಾರಿಗಳಿಗೆ ಮತ್ತು ಅಧ್ಯಕ್ಷರಿಗೆ ತಿಳಿಸಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಮರಳು ಸಿಗುತ್ತಿಲ್ಲ ಎನ್ನುವ ನೆಪ ಮುಂದಿಟ್ಟು ರಸ್ತೆ ಅಭಿವೃದ್ಧಿ ನನೆಗುದಿಗೆ ತಳ್ಳಲಾಗಿದೆ. ನಡೆದಾಡಲು ಸುಸಜ್ಜಿತ ರಸ್ತೆಯಿಲ್ಲದ ಕಾರಣ ನರಕಯಾತನೆ ಅನುಭವಿಸುತ್ತಿದ್ದೇವೆ.
ವಾಹನಗಳ ಸಂಚಾರಕ್ಕೂ ತೊಂದರೆಯಾಗಿದೆ ಎಂದು ದಲಿತ ಬಡಾವಣೆ ನಿವಾಸಿಗಳು ದೂರಿದ್ದಾರೆ. ಸಂಬಂಧಿಸಿದ ಗುತ್ತಿಗೆದಾರನ ವಿರುದ್ಧ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ನರಕದ ರಸ್ತೆ ನಿರ್ಮಾಣ ಮಾಡಿಕೊಟ್ಟಿರುವ ಗ್ರಾಪಂ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.