Advertisement
48ರ ಕಮಲಾ ಈಗಷ್ಟೇ ವಿಚ್ಛೇದನ ಪಡೆದಿದ್ದಾರೆ. ಇಪ್ಪತ್ತು ವರ್ಷಗಳ ಬಂಧನ ಕಳೆದುಕೊಳ್ಳುವುದು ಸುಲಭವಲ್ಲ. ಹಾಗೆಯೇ ಪತಿಯ ಜೊತೆ ಕಟ್ಟಿಸಿದ್ದ ಪ್ರೀತಿಪಾತ್ರ ಮನೆ ಈಗ ನ್ಯಾಯಾಲಯದ ಕಟಕಟೆಯನ್ನೇರಿದೆ. ಜೊತೆಗೆ fybromyalgia ಎಂಬ ವೈದ್ಯಕೀಯ ಸ್ಥಿತಿಯಿಂದ ಅವರು ಬಳಲುತ್ತಿದ್ದಾರೆ. ರಾತ್ರಿ ನಿದ್ದೆ ಹತ್ತುವುದಿಲ್ಲ. ಸಣ್ಣ ಸಪ್ಪಳವಾದರೂ ಕಿರಿಕಿರಿ, ತಲೆನೋವು. ಇಷ್ಟೆಲ್ಲಾ ಸಂದಿಗ್ಧಗಳ ನಡುವೆ ಮೈ ತೂಕದ ಸಮಸ್ಯೆ ಬೇರೆ. ಸಲಹಾ ಮನೋವಿಜ್ಞಾನದ ನೆರೆವು ಪಡೆಯಬೇಕಿನಿಸಿ ಕಮಲಾ ನನ್ನ ಬಳಿ ಬಂದಿದ್ದರು.
Related Articles
Advertisement
ನಂಬಿದ ಮೌಲ್ಯಗಳಿಗೆ ಧಕ್ಕೆ ಉಂಟಾದಾಗ, ಶರೀರ ಕುಸಿಯುತ್ತದೆ. ಮೈಕೈ ನೋವುತ್ತದೆ. ಮನಸ್ಸಿನ ಪ್ರತಿಯೊಂದು ಆಲೋಚನೆಗಳಿಗೆ ಮತ್ತು ಭಾವನೆಗಳಿಗೆ ಅಂಗಾಂಗಗಳು ಪ್ರತಿಕ್ರಿಯಿಸುತ್ತವೆ. ಅತೀ ಸಿಟ್ಟುಬಂದರೆ, ತಲೆನೋವು ಖಚಿತ. ಕೋಪ ಬಂದಾಗ ಹೃದಯದ ಬಡಿತ ಮತ್ತು ರಕ್ತದೊತ್ತಡ ಜಾಸ್ತಿಯಾಗುತ್ತದೆ. ಕಮಲಾಗೆ ಮನಸ್ಸು-ಶರೀರದ ನಡುವಿನ ಸೂಕ್ಷ್ಮ ಸಂಬಂಧದ ಅರಿವಾದ ನಂತರ, ಆರೋಗ್ಯ ಸುಧಾರಿಸುತ್ತಾ ಬಂತು.
ಶರೀರ ಹುರುಪುಗೊಳ್ಳಲು, ಮನಸ್ಸಿನಲ್ಲಿ ನಡೆಯುವ ನಾನು ಸೋತೆ ಎಂಬ ಕದನಕ್ಕೆ ಮೊದಲು ವಿರಾಮ ಎಳೆದರು. ಆದರ್ಶಗಳು ಮತ್ತು ಸಂಬಂಧಗಳ ನಡುವಿನ ಆಯ್ಕೆ ಕಮಲಾಗೆ ಸುಲಭವಾಯಿತು. ಒಬ್ಬಳೇ ಬದುಕುವುದನ್ನು ರೂಢಿಸಿಕೊಂಡರು.
ವಿ.ಸೂ: ಪ್ರತಿನಿತ್ಯ ಬಿಡದೆ ಬೆಳಗ್ಗೆ ಅಥವಾ ಸಾಯಂಕಾಲ ಉದ್ಯಾನವನಕ್ಕೆ ಹೋಗಿ. ನಡಿಗೆ ಕಷ್ಟವಾದರೆ, ಒಂದೆಡೆ ಸುಮ್ಮನೆ ಕುಳಿತುಕೊಳ್ಳಿ. ಬೆಳಗಿನ ಒಂದು ಕಪ್ ಕಾಫೀ/ಟೀ ಕುಡಿಯುವಾಗ ಪ್ರತಿಯೊಂದು ಗುಟುಕನ್ನೂ ಪ್ರಶಾಂತವಾಗಿ ಆಸ್ವಾದಿಸಿ. ಪದೇ ಪದೆ ಕಾಲು ಲೋಟ ಟೀ/ಕಾಫೀಯನ್ನು ಚಟದಂತೆ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಒಳ್ಳೆಯ ಜೀವನಶೈಲಿ ರೂಪಿಸಿಕೊಂಡರೆ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ.
ಡಾ. ಶುಭಾ ಮಧುಸೂದನ್ಚಿಕಿತ್ಸಾ ಮನೋವಿಜ್ಞಾನಿ