ಮಂಡ್ಯ: ಸಕ್ಕರೆ ಕಾರ್ಖಾನೆಯೊಂದಿಗೆ ನಿರಾಣಿ ಷುಗರ್ ಕಾರ್ಖಾನೆಯನ್ನು ತಳುಕುಹಾಕುವುದು ಸರಿಯಲ್ಲ ಎಂದು ನಿರಾಣಿ ಷುಗರ್ ಲಿಮಿಟೆಡ್ ಅಧ್ಯಕ್ಷ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ. ಮೈಷುಗರ್ ಕಾರ್ಖಾನೆಯನ್ನು ನಿರಾಣಿ ಷುಗರ್ನವರು ಗುತ್ತಿಗೆ ಪಡೆದಿದ್ದಾರೆಂದು ಗೋಂದಲದ ವಾತಾವರಣ ಉಂಟುಮಾಡುತ್ತಿದ್ದು, ಈವರೆವಿಗೂ ನಿರಾಣಿ ಷುಗರ್ನವರು ಗುತ್ತಿಗೆ ಪಡೆದಿಲ್ಲ.
ಯಾವುದೇ ಕಾರ್ಖಾನೆಗಳನ್ನು ಖಾಸಗಿಯವರಿಗೆ ಗುತ್ತಿಗೆಗೆ ನೀಡಬೇಕಾದರೆ ಪಾರದರ್ಶಕ ನಿಯಮಗಳಡಿ ಸರ್ಕಾರ ಟೆಂಡರ್ ಕರೆಯಬೇಕು. ಟೆಂಡರ್ ನಿಯಮಾನುಸಾರ ತಾಂತ್ರಿಕ, ಆರ್ಥಿಕ ಅರ್ಹತೆಯನ್ನಾಧರಿಸಿ ಕಾರ್ಖಾನೆಯನ್ನು ಗುತ್ತಿಗೆಗೆ ನೀಡಲಾಗುತ್ತದೆ. ಈ ಸಾಮಾನ್ಯ ಮಾಹಿತಿಯನ್ನು ನನ್ನ ಮೇಲೆ ಆರೋಪ ಮಾಡುವವರು ತಿಳಿದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರ್ಧಾರ ಕೈಗೊಳ್ಳಿ: ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಸರ್ಕಾರ ಟೆಂಡರ್ ಅಧಿಸೂಚಿಸಿದರೆ ಅಂದು ನನಗೆ ಅರ್ಹತೆ, ಆಸಕ್ತಿ ಇದ್ದರೆ ಟೆಂಡರ್‌ನಲ್ಲಿ ಪಾಲ್ಗೊಳ್ಳುತ್ತೇನೆ. ಕಾರ್ಖಾನೆ ಕಳೆದ 4 ವರ್ಷದಿಂದ ಪೂರ್ಣ ಮಟ್ಟದಲ್ಲಿ ನಡೆದಿಲ್ಲ. ಕೆಲವೇ ತಿಂಗಳು ಕಾರ್ಖಾನೆ ಕಬ್ಬು ಅರೆದಿದೆ ಅಷ್ಟೇ. ಇಂತಹ ರೋಗಗ್ರಸ್ತ ಕಾರ್ಖಾನೆಯನ್ನು ರೋಗಗ್ರಸ್ತವಾಗಿಯೇ ಮುಂದುವರಿಯಲು ಬಿಡಬೇಕೋ ಅಥವಾ ಪೂರ್ಣಪ್ರಮಾಣದಲ್ಲಿ ಕಬ್ಬು ಅರೆಯಲು ಆರಂಭಿಸಬೇಕೋ ಎಂಬುದನ್ನು ಸರ್ಕಾರ,
ಜನಪ್ರತಿನಿಧಿಗಳು, ರೈತ ಹಿತರ ಕ್ಷಣಾ ಸಮಿತಿ, ವಿವಿಧ ರೈತ ಸಂಘಟನೆಗಳು ಹಾಗೂ ಕಬ್ಬು ಬೆಳೆಗಾರರು ನಿರ್ಧರಿಸಬೇಕು. ಮೈಷುಗರ್ ಜೊತೆ ನನ್ನ ಹೆಸರನ್ನು ತಳುಕು ಹಾಕುವುದು ಬೇಡ. ನಾನು ನಮ್ಮ ಭಾಗದಲ್ಲಿಯೇ ನಾಲ್ಕೈದು ಕಾರ್ಖಾನೆ ಆರಂಭಿಸಲು ಅವಕಾಶವಿದೆ. ಮಂಡ್ಯದಲ್ಲಿನ ಕಾರ್ಖಾನೆ ನಡೆಸಬೇಕೆಂಬ ಹಿತಾಸಕ್ತಿಯಿಲ್ಲ ಎಂದರು.
ಎಲ್ಲರೂ ಸಹಕಾರ ನೀಡಿದರೆ ಕಾರ್ಖಾನೆ ಆರಂಭ: ಪಾಂಡವಪುರ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲು ಸರ್ಕಾರ 3 ಬಾರಿ ಟೆಂಡರ್ ಅಧಿಸೂಚನೆ ಹೊರಡಿಸಿತ್ತು. 3 ಬಾರಿಯೂ ಯಾವುದೇ ಕಾರ್ಖಾನೆ ಮಾಲೀಕರು ಟೆಂಡರ್‌ನಲ್ಲಿ ಭಾಗವಹಿಸಿಲ್ಲ. 4ನೇ ಬಾರಿ ಟೆಂಡರ್ ಹೊರಡಿಸಿದಾಗ ನನ್ನ ಕಂಪನಿ 405 ಕೋಟಿ ರೂ. ಬಿಡ್ ಸಲ್ಲಿಸಿತ್ತು. ಸರ್ಕಾರ ಮತ್ತು ಸಹಕಾರ ಕಾಯ್ದೆ ನಿಯಮಗಳ ಪ್ರಕಾರ, ಪಾರದರ್ಶಕ ನಿಯಮದಡಿ 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ.
ಪಿಎಸ್‌ಎಸ್‌ಕೆಯನ್ನು ಪಡೆಯಲೇಬೇಕೆಂಬ ಹಠ, ಛಲ ಅಥವಾ ಜಿದ್ದಿಗಾಗಲೀ ನಾನು ಬಿದ್ದಿಲ್ಲ. ಸಕ್ಕರೆ ಕ್ಷೇತ್ರದಲ್ಲಿ ನಾನು ಪಿಎಸ್‌ಎಸ್‌ಕೆಯನ್ನು ನಾನು ನಡೆಸುವುದು ಬೇಡ ಎಂದು ಒಕ್ಕೊರಲಿನಿಂದ ಎಲ್ಲರೂ ಹೇಳಿದರೆ ನಾನು ವಾಪಸ್ ಹೋಗಲು ಸಿದನಿದ್ದೇನೆ. ಕಬ್ಬು ಬೆಳೆಗಾರರು, ರೈತ ಮುಖಂಡರು, ರೈತ ಹಿತ ರಕ್ಷಣಾ ಸಮಿತಿ, ಜನಪ್ರತಿನಿಧಿಗಳು ಸಹಕಾರ ಕೊಟ್ಟರೆ ಮಾತ್ರ ಆರಂಭಿಸುತ್ತೇನೆ ಎಂದು ನಿರಾಣಿ ತಿಳಿಸಿದ್ದಾರೆ.