Advertisement

ಸೂರಿಗಾಗಿ ಹೆಸರು ಸೇರ್ಪಡೆಗೆ ಹಣ ಕೇಳದಿರಿ: ಜಯಶೀಲ

03:35 PM Sep 04, 2018 | |

ದಾವಣಗೆರೆ: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರಿ ಯೋಜನೆಯಡಿ ಮನೆ ಮಂಜೂರಾತಿ ಮಾಡಲು ಯಾರಿಂದಲೂ ಹಣ ಪಡೆಯದಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಕೆ.ಆರ್‌. ಜಯಶೀಲ ಮನವಿ ಮಾಡಿದ್ದಾರೆ.

Advertisement

ಸೋಮವಾರ, ಡಾನ್‌ಬಾಸ್ಕೋ ಶಾಲೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಿಗೆ ಏರ್ಪಡಿಸಿದ್ದ ಗ್ರಾಮ ಪಂಚಾಯತಿ ಬಲವರ್ಧನೆ ಮತ್ತು ಮಕ್ಕಳ ರಕ್ಷಣೆ ವಿಚಾರವಾಗಿ ಜಿಲ್ಲಾ ಮಟ್ಟದ ಸಮಾಲೋಚನಾ ಕಾರ್ಯಗಾರ ಉದ್ಘಾಟಿಸಿ,
ಮಾತನಾಡಿದ ಅವರು, ಕೆಲವು ಗ್ರಾಮ ಪಂಚಾಯತಿಯಲ್ಲಿ ಮನೆ ಸಂಬಂಧ (ಫಲಾನುಭವಿ ಪಟ್ಟಿಯಲ್ಲಿ ಹೆಸರು ಸೇರಿಸಲು) 20-30 ಸಾವಿರ ರೂಪಾಯಿ ಕೇಳಲಾಗುತ್ತಿದೆ ಎಂಬ ಬಗ್ಗೆ ಸಾಕಷ್ಟು ದೂರು ಬಂದಿವೆ.

20-30 ಸಾವಿರ ರೂಪಾಯಿ ಕೊಡುವಂತಹ ಶಕ್ತಿ ಇದ್ದಂತಹವರು ಗುಡಿಸಲಲ್ಲಿ ಏಕೆ ಇದ್ದಾರೆ ಎಂದು ಪ್ರಶ್ನೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಹಣ ಪಡೆಯಬಾರದು ಎಂದರು.
 
ಗ್ರಾಮದಲ್ಲಿ ಯಾರಿಗೆ ಮನೆ ಇಲ್ಲ. ಎಲ್ಲಿ, ಯಾವ ಪರಿಸ್ಥಿತಿಯಲ್ಲಿ ಇದ್ದಾರೆ ಎಂಬುದರ ಬಗ್ಗೆ ಗಾಪಂ ಸದಸ್ಯರಿಗೆ ಚೆನ್ನಾಗಿ ಗೊತ್ತಿರುತ್ತದೆ. ಸೂರೇ ಇಲ್ಲದವರಿಗೆ ಒಂದು ಸೂರು ಕಲ್ಪಿಸುವ ಅಧಿಕಾರ ಮತ್ತು ಅವಕಾಶ ಅವರಿಗೆ ಇದೆ. ಅಂತಹ ಅಧಿಕಾರ ಮತ್ತು ಅವಕಾಶವನ್ನು ನ್ಯಾಯ, ಧರ್ಮದ ಆಧಾರದಲ್ಲಿ ಚಲಾಯಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ್‌ ಆಡಳಿತ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತ್‌ಗೆ ಅತಿ ಹೆಚ್ಚಿನ ಅಧಿಕಾರ, ಆದ್ಯತೆ ನೀಡಲಾಗುತ್ತಿದೆ. ಸದಸ್ಯರು ಗ್ರಾಮ ಪಂಚಾಯತ್‌ಗಳ ಬಲವರ್ಧನೆಗೆ ಹೆಚ್ಚು ಗಮನ ನೀಡಬೇಕು.

ನಮ್ಮ ಗ್ರಾಮ, ನಮ್ಮ ಯೋಜನೆಯಡಿ ಸ್ವತ್ಛತೆ, ಮಕ್ಕಳ ಶಿಕ್ಷಣಕ್ಕೆ ಒತ್ತು, ಕುಡಿಯುವ ನೀರು ಇತರೆ ಸೌಲಭ್ಯ ಒದಗಿಸುವ ಜೊತೆಗೆ ಗ್ರಾಮಗಳಲ್ಲಿನ ವಿದ್ಯಾವಂತ ನಿರುದ್ಯೋಗಿಗಳು ಸ್ವಾವಲಂಬನೆ ಜೀವನ ರೂಪಿಸಿಕೊಳ್ಳಲು ತರಬೇತಿ ವ್ಯವಸ್ಥೆ ಮಾಡುವಂತಾಗಬೇಕು. ಗ್ರಾಮ ಪಂಚಾಯತಿ ಸದಸ್ಯರು ಒಗ್ಗೂಡಿ ಕೆಲಸ ಮಾಡುವ ಮೂಲಕ ಮಾದರಿ ಗ್ರಾಮ ಪಂಚಾಯತಿಯನ್ನಾಗಿ ರೂಪಿಸಬೇಕು ಎಂದು ತಿಳಿಸಿದರು.

Advertisement

ಪ್ರಾಸ್ತಾವಿಕ ಮಾತುಗಳಾಡಿದ ಸಿಡಬ್ಲೂಸಿ ಸಂಸ್ಥೆಯ ಶ್ರೀನಿವಾಸ ಗಾಣಿಗ, ಸ್ವರಾಜ್‌ ಗ್ರಾಮ ಪಂಚಾಯತ್‌ ರಾಜ್‌-1993 ಕಾಯ್ದೆಯ ಅಧಿನಿಯಮ 44ರ ಪ್ರಕಾರ ದುರ್ಬಲ, ಅಸುರಕ್ಷಿತ ವಾತಾವರಣದಲ್ಲಿರುವ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರುವುದು ಪ್ರತಿ ಗ್ರಾಮ ಪಂಚಾಯತಿ ಸದಸ್ಯರ ಆದ್ಯ ಜವಾಬ್ದಾರಿ ಮಾತ್ರವಲ್ಲ, ಕರ್ತವ್ಯವೂ ಹೌದು. 

ಹಾಗಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಂತಹ ಮಕ್ಕಳನ್ನ ಗುರುತಿಸಿ, ಸಂರಕ್ಷಣೆ ಮಾಡಬೇಕು. ಮಹಿಳೆಯರ ಸಂರಕ್ಷಣೆಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು. ರಾಜ್ಯದ 6,022 ಗ್ರಾಮ ಪಂಚಾಯತಿಯಲ್ಲಿ
1.5 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ಎಲ್ಲಾ ಸದಸ್ಯರು ಮಹಾತ್ಮ ಗಾಂಧೀಜಿಯವರ ಕನಸು ಸಾಕಾರಕ್ಕೆ ಶ್ರಮಿಸಬೇಕು. ಸ್ಥಳೀಯ ಸರ್ಕಾರ ಬಲಪಡಿಸುವ ಮಹತ್ತರ ಉದ್ದೇಶದಿಂದಾಗಿಯೇ ಸ್ವರಾಜ್‌ ಗ್ರಾಮ ಪಂಚಾಯತ್‌ ರಾಜ್‌-1993 ಕಾಯ್ದೆ ಜಾರಿಗೆ ತರಲಾಗಿದೆ. 29 ಅಂಶಗಳ ಅನುಷ್ಠಾನದಲ್ಲಿ ಗ್ರಾಮ ಪಂಚಾಯತ್‌ ಸದಸ್ಯರಿಗೆ ಅಧಿಕಾರ ಮತ್ತು ಅವಕಾಶ ಇದೆ. 5 ವರ್ಷಗಳಲ್ಲಿ ನಮ್ಮ ಗ್ರಾಮ, ನಮ್ಮ ಯೋಜನೆಯನ್ನು ಅತಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಗ್ರಾಮ ಮತ್ತು ಗ್ರಾಮ ಪಂಚಾಯತ್‌ ಬಲವರ್ಧನೆ, ಮಕ್ಕಳು ಮತ್ತು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕಿದೆ ಎಂದು ಹೇಳಿದರು.

ಗ್ರಾಮ ಪಂಚಾಯತ್‌ ಸದಸ್ಯರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಬಿ.ಸಿ. ವಿಶ್ವನಾಥ್‌, ಡಾನ್‌ಬಾಸ್ಕೋ ಸಂಸ್ಥೆ ಉಪ ನಿರ್ದೇಶಕ ಫಾ| ಜೋಸ್‌ ಜೋಸೆಫ್‌, ಸಿಡಬ್ಲ್ಯೂಸಿ ಸಂಸ್ಥೆಯ ಕೃಪಾ, ಶಿವಮೂರ್ತಿ ಇತರರು ಇದ್ದರು. ಬಿ.
ಮಂಜಪ್ಪ ನಿರೂಪಿಸಿದರು. ಆರ್‌. ದುರುಗಪ್ಪ ವಂದಿಸಿದರು.

ಪಿಡಿಒಗಳಿಂದ ಹುನ್ನಾರ…
ಕೆಲವೆಡೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಅಧ್ಯಕ್ಷರು, ಸದಸ್ಯರಿಗೆ ಯಾವುದೇ ಮಾಹಿತಿ ನೀಡದೇ ಇರುವುದು, ಅವರು ಹೇಳಿದ ಕಡೆ ಸಹಿ ಮಾಡಲು ಒತ್ತಾಯ ಒಳಗೊಂಡಂತೆ ಇತರೆ ವಿಧಾನಗಳ ಮೂಲಕ ಗ್ರಾಮ ಪಂಚಾಯತಿ ಸದಸ್ಯರನ್ನ ನಿಷ್ಕಿÅಯಗೊಳಿಸುವ ವ್ಯವಸ್ಥಿತ
ಹುನ್ನಾರ ನಡೆಯುತ್ತಿದೆ. ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಏನಾದರೂ ಮಾಹಿತಿ ಕೇಳಿದರೆ ಕೊಡುವುದೇ ಇಲ್ಲ. ತೀರಾ ಒತ್ತಾಯಿಸಿದರೆ ಏನಾದರೂ ಒಂದು ಹೇಳುತ್ತಾರೆ. ಸಣ್ಣ ಪುಟ್ಟದಕ್ಕೂ ಪ್ರತಿಭಟನೆಗಿಳಿಯುವ ಮೂಲಕ ಇಡೀ ಜಿಲ್ಲೆಯ ಗ್ರಾಮ ಪಂಚಾಯತ್‌ ಆಡಳಿತವನ್ನೇ ನಿಷ್ಕಿÅಯಗೊಳಿಸುವ, ಸ್ಥಗಿತಗೊಳಿಸುವ ಕೆಲಸ ಮಾಡುತ್ತಾರೆ. ಗ್ರಾಮ ಪಂಚಾಯತ್‌ ಸದಸ್ಯರು ಒಮ್ಮೆಯೂ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿಲ್ಲ.

ಗ್ರಾಮ ಪಂಚಾಯತ್‌ ಸದಸ್ಯರಿಗೆ ಪರಮಾಧಿಕಾರ ಇದೆ ಎಂದು ಹೇಳುತ್ತಾರೆ. ಆದರೆ, ಕೆಲ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ನಡೆದುಕೊಳ್ಳುವುದು ನೋಡಿದರೆ ಯಾವ ಪಾಪ ಮಾಡಿದ್ದಕ್ಕೆ ಗ್ರಾಮ ಪಂಚಾಯತ್‌ ಸದಸ್ಯರಾಗಿದ್ದೇವೆ… ಎಂದೆನಿಸುತ್ತದೆ. ಗ್ರಾಮ ಪಂಚಾಯತಿ ಸದಸ್ಯರಿಗೆ ಏನಾದರೂ ಸಮಸ್ಯೆಯಾದರೆ ತಾಲೂಕು, ಜಿಲ್ಲಾ, ರಾಜ್ಯ ಗ್ರಾಮ ಪಂಚಾಯತ್‌ ಸದಸ್ಯರ ಒಕ್ಕೂಟ ಸದಸ್ಯರ ಬೆನ್ನಿಗೆ ಇದೆ. ಯಾವುದೇ ಸಮಸ್ಯೆ ಆದಲ್ಲಿ ಒಕ್ಕೂಟದ ಗಮನಕ್ಕೆ ತರಬೇಕು ಎಂದು ಗ್ರಾಮ ಪಂಚಾಯತ್‌ ಸದಸ್ಯರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಬಿ.ಸಿ. ವಿಶ್ವನಾಥ್‌ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next