ತಮಿಳುನಾಡು(ಕನ್ಯಾಕುಮಾರಿ): ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಮಾರ್ಚ್ 15) ಕನ್ಯಾಕುಮಾರಿಯಲ್ಲಿ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ವೇಳೆ ವಿಪಕ್ಷ ಕಾಂಗ್ರೆಸ್ ಮತ್ತು ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಈ ಎರಡೂ ಪಕ್ಷಗಳಿಗೂ ಹಗರಣ ಮತ್ತು ಭ್ರಷ್ಟಾಚಾರದ ಇತಿಹಾಸವನ್ನೇ ಹೊಂದಿದೆ. ಇದರಿಂದಾಗಿ ಯಾವತ್ತೂ ತಮಿಳುನಾಡನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಿಲ್ಲ ಎಂದು ಹೇಳಿದರು.
ಇದನ್ನೂ ಓದಿ:IPL 2024; ಶ್ರೇಯಸ್ ಅಯ್ಯರ್ ಅನಾರೋಗ್ಯದ ಬಗ್ಗೆ ಮುಂದುವರಿದ ಊಹಾಪೋಹ
ಕನ್ಯಾಕುಮಾರಿ ಜತೆಗಿನ ತಮ್ಮ ಈ ಹಿಂದಿನ ನೆನಪನ್ನು ಬಿಚ್ಚಿಟ್ಟ ಪ್ರಧಾನಿ ಮೋದಿ ಅವರು, 1991ರಲ್ಲಿ ನಾನು ಕನ್ಯಾಕುಮಾರಿಯಿಂದಲೇ ಏಕ್ತಾ ಯಾತ್ರೆಯನ್ನು ಆರಂಭಿಸಿದ್ದೆ, ಈ ಬಾರಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪ್ರಯಾಣಿಸಿದ್ದೆ ಎಂದು ಹೇಳಿದರು.
ಎರಡೂ ರಾಜ್ಯಗಳಲ್ಲಿ ವಿಭಜನೆಯ ಸಿದ್ಧಾಂತಗಳನ್ನು ಜನರು ತಿರಸ್ಕರಿಸಿರುವುದಾಗಿ ಪ್ರಧಾನಿ ಹೇಳಿದ್ದು, ಆಡಳಿತಾರೂಢ ಡಿಎಂಕೆ ವಿರುದ್ಧ ಕಿಡಿಕಾರಿದ್ದು, ಆಡಳಿತಾರೂಢ ಡಿಎಂಕೆ ತಮಿಳುನಾಡು ಸಂಸ್ಕೃತಿ ಮತ್ತು ಭವಿಷ್ಯದ ಶತ್ರುವಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೂ ಮೊದಲು ನಾನು ತಮಿಳುನಾಡಿಗೆ ಭೇಟಿ ನೀಡಿದ್ದು, ಹಲವಾರು ಪ್ರಮುಖ ದೇವಾಲಯಗಳಿಗೆ ಹೋಗಿದ್ದೆ. ಆದರೆ ಡಿಎಂಕೆ ಸರ್ಕಾರ ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಪ್ರಸಾರವನ್ನು ತಡೆಯಲು ಯತ್ನಿಸಿತ್ತು ಎಂದು ಹೇಳಿದರು.
ಆಡಳಿತಾರೂಢ ಡಿಎಂಕೆ ಮಹಿಳಾ ನಾಯಕರ ಬಗ್ಗೆ ನಡೆದುಕೊಳ್ಳುತ್ತಿರುವ ರೀತಿಯನ್ನು ಪ್ರಧಾನಿ ಮೋದಿ ಟೀಕಿಸಿದರು. ಡಿಎಂಕೆ ನಾಯಕರು ಜಯಲಲಿತಾ ಅವರಿಗೆ ಏನು ಮಾಡಿದ್ದಾರೆ ಎಂಬುದನ್ನು ಎಲ್ಲರೂ ನೆನಪಿಸಿಕೊಳ್ಳುತ್ತಿದ್ದಾರೆ. ಮಹಿಳೆಯರ ಬಗೆಗಿನ ಅವರ ವರ್ತನೆ ಈಗಲೂ ಹಾಗೆಯೇ ಇದೆ ಎಂದು ವಾಗ್ದಾಳಿ ನಡೆಸಿದರು.
ತಮಿಳುನಾಡು ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ತೂತುಕುಡಿಯಲ್ಲಿನ ಚಿದಂಬರನಾರ್ ಬಂದರು ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು. ಮೀನುಗಾರರ ಶ್ರೇಯೋಭಿವೃದ್ಧಿ ಯೋಜನೆ, ಆಧುನಿಕ ಮೀನುಗಾರಿಕೆ ಬೋಟ್, ಕಿಸಾನ್ ಕ್ರೆಟಿಡ್ ಕಾರ್ಡ್ ಸ್ಕೀಮ್ ಗೆ ಬೆಂಬಲ ನೀಡಲಾಗುವುದು ಎಂದು ಪ್ರಧಾನಿ ಹೇಳಿದರು.