Advertisement

ಕರುಣಾನಿಧಿ ಅನುಪಸ್ಥಿತಿಯಲ್ಲಿ ಪುತ್ರ ಸ್ಟಾಲಿನ್‌ನಿಂದ ಪ್ರಜ್ವಲಿಸಿದ ಸೂರ್ಯ

02:26 PM May 24, 2019 | Team Udayavani |

ತಮಿಳುನಾಡಿನಲ್ಲಿ ಮುಂದಿನ ವಿಧಾನಸಭೆ ಚುನಾವಣೆ 2021ರಲ್ಲಿ ನಡೆಯಲಿದೆ. ಅದಕ್ಕೆ ಪೂರಕವಾಗಿ ಹಾಲಿ ಲೋಕಸಭೆ ಚುನಾವಣೆ ನಡೆದಿದೆ. ಸದ್ಯ ಅಧಿಕಾರದಲ್ಲಿರುವ ಎಐಎಡಿಎಂಕೆ ಕೇವಲ ಒಂದು ಲೋಕಸಭಾ ಸ್ಥಾನದಲ್ಲಿ ಮಾತ್ರ ಗೆದ್ದಿದೆ. ಉಳಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಹೀನಾಯ ಸೋಲು ಅನುಭವಿಸಿದೆ. ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅಲೆ ಇದ್ದರೂ, ಇದು ತಮಿಳುನಾಡಿಗೆ ಮಾತ್ರ ಯಾವುದೇ ಪರಿಣಾಮ ಬೀರಿಲ್ಲ.

Advertisement

ಡಿಎಂಕೆ ಮತ್ತು ಕಾಂಗ್ರೆಸ್‌ ಮೈತ್ರಿ ಒಟ್ಟು 31 ಕ್ಷೇತ್ರಗಳಲ್ಲಿ ಜಯಗಳಿಸಿವೆ. ಕಾಂಗ್ರೆಸ್‌ 8, ಡಿಎಂಕೆ 23 ಕ್ಷೇತ್ರಗಳಲ್ಲಿ ಗೆದ್ದಿವೆ. ಸಿಪಿಐ 2, ಸಿಪಿಎಂ 2, ಐಯುಎಂಎಲ್‌ 1, ವಿಸಿಕೆ ಪಕ್ಷ 1 ಸ್ಥಾನಗಳಲ್ಲಿ ಜಯ ಗಳಿಸಿವೆ. ಡಿಎಂ ಕೆಯ ಅಧ್ಯಕ್ಷರಾಗಿದ್ದ ಎಂ.ಕರುಣಾನಿಧಿ ನಿಧನದ ಬಳಿಕ ಹಾಲಿ ಲೋಕಸಭೆ ಚುನಾವಣೆ ಪಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಅವರಿಗೆ ಸವಾಲಿನದ್ದಾಗಿತ್ತು. ಕಮಲ್‌ಹಾಸನ್‌ ಅವರ ಮಕ್ಕಳ್‌ ನೀತಿ ಮಯ್ಯಂ ಯಾವುದೇ ಪ್ರಭಾವ ಬೀರುವಲ್ಲಿ ವಿಫ‌ಲವಾಗಿದೆ

ಎಐಎಡಿಎಂಕೆ, ಬಿಜೆಪಿ, ಪಿಎಂಕೆ, ಡಿಎಂಡಿಕೆ ಜತೆ ಗೂಡಿ ರಚಿಸಿರುವ ಮೈತ್ರಿಕೂಟ ಧೂಳಿಪಟವಾಗಿದೆ. ತಮಿಳುನಾಡಿನ ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಸಚಿವ ಪೋನ್‌ ರಾಧಾಕೃಷ್ಣನ್‌ ಕಾಂಗ್ರೆಸ್‌-ಡಿಎಂಕೆ ಮೈತ್ರಿಕೂಟದ ಎದುರು ಸೋತಿದ್ದಾರೆ. ಕನ್ಯಾಕುಮಾರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ರಾಧಾಕ ‌ೃಷ್ಣನ್‌ ಕಾಂಗ್ರೆಸ್‌ನ ಎಚ್‌. ವಸಂತಕುಮಾರ್‌ ವಿರುದ್ಧ 2,46,136 ಮತಗಳ ಅಂತರದಿಂದ ಸೋತಿ ದ್ದಾರೆ. ಅವರ ಜತೆಗೆ ಬಿಜೆಪಿಯ ಇತರ ನಾಲ್ವರೂ ಸೋತಿ ದ್ದಾರೆ. ರಾಜ್ಯ ಬಿಜೆಪಿ ಘಟಕದ ನಾಯಕಿ ತಮಿ ಳುಸೈ ಸುಂದರ ರಾಜನ್‌ ಟ್ಯುಟಿಕಾರಿನ್‌ನಿಂದ ಸೋತಿ ದ್ದಾರೆ. ಅವರ ವಿರುದ್ಧ ಡಿಎಂಕೆ ರಾಜ್ಯಸಭಾ ಸದಸ್ಯೆ ಕನಿಮೋಳಿ ಸ್ಪರ್ಧಿಸಿದ್ದಾರೆ. ನೀಲಗಿರಿ ಕ್ಷೇತ್ರದಿಂದ ಮಾಜಿ ಸಚಿವ ಎ.ರಾಜಾ ಗೆದ್ದಿದ್ದಾರೆ. ಅವರು ಎಐಎ ಡಿಎಂಕೆಯ ಎಂ.ತ್ಯಾಗರಾಜನ್‌ ವಿರುದ್ಧ 2.05 ಲಕ್ಷ ಮತಗಳಿಂದ ಗೆದ್ದಿದ್ದಾರೆ. ಪುದುಚೇರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿ. ವೈಥಿಲಿಂಗಂ ಗೆದ್ದಿದ್ದಾರೆ. ಎಐಎನ್‌ಆರ್‌ಸಿ ಪಾರ್ಟಿ ಅಭ್ಯರ್ಥಿ ನಾರಾಯಣ ಸ್ವಾಮಿ ಕೇಶವನ್‌ 84 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.

ಒಂದೇ ಸ್ಥಾನ
ಸ್ಟಾರ್‌ ನಾಯಕ ಇಲ್ಲದೇ ಇದ್ದರೆ ಒಂದು  ಪಕ್ಷದ ಸ್ಥಿತಿ ಏನಾಗುತ್ತದೆ ಎನ್ನುವುದಕ್ಕೆ ಎಐಎಡಿಎಂಕೆ ಉತ್ತಮ ಉದಾಹರಣೆ. ಜಯಲಲಿತಾ ನಿಧನಾನಂತರ  ಆ ಪಕ್ಷಕ್ಕೆ ಇದು ಮೊತ್ತಮೊದಲ ಲೋಕಸಭೆ  ಚುನಾವಣೆ. ಹಾಲಿ ಲೋಕಸಭೆಯಲ್ಲಿ 37  ಸ್ಥಾನಗಳನ್ನು ಹೊಂದಿ ಮೂರನೇ ಅತಿದೊಡ್ಡ  ಪಕ್ಷವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಹಾಲಿ ಚುನಾವಣೆಯಲ್ಲಿ ತಮಿಳು ನಾಡಿನ ಆಡಳಿತ ಪಕ್ಷಕ್ಕೆ ಒಂದೇ ಒಂದು ಸ್ಥಾನದಲ್ಲಿ ಗೆದ್ದಿದೆ. ಟಿಟಿವಿ ದಿನಕರನ್‌ರ ಎಎಂಎಂಕೆ ಭಾರಿ ಆಘಾತ ತಂದು ಕೊಟ್ಟದ್ದು ಸುಳ್ಳಲ್ಲ.

ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ತಮಿಳುನಾಡಿನ ಜನರು ಮತ ನೀಡ ಬಹುದಾಗಿತ್ತು. ಈ ಮೂಲಕ ಅವರಿಗೆ ಉತ್ತಮ ಸೌಲಭ್ಯಗಳು ಹೆಚ್ಚಿನ ರೀತಿಯಲ್ಲಿ ಸಿಗುತ್ತಿದ್ದವು.
ತಮಿಳುಸೈ ಸುಂದರರಾಜನ್‌, ಬಿಜೆಪಿ ನಾಯಕಿ

Advertisement

ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್‌ ಉತ್ತಮ ಸಾಧನೆಯನ್ನು ಮಾಡಿದೆ. ಇಂಥ ಕ್ಷಣದಲ್ಲಿ ನಮ್ಮ ಪಕ್ಷದ ಸಂಸ್ಥಾಪಕ, ತಂದೆ ಕರುಣಾನಿಧಿಯವರು ಇರಬೇಕಿತ್ತು. ಅವರ ಅನುಪಸ್ಥಿತಿ ನಮ್ಮನ್ನು ಬಹುವಾಗಿ ಕಾಡುತ್ತಿದೆ
ಎಂ.ಕೆ.ಸ್ಟಾಲಿನ್‌, ಡಿಎಂಕೆ ಅಧ್ಯಕ್ಷ


ಗೆದ್ದ ಪ್ರಮುಖರು

ಎ.ರಾಜಾ, ನೀಲಗಿರಿ
ಕನಿಮೋಳಿ, ಟ್ಯುಟಿಕಾರಿನ್‌
ಕಾರ್ತಿ ಚಿದಂಬರಂ, ಶಿವಗಂಗಾ
ಟಿ.ಆರ್‌.ಬಾಲು, ಶ್ರೀಪೆರಂಬದೂರ್‌
ಎಸ್‌.ಯು.ತಿರುನಾವುಕ್ಕರಸು, ತಿರುಚಿರಾಪಳ್ಳಿ

ಸೋತ ಪ್ರಮುಖರು
ಪೋನ್‌ ರಾಧಾಕೃಷ್ಣನ್‌ , ಕನ್ಯಾಕುಮಾರಿ
ಅಗ್ರಿ ಕೃಷ್ಣಮೂರ್ತಿ, ತಿರುವಣ್ಣಾಮಲೆ
ವಡಿವೇಲ್‌ ರವಣನನ್‌ ಎಸ್‌, ವಿಲ್ಲುಪುರಂ
ಅಲಗಾರ್‌ಸ್ವಾಮಿ ಆರ್‌, ವಿರುಧ್‌ನಗರ
ಎ.ಕೆ.ಮೂರ್ತಿ, ಅರಕ್ಕೋಣಂ

Advertisement

Udayavani is now on Telegram. Click here to join our channel and stay updated with the latest news.

Next