ಮೈಸೂರು: ನನ್ನ ಕಷ್ಟ ಕಾಲದಲ್ಲಿ ಮೈಸೂರಿನ ವಕೀಲರು ನನ್ನ ಪರ ನಿಂತರು. ಇದಕ್ಕೆ ನಾನು ಚಿರ ಋಣಿಯಾಗಿದ್ದೇನೆ. ನಾನು ಸಾಯುವವರೆಗೂ ಇದನ್ನು ಮರೆಯುವುದಿಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಕೃತಜ್ಞತೆ ಸಲ್ಲಿಸಿದರು.
ಬುಧವಾರ ಮೈಸೂರು ವಕೀಲರ ಸಂಘಕ್ಕೆ ಭೇಟಿ ನೀಡಿದ್ದ ಅವರು ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿ, ನಾನು ಜೈಲಿನಲ್ಲಿದ್ದಾಗ, ಇಡೀ ದೇಶದಲ್ಲಿ ಮೊಟ್ಟ ಮೊದಲಿಗೆ ನನ್ನ ಪರವಾಗಿ ಧ್ವನಿ ಎತ್ತಿದ್ದು, ಮೈಸೂರು ವಕೀಲರ ಸಂಘ. ನನ್ನ ಸ್ವಕ್ಷೇತ್ರ ಕನಕಪುರ, ತವರು ರಾಮನಗರ ಜಿಲ್ಲೆಗಳಲ್ಲಿ ನನ್ನ ಪರವಾಗಿ ನಡೆದ ಪ್ರತಿಭಟನೆಗಳಿಗಿಂತ ಮೈಸೂರಿನಲ್ಲಿ ನಡೆದ ಪ್ರತಿಭಟನೆ ವಿಶೇಷವಾದದ್ದು,
ನನ್ನ ಕಷ್ಟಕಾಲದಲ್ಲಿ ಮೈಸೂರಿನ ವಕೀಲರು ನನ್ನ ಪರ ನಿಂತರು. ಕಷ್ಟಕಾಲದಲ್ಲಿ ಬೆಂಬಲ ನೀಡಿದ್ದಕ್ಕೆ ನಿಮಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು. ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ಅಪಾರ ಗೌರವ ಮತ್ತು ನಂಬಿಕೆ ಇದೆ. ನನ್ನ ಪರವಾಗಿ ಹೋರಾಟ ಮಾಡಿದ್ದಕ್ಕೆ ನಿಮಗೆ ಧನ್ಯವಾದ ಎಂದು ವಕೀಲರಿಗೆ ಕೈ ಮುಗಿದರು.
ನಾನು ಆಶಾವಾದಿ: ಮಹಾರಾಷ್ಟ್ರ ಮಾದರಿ ರಾಜಕೀಯ ಬೆಳವಣಿಗೆಗಳು ಕರ್ನಾಟಕದಲ್ಲೂ ಮರುಕಳಿಸಬಹುದು? ಮರುಕಳಿಸದೇ ಇರಬಹುದು. ನಾನು ಜ್ಯೋತಿಷಿಯಲ್ಲ, ನಾನೊಬ್ಬ ಆಶಾವಾದಿ ಎಂದು ಮಾರ್ಮಿಕವಾಗಿ ನುಡಿದರು.
ಯಡಿಯೂರಪ್ಪ ಸರ್ಕಾರದ ಅವಧಿ, ಉಪ ಚುನಾವಣೆ ಬಗ್ಗೆ ಹಲವು ನಾಯಕರು ಮಾತನಾಡುವುದನ್ನು ಗಮನಿಸಿದ್ದೇನೆ. ನಾನು ಜ್ಯೋತಿಷಿಯಲ್ಲ, ಹೀಗಾಗಿ ಭವಿಷ್ಯ ನುಡಿಯುವುದಿಲ್ಲ. ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ. ಸ್ವಾರ್ಥ ಬಿಟ್ಟು ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಯಬೇಕು ಎಂದರು.
ರಾಜಕೀಯ ಬೆಳವಣಿಗೆಗಳಿಂದ ರಾಜ್ಯಕ್ಕೆ ಗೌರವ ಸಿಗಬೇಕು. ಈ ದೇಶದ ಸಂವಿಧಾನಕ್ಕೆ ಗೌರವ ಸಿಗಬೇಕು. ಜತೆಗೆ ರಾಜಕಾರಣಿಗಳಿಗೂ ಗೌರವ ಸಿಗುವಂತಾಗಬೇಕು. ಇತ್ತೀಚೆಗೆ ರಾಜಕಾರಣಿಗಳಿಗೆ ಗೌರವ ಸಿಗುತ್ತಿಲ್ಲ. ಇನ್ನು ಮುಂದಾದರೂ ರಾಜಕಾರಣಿಗಳಿಗೆ ಗೌರವ ಸಿಗುವಂತಾಗಲಿ ಎಂದು ಬಯಸುತ್ತೇನೆ.
-ಡಿ.ಕೆ.ಶಿವಕುಮಾರ್, ಮಾಜಿ ಸಚಿವ