Advertisement
ಆಯ್ದ ಕ್ಷೇತ್ರಗಳಲ್ಲಿ ಮಾತ್ರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮದೇ ಪ್ರತ್ಯೇಕ ಕಾರ್ಯತಂತ್ರ ರೂಪಿಸುತ್ತಿದ್ದಾರೆ. 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದರೂ ದಕ್ಷಿಣ ಕರ್ನಾಟಕದ ಭಾಗದಲ್ಲಿ ಮಾತ್ರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಡಿಕೆಶಿ ನಿರ್ಧರಿಸಿ ದ್ದಾರೆ. ಹುಣಸೂರು, ಕೆ.ಆರ್.ಪೇಟೆ, ಕೆ.ಆರ್.ಪುರ, ಚಿಕ್ಕಬಳ್ಳಾಪುರ, ಶಿವಾಜಿನಗರ, ಮಹಾಲಕ್ಷ್ಮೀ ಲೇಔಟ್ ಹಾಗೂ ರಾಣಿಬೆನ್ನೂರು ಕ್ಷೇತ್ರಗಳಲ್ಲಿ ಮಾತ್ರ ಪ್ರಚಾರ ನಡೆಸಲು ನಿರ್ಧರಿಸಿದ್ದಾರೆ.
Related Articles
Advertisement
ಈ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸಿದ್ದರಾಮಯ್ಯ ಅವರ ತೀರ್ಮಾನಕ್ಕೆ ಹೆಚ್ಚಿನ ಮಾನ್ಯತೆ ದೊರೆತಿರುವುದರಿಂದ ಅವರೇ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲಿ ಎಂದು ಬಹುತೇಕ ಹಿರಿಯ ನಾಯಕರು ತಟಸ್ಥ ನಿಲುವು ತಾಳಿದ್ದಾರೆ. ಆದರೆ, ಡಿ.ಕೆ.ಶಿವಕುಮಾರ್ ಎರಡೂ ಬಣಗಳ ನಡುವೆ ಸಮಾನಾಂತರ ಅಂತರ ಕಾಯ್ದು ಕೊಳ್ಳುತ್ತ ತಮ್ಮದೇ ಆದ ಪ್ರತ್ಯೇಕ ಅಸ್ತಿತ್ವ ತೋರಿಸಲು ಲೆಕ್ಕಾಚಾರದ ಮೇಲೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಕೋರ್ಟ್ ಪ್ರಕರಣ ಕಾರಣ: ಡಿ.ಕೆ.ಶಿವಕುಮಾರ್ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣ ಇನ್ನೂ ಜಾರಿ ನಿರ್ದೇಶನಾಲಯದ ತನಿಖೆ ನಡೆಯುತ್ತಿದ್ದು, ಆಗಾಗ ಕೋರ್ಟ್ ವಿಚಾರಣೆಗೆ ಹಾಜರಾಗಬೇಕಾದ ಅನಿವಾರ್ಯತೆಯಿದೆ. ಈ ಕಾರಣಕ್ಕಾಗಿ ಅವರು ಉಪ ಚುನಾವಣೆಯಲ್ಲಿ ಹೆಚ್ಚು ಸಕ್ರಿಯರಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಅವರ ಆಪ್ತ ಮೂಲಗಳ ಮಾಹಿತಿ. ಕೋರ್ಟ್ ಪ್ರಕರಣ ನಡೆಯುತ್ತಿದ್ದು ಜಾಮೀನಿನ ಮೇಲೆ ಹೊರಗಡೆ ಇರುವುದರಿಂದ ಈ ಸಂದರ್ಭದಲ್ಲಿ ತೀವ್ರತರನಾದ ಪ್ರಚಾರ ಹಾಗೂ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ವಾಗ್ಧಾಳಿ ಮಾಡುವುದರಿಂದ ಮತ್ತೆ ಇಡಿ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಆತಂಕವೂ ಅವರಿಗೆ ಕಾಡುತ್ತಿದೆ ಎನ್ನಲಾಗಿದೆ.
ಆರೋಗ್ಯ ಸಮಸ್ಯೆ: ಡಿ.ಕೆ.ಶಿವಕುಮಾರ್ ಅವರಿಗೆ ಜೈಲಿನಿಂದ ಹೊರ ಬಂದ ನಂತರ ಎದೆ ನೋವು ಹಾಗೂ ಬೆನ್ನು ನೋವಿನ ಸಮಸ್ಯೆಯೂ ಕಾಡುತ್ತಿದ್ದು, ಹೆಚ್ಚು ಪ್ರವಾಸ ಮಾಡಲು ಆಗುತ್ತಿಲ್ಲ ಎನ್ನಲಾಗಿದೆ. ಅದೇ ಕಾರಣಕ್ಕೆ ಉತ್ತರ ಕರ್ನಾಟಕ ಭಾಗದ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಡಿ.ಕೆ.ಶಿವಕುಮಾರ್ ಅವರ ಅಧಿಕೃತ ಪ್ರಚಾರ ವೇಳಾ ಪಟ್ಟಿ ಪ್ರಕಾರ ಡಿಸೆಂಬರ್ 1ರಂದು ರಾಣೆಬೆನ್ನೂರು ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವುದು ಕೂಡ ಅನುಮಾನ ಎಂದು ಹೇಳಲಾಗುತ್ತಿದೆ. ಕೆಪಿಸಿಸಿಯಿಂದ ಯಾವುದೇ ಕ್ಷೇತ್ರದಲ್ಲಿ ಪ್ರಚಾರ ನಡೆಸುವಂತೆ ಅಧಿಕೃತ ಸೂಚನೆ ಇಲ್ಲದಿರುವುದರಿಂದ ಡಿ.ಕೆ.ಶಿವಕುಮಾರ್ ಉಪ ಚುನಾವಣೆಯಲ್ಲಿ ತಮ್ಮ ಪ್ರತ್ಯೇಕ ಅಸ್ತಿತ್ವ ಮತ್ತು ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮದೇ ಆದ ಚಾಣಾಕ್ಷ ಹೆಜ್ಜೆ ಮುಂದಿಡುತ್ತಿದ್ದಾರೆ ಎನ್ನಲಾಗುತ್ತಿದೆ.
ಬದಲಾದ ಲೆಕ್ಕಾಚಾರ-ಗೋಕಾಕ್‌ನಿಂದ ದೂರ: ಡಿ.ಕೆ.ಶಿವಕುಮಾರ್ ಮೈತ್ರಿ ಸರ್ಕಾರದ ಪತನಕ್ಕೆ ಪ್ರಮುಖ ಕಾರಣವಾಗಿರುವ ರಮೇಶ್ ಜಾರಕಿಹೊಳಿಯನ್ನು ಸೋಲಿಸುವ ಪಣ ತೊಟ್ಟಿದ್ದರು. ಅಷ್ಟೇ ಅಲ್ಲದೇ ಗೋಕಾಕ್‌ನಲ್ಲಿ ಅವರನ್ನು ಸೋಲಿಸಲು ಬಿಜೆಪಿಯಲ್ಲಿ ಟಿಕೆಟ್ ವಂಚಿತ ಅಶೋಕ್ ಪೂಜಾರಿಯನ್ನು ಪಕ್ಷಕ್ಕೆ ಕರೆತಂದು ಜಾರಕಿಹೊಳಿ ಕುಟುಂಬಕ್ಕೆ ಠಕ್ಕರ್ ನೀಡಲು ಯೋಜನೆ ರೂಪಿಸಿದ್ದರು. ಆದರೆ, ಸತೀಶ್ ಜಾರಕಿಹೊಳಿ ಹಾಗೂ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಕಾರ್ಯತಂತ್ರಕ್ಕೆ ಅಡ್ಡಿಪಡಿಸಿ, ಲಖನ್ ಜಾರಕಿಹೊಳಿಗೆ ಟಿಕೆಟ್ ಸಿಗುವಂತೆ ಮಾಡಿದ್ದರಿಂದ ಡಿ.ಕೆ.ಶಿವಕುಮಾರ್ ಬೇಸರಗೊಂಡಿದ್ದಾರೆ ಎನ್ನಲಾಗಿದೆ.
ಅದೇ ಕಾರಣಕ್ಕೆ ಗೋಕಾಕ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅದೇ ರೀತಿ ಹೊಸಕೋಟೆಯಲ್ಲಿ ಎಂ.ಟಿ.ಬಿ.ನಾಗರಾಜ್ ಅವರನ್ನು ರಣರಂಗದಲ್ಲಿಯೇ ನೋಡಿಕೊಳ್ಳುತ್ತೇನೆಂದು ಹೇಳಿದ್ದ ಡಿ.ಕೆ.ಶಿವಕುಮಾರ್, ಶರತ್ ಬಚ್ಚೇಗೌಡ ಅವರನ್ನು ಪಕ್ಷಕ್ಕೆ ಕರೆತಂದು ಅಭ್ಯರ್ಥಿಯನ್ನಾಗಿ ಮಾಡಿ ಗೆಲ್ಲಿಸಿಕೊಂಡು ಬರುವ ಕಾರ್ಯತಂತ್ರ ರೂಪಿಸಿದ್ದರು. ಆದರೆ, ಅಲ್ಲಿಯೂ ಅವರ ಲೆಕ್ಕಾಚಾರ ಬದಲಾಗಿರುವುದರಿಂದ ಹೊಸಕೋಟೆಯಿಂದಲೂ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
* ಶಂಕರ ಪಾಗೋಜಿ