Advertisement

Politics: ಡಿಕೆಶಿಗೆ ಹೈಕೋರ್ಟ್‌ನಲ್ಲಿ ಹಿನ್ನಡೆ: ಮುಗಿಬಿದ್ದ ವಿಪಕ್ಷ

11:48 PM Oct 20, 2023 | Team Udayavani |

ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಆದಾಯಕ್ಕಿಂತ ಅಧಿಕ ಅಸ್ತಿ ಗಳಿಕೆ ಪ್ರಕರಣದಲ್ಲಿ ಹೈಕೋರ್ಟ್‌ನಲ್ಲಿ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ಡಿಕೆಶಿ ವಿರುದ್ಧ ಮುಗಿಬಿದ್ದಿವೆ. ಇದೇ ವಿಷಯವನ್ನಿಟ್ಟುಕೊಂಡು ಜೆಡಿಎಸ್‌-ಬಿಜೆಪಿ ಮೈತ್ರಿಕೂಟದ ನಾಯಕರು ಅವರ ವಿರುದ್ಧ ಪ್ರಬಲ ಹೋರಾಟಕ್ಕೆ ಸನ್ನದ್ಧರಾಗಿದ್ದಾರೆ. ಇದರ ಮೊದಲ ಹಂತವಾಗಿ ವಿಪಕ್ಷಗಳ ನಾಯಕರು ಡಿ.ಕೆ.ಶಿವಕುಮಾರ್‌ ವಿರುದ್ಧ ಟೀಕಾಸ್ತ್ರಗಳ ಮೂಲಕ ಹಣಿಯಲು ಮುಂದಾಗಿದ್ದಾರೆ.

Advertisement

ಪಕ್ಷಕ್ಕೆ ಚಟ್ಟ ಕಟ್ಟಿದವರೇ ಸಿಎಂ; ತಿಹಾರ್‌ ಜೈಲು ಹಕ್ಕಿಯೇ ಅಧ್ಯಕ್ಷ
ಬೆಂಗಳೂರು: ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್‌ ಪಕ್ಷದ ವಿರುದ್ಧ ತಿರುಗಿಬಿದ್ದಿರುವ ಜೆಡಿಎಸ್‌, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದೆ. ಈ ಬಗ್ಗೆ ಪಕ್ಷದ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕಾಂಗ್ರೆಸ್‌ ಹಾಗೂ ಅದರ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್‌ ಪಕ್ಷವನ್ನು ಜಿನ್ನಾ ಜೀನ್ಸಿನ ಪಕ್ಷ, ಮೀರ್‌ಸಾದಿಕ್‌ಗಳ ಆಡುಂಬೊಲ, ಕೊಳಕುಗ್ರೆಸ್‌ ಹಾಗೂ ಸ್ಕ್ಯಾಂಗ್ರೆಸ್‌ ಎಂದು ಜರೆದಿರುವ ಜೆಡಿಎಸ್‌, ಸಿಎಂ ಸಿದ್ದರಾಮಯ್ಯನವರು ಕಾಂಗ್ರೆಸ್‌ಗೆ ಚಟ್ಟ ಕಟ್ಟಿದವರು ಹಾಗೂ ತಿಹಾರ್‌ ಜೈಲಿನ ಹಕ್ಕಿ ಡಿ.ಕೆ. ಶಿವಕುಮಾರ್‌ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಎಂದು ಕುಟುಕಿದೆ. ಜತೆಗೆ ಒಕ್ಕಲಿಗರ ವಿರುದ್ಧ ಕಾಂಗ್ರೆಸ್‌ ದುಷ್ಟ ಹುನ್ನಾರ ನಡೆಸಿದೆ, ಮುಸ್ಲಿಮರ ಟೋಪಿಯನ್ನು ಕಾಂಗ್ರೆಸ್‌ ಅವಮಾನಿಸಿದೆ ಎಂದು ಜೆಡಿಎಸ್‌ ಆರೋಪಿಸಿದೆ.

ಆಡಳಿತ ಪಕ್ಷಕ್ಕೆ ಆಕ್ರೋಶ, ಹತಾಶೆ, ಆತಂಕ, ಅನುಕಂಪ ಇರುವುದು ತಪ್ಪಲ್ಲ. ಆದರೆ ಹೊಟ್ಟೆಯಲ್ಲಿರುವ ಅಸಹ್ಯವನ್ನೆಲ್ಲ ಬಾಯಲ್ಲಿ ಕಾರಿಕೊಳ್ಳುವ ವಿಕೃತಿ ಮಾತ್ರ ಇರಲೇಬಾರದು. ಒಂದೆಡೆ ಆದಾಯ ತೆರಿಗೆಯವರಿಗೆ ವೈಎಸ್‌ಟಿ, ಎಸ್‌ಎಸ್‌ಟಿ ಬಾಬ್ತುಗಳ ಕಂತೆ ಕಂತೆ ಹಣ ಸಿಕ್ಕಿದೆ. ಸಿಎಂ, ಡಿಸಿಎಂ ಪಟಾಲಂ ಪರಿಶ್ರಮದಿಂದ ಬಾಚಿದ್ದ ಪಾಪದ ಹಣ ಕೈ ತಪ್ಪಿದೆ. ಐಟಿ, ಇ.ಡಿ. ಕುಣಿಕೆ ಯಾರಿಗೆಲ್ಲ ಬಿಗಿದುಕೊಳ್ಳಲಿದೆಯೋ ಗೊತ್ತಿಲ್ಲ. ಸಾಹುಕಾರ ಶಿವಕುಮಾರ್‌ ಸುಲ್ತಾನನಿಗೂ ಸಿಬಿಐ ಸಿಕ್ಕು ಬಿದ್ದಿದೆ. ಕಾಂಗ್ರೆಸ್‌ ಸರಕಾರಕ್ಕೆ 5 ತಿಂಗಳು ತುಂಬುವ ಮೊದಲೇ ಬೆಳಗಾವಿ ಜ್ವಾಲೆ ಭುಗಿಲೆದ್ದಿದೆ. ಅಂತಃಪುರದ ಕಲಹ ಹಾದಿಬೀದಿಗಳಲ್ಲಿ ಮೂರು ಕಾಸಿಗೆ ಬಿಕರಿಯಾಗುತ್ತಿದೆ ಎಂದು ಲೇವಡಿ ಮಾಡಿದೆ.

ಶೀಘ್ರ ಡಿ.ಕೆ. ಶಿವಕುಮಾರ್‌ ಬಂಧನ: ಈಶ್ವರಪ್ಪ
ಬಾಗಲಕೋಟೆ: ಸಿಬಿಐ ದಾಳಿ ವೇಳೆ ಸಾಕಷ್ಟು ದಾಖಲೆ ಸಿಕ್ಕಿವೆ. ಹೀಗಾಗಿ ಶೀಘ್ರವೇ ಡಿಸಿಎಂ ಡಿ.ಕೆ. ಶಿವಕುಮಾರ್‌ ಬಂಧನ ಆಗಲಿದೆ. ಸಿಎಂ ಸಿದ್ದರಾಮಯ್ಯಗೆ ನೈತಿಕತೆ ಇದ್ದರೆ ಡಿಸಿಎಂ ಹುದ್ದೆ
ಯಿಂದ ಅವರನ್ನು ಕಿತ್ತು ಹಾಕಲಿ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಬಾದಾಮಿ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಬಂಧನದಲ್ಲಿ ಯಾವುದೇ ಅನುಮಾನವಿಲ್ಲ. ಅವರ ಭಂಡತನ, ಗೂಂಡಾಗಿರಿ ಕನಕಪುರ ಮತ್ತು ಅವರ ಪಕ್ಷದಲ್ಲಿ ಮಾತ್ರ ನಡೆಯಬಹುದು. ಅದನ್ನು ಕೋರ್ಟ್‌, ಕಚೇರಿ ಮೇಲೆ ನಡೆಸಲಾಗದು ಎಂದರು.

Advertisement

ಬಾಕ್ಸ್‌ಗಟ್ಟಲೆ ಅಕ್ರಮ ಆಸ್ತಿ ಪತ್ರ, ಬಂಡಲ್‌ಗ‌ಟ್ಟಲೆ ಹಣ ಸಿಕ್ಕಿದ್ದು ನೋಡಿದರೆ ಅವರು ಅಕ್ರಮವಾಗಿ ಲೂಟಿ ಮಾಡಿದ್ದಾರೆ ಎಂದು ಎಂಥವರಿಗೂ ಅನಿಸುತ್ತದೆ. ಮೂರು ತಿಂಗಳಲ್ಲಿ ವರದಿ ಕೊಡಬೇಕೆಂದು ಕೋರ್ಟ್‌ ಹೇಳಿದೆ. ಇದು ಅವರು ಶೀಘ್ರವೇ ಜೈಲಿಗೆ ಹೋಗುತ್ತಾರೆ ಎಂದರ್ಥ. ನೈತಿಕತೆ ಇದ್ದರೆ ಕೂಡಲೇ ಡಿಸಿಎಂ ಹುದ್ದೆಯಿಂದ ಹೊರ ಹೋಗಬೇಕು. ಆ ಹುದ್ದೆಯಲ್ಲಿ ಮುಂದುವರಿದರೆ ದಾಖಲೆ ಸುಟ್ಟು ಹಾಕುತ್ತಾರೆ. ಬಿಬಿಎಂಪಿಯಲ್ಲಿ ಸಾಕಷ್ಟು ದಾಖಲೆ ಸುಟ್ಟು ಹಾಕಿದ್ದಾರೆ. ಭಂಡತನ ಬಿಟ್ಟು ರಾಜೀನಾಮೆ ಕೊಡಬೇಕು ಎಂದರು.

ಶರಣಪ್ರಕಾಶ ರಾಜೀನಾಮೆಗೆ ಆಗ್ರಹ
ಸಚಿವ ಡಾ| ಶರಣಪ್ರಕಾಶ ಪಾಟೀಲ್‌ ಹೆಸರು ಬರೆದಿಟ್ಟು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ದರಿಂದ ಅವರು ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳೇ ಅವರನ್ನು ಸಚಿವ ಸ್ಥಾನದಿಂದ ಕಿತ್ತು ಬಿಸಾಡಬೇಕು. ವಿಚಾರಣೆಯಲ್ಲಿ ಅವರು ತಪ್ಪಿತಸ್ಥರಲ್ಲ ಎಂದರೆ ಅದೇ ದಿನ ಪುನಃ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಿ. ಇಲ್ಲದಿದ್ದರೆ ಈ ಕುರಿತು ಬಿಜೆಪಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜಕೀಯ ಉದ್ದೇಶಕ್ಕಾಗಿಯೇ ಪ್ರಕರಣವನ್ನು ಬಿಎಸ್‌ವೈ ಸಿಬಿಐಗೆ ಒಪ್ಪಿಸಿದ್ದರು: ಡಿಕೆಶಿ
ಬೆಂಗಳೂರು: ರಾಜಕೀಯ ಉದ್ದೇಶಕ್ಕಾಗಿಯೇ ಮಾಜಿ ಸಿಎಂ. ಬಿ.ಎಸ್‌. ಯಡಿ ಯೂರಪ್ಪ ಅವರು ನನ್ನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದರು. ಬಿಜೆಪಿ ಶಾಸಕರ ವಿರುದ್ಧವೂ ಬೇಕಾದಷ್ಟು ಪ್ರಕರಣಗಳಿವೆ. ಅವುಗಳನ್ನು ತನಿಖೆಗೆ ನೀಡದೆ ನನ್ನದನ್ನು ಮಾತ್ರ ನೀಡಿದರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಅಡ್ವೊಕೇಟ್‌ ಜನರಲ್‌ ಅವರೇ ಈ ಪ್ರಕರಣ ಸಿಬಿಐ ತನಿಖೆಗೆ ಅನುಮತಿ ನೀಡಲು ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ ಈ ವಿಚಾರವನ್ನು ಸ್ಪೀಕರ್‌ ಬಳಿಯೂ ತೆಗೆದುಕೊಂಡು ಹೋಗದೆ ಯಡಿಯೂರಪ್ಪ ಸೀದಾ ಸಿಬಿಐ ತನಿಖೆಗೆ ಅನುಮತಿ ನೀಡಿದರು. ಸಿಬಿಐ ಅವರು ಶೇ. 90ರಷ್ಟು ತನಿಖೆ ಮುಗಿದಿದೆ ಎಂದು ಹೇಳಿ¨ªಾರೆ. ನನ್ನ ಬಳಿ ಯಾವ ವಿಚಾರಣಾಧಿಕಾರಿಯೂ ಬಂದಿಲ್ಲ. ವಿವರವನ್ನೂ ಪಡೆದಿಲ್ಲ. ನೋಡೋಣ ಏನು ಮಾಡುತ್ತಾರೋ. ನಾನು ನನ್ನ ವಕೀಲರ ಬಳಿ ಚರ್ಚಿಸುವುದಾಗಿ ಹೇಳಿದರು.

ಹಾದಿಬೀದಿಯಲ್ಲಿ ಹೋಗುವವರಿ ಗೆಲ್ಲ ಉತ್ತರ ಕೊಡಲು ಆಗುವುದಿಲ್ಲ. ನ್ಯಾಯಾಲಯ ಏನು ಹೇಳುತ್ತದೋ ಅದಕ್ಕೆ ಗೌರವ ಕೊಡಬೇಕು. ನೀವು ಅಷ್ಟೇ (ಮಾಧ್ಯಮದವರು) ಮಿಕ್ಕಿದವರ ಮಾತಿಗೆಲ್ಲ ಕಿವಿಗೊಡಬಾರದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next