ಬೆಂಗಳೂರು : ಕುಮಾರಸ್ವಾಮಿ ಅವರನ್ನು ಅಣ್ಣ ಎಂದು ಕರೆಯಬಾರದು ಎಂದಾದರೆ, ಕುಮಾರಸ್ವಾಮಿ ಸಾಹೇಬರು ಎಂದು ಕರೆಯುತ್ತೀನಿ, ಅವರಿಗೆ ಈ ಗೌರವವನ್ನು ನೀಡಬಾರದೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ತಮ್ಮನ್ನು ಅಣ್ಣಾ ಎಂದು ಕರೆದ ಬಗ್ಗೆ ಕುಮಾರಸ್ವಾಮಿ ಮಾಡಿದ ಆಕ್ಚೇಪಕ್ಕೆ ಉತ್ತರಿಸಿದ ಅವರು, ನಾವು ಜನರ ಮಧ್ಯೆ ಇದ್ದೇವೆ. ಅವರಿಗೆ ಜನರೇ ಉತ್ತರ ನೀಡಲಿದ್ದಾರೆ. ಜಲಧಾರೆ ಕಾರ್ಯಕ್ರಮವನ್ನು ಕೃಷ್ಣಭೈರೇಗೌಡ ಅವರು ಸಚಿವರಾಗಿದ್ದಾಗ ಜಾರಿಗೆ ತಂದಿದ್ದರು. ಕೇವಲ ಹೆಸರು ಇಟ್ಟುಕೊಂಡಿದ್ದಾರೆಯೇ?ರಾಜಕೀಯ ಪಕ್ಷವಾಗಿ ರಾಜ್ಯದ ಜನರ ಹಿತದೃಷ್ಟಿಯಿಂದ ಜೆಡಿಎಸ್ ನವರು ಏನು ಮಾಡುತ್ತಾರೋ ಮಾಡಲಿ, ಅವರಿಗೆ ಶುಭವಾಗಲಿ’ ಎಂದು ಉತ್ತರಿಸಿದರು.
ಯಾವ ಜಿಲ್ಲೆಯಲ್ಲಿ ಎಷ್ಟು ಕೋವಿಡ್ ಸೋಂಕಿತರು ಇದ್ದಾರೆ, ಅವರಲ್ಲಿ ಎಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಅವರಲ್ಲಿ ಎಷ್ಟು ಮಂದಿ ವೆಂಟಿಲೇಟರ್ ಹಾಗೂ ಐಸಿಯುನಲ್ಲಿ ಇದ್ದಾರೆ ಎಂಬ ಮಾಹಿತಿ ಕಲೆ ಹಾಕಿದ್ದೇವೆ. ಇಡೀ ರಾಜ್ಯದಲ್ಲಿ 2% ರಷ್ಟು ಸೋಂಕು ಇಲ್ಲ. ಕರ್ಫ್ಯೂ ಅಥವಾ ಲಾಕ್ಡೌನ್ ಹಾಕಬೇಕಾದರೆ ಸರ್ಕಾರಕ್ಕೆ ತನ್ನದೇ ಆದ ಮಾನದಂಡ ಇದೆ. ಎಷ್ಟು ಸೋಂಕಿತರು, ಎಷ್ಟು ಮಂದಿ ಆಸ್ಪತ್ರೆಗೆ ಸೇರಿದ್ದಾರೆ, ಅವರಲ್ಲಿ ಎಷ್ಟು ಜನ ಐಸಿಯುನಲ್ಲಿ ಇದ್ದಾರೆ ಎಂಬ ಮಾನದಂಡ ಬೇಕು ಎಂದು ಆಗ್ರಹಿಸಿದರು.
2ನೇ ಅಲೆಯಲ್ಲಿ ಆಕ್ಸಿಜನ್ ಬೇಡಿಕೆ 800 ಮೆಟ್ರಿಕ್ ಟನ್ ಇತ್ತು, ಶೇ.40 ರಷ್ಟು ಆಸ್ಪತ್ರೆ ಬೆಡ್ ತುಂಬಿದ್ದವು. ಈಗ ವೀಕೆಂಡ್ ಕರ್ಫೂ ಹೇರಿದ್ದಾರೆ. ಜನವರಿ 6 ರಂದು ಸೋಂಕು ಪ್ರಮಾಣ ಶೇ. 3.9 ರಷ್ಟಿದೆ. ಈ ಹಿಂದೆ ಈ ಪ್ರಮಾಣ 5 % ಆದರೆ ಲಾಕ್ ಡೌನ್ ಮಾಡುವುದಾಗಿ ಹೇಳಿದ್ದರು. ಕಳೆದ ವರ್ಷ ಯಡಿಯೂರಪ್ಪನವರ ಸರ್ಕಾರ ಲಾಕ್ ಡೌನ್ ಮಾಡಿದಾಗ 33 % ಇತ್ತು. ಅಂದರೆ ಈಗಿನ ದರಕ್ಕಿಂತ 10 ಪಟ್ಟು ಹೆಚ್ಚಿತ್ತು.ಇದನ್ನು ಬಿಜೆಪಿ ಮರೆಯಬಾರದು ಎಂದರು.
ಕಳೆದ ಲಾಕ್ ಡೌನ್ ನಿಂದಾಗಿ ಹಿಂದೆ 12 ಕೋಟಿ ಜನ ಕೆಲಸ ಕಳೆದುಕೊಂಡಿದ್ದಾರೆ. ಅದರಲ್ಲಿ 1 ಕೋಟಿ ಕನ್ನಡಿಗರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಧಿಕೃತ ದಾಖಲೆಗಳಿವೆ. ಈ ರೀತಿ ಬಿಜೆಪಿ ಜನವಿರೋಧಿ ನೀತಿ ತೆಗೆದುಕೊಂಡಿದೆ.ಅವೈಜ್ಞಾನಿಕ ಲಾಕ್ ಡೌನ್ ನಿಂದ ರಾಜ್ಯದ ಆದಾಯದ ಮೇಲೂ ಇದು ಕೆಟ್ಟ ಪರಿಣಾಮ ಬೀರಿದೆ. ಸುಮಾರು ಶೇ.14.46 ರಷ್ಟು ಅಂದರೆ 78 ಸಾವಿರ ಕೋಟಿಯಷ್ಟು ಹೆಚ್ಚುವರಿ ಸಾಲ ಮಾಡಲಾಗಿದೆ ಎಂದು ಸಿಎಜಿ ವರದಿ ತಿಳಿಸಿದೆ ಎಂದರು.
ಸಚಿವ ಸಂಪುಟದ ಆರು ಸಚಿವರು ನಿರ್ಬಂಧಕ್ಕೆ ವಿರೋಧಿಸಿದ್ದಾರೆ. ನಮ್ಮಲ್ಲಿ ಕೋವಿಡ್ ಇಲ್ಲ, ಎಲ್ಲಿ ಪ್ರಕರಣ ಹೆಚ್ಚಾಗಿದೆಯೋ ಅಲ್ಲಿ ಮಾಡಿ, ನೀವು ಈಗ ಮಾಡಿರುವ ನಿರ್ಬಂಧ ಸರಿ ಇಲ್ಲ ಎಂದಿದ್ದಾರೆ. ನಮ್ಮ ರಾಜಕಾರಣ ನಿಲ್ಲಿಸಲು ಎಲ್ಲ ವರ್ಗದ ಜನರ ವ್ಯಾಪಾರ ನಿಲ್ಲಿಸಿ, ಬಡವರ ಪ್ರಾಣ ಹಿಂಡುತ್ತಿದ್ದೀರಿ, ಈ ನಿರ್ಬಂಧ ವಾಪಸ್ ಪಡೆಯಿರಿ ಎಂದು ಸಿಎಂಗೆ ಪತ್ರ ಬರೆದು ಒತ್ತಾಯ ಮಾಡಿದ್ದೇನೆ ಎಂದರು.
ಬೀದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ನಿರ್ಬಂಧದಿಂದ ತಮಗಾಗುವ ನಷ್ಟವನ್ನು ತೋಡಿಕೊಂಡು ಕಣ್ಣೀರಿಡುವ ವಿಡಿಯೋಗಳು ಬರುತ್ತಿವೆ. ಜನ ಈ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಈ ಸರ್ಕಾರ ಎಲ್ಲ ವರ್ಗದ ಜನರನ್ನು ಬದುಕಿರುವಾಗಲೇ ಸಾಯಿಸುತ್ತಿದೆ. ಮುಖ್ಯಮಂತ್ರಿಗಳಿಗೆ ಭಗವಂತ ಬುದ್ಧಿ ನೀಡಲಿ ಎಂದು ವ್ಯಂಗ್ಯವಾಡಿದರು.