Advertisement

DK ,Udupi ಗ್ರಾಮಾಡಳಿತ ಯಂತ್ರಗಳೇ ಸ್ತಬ್ಧಗೊಳ್ಳುವ ಆತಂಕ

12:36 AM Nov 02, 2023 | Team Udayavani |

ಪುತ್ತೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 68 ಗ್ರಾಮ ಪಂಚಾಯತ್‌ಗಳಲ್ಲಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಒ), ಗ್ರೇಡ್‌-1 ಹಾಗೂ ಗ್ರೇಡ್‌-2 ಕಾರ್ಯದರ್ಶಿ ಹುದ್ದೆಗಳೇ ಖಾಲಿ ಇದ್ದು ಗ್ರಾಮಾಡಳಿತ ಯಂತ್ರ ಸ್ತಬ್ಧವಾಗುವ ಆತಂಕ ಎದುರಾಗಿದೆ.

Advertisement

ಸರಕಾರದ ವಿವಿಧ ಯೋಜನೆಗಳು ಜನರನ್ನು ತಲುಪಲು ಇರುವ ನೇರ ಸಂಪರ್ಕ ಸೇತುವಾಗಿರುವ ಗ್ರಾ.ಪಂ.ಗಳಲ್ಲಿಯೇ ಮುಖ್ಯ ಹುದ್ದೆಗಳು ಖಾಲಿಯಿರುವುದರಿಂದ ಜನಸಾಮಾನ್ಯರಿಗೆ ತೊಡಕಾಗಿದೆ.

68 ಪಿಡಿಒ ಹುದ್ದೆ ಖಾಲಿ
ದ.ಕ. ಜಿಲ್ಲೆಯ 9 ತಾಲೂಕುಗಳ 51 ಗ್ರಾ.ಪಂ. ಹಾಗೂ ಉಡುಪಿ ಜಿಲ್ಲೆಯ 7 ತಾಲೂಕುಗಳ 17 ಗ್ರಾ.ಪಂ.ಗಳಲ್ಲಿ ಪಿಡಿಒಗಳಿಲ್ಲ. ಈಗಂತೂ ವರ್ಗಾವಣೆ ನಡೆಯುತ್ತಿರುವುದರಿಂದ ಮತ್ತಷ್ಟು ಗ್ರಾ.ಪಂ.ಗಳಲ್ಲಿ ಪಿಡಿಒಗಳು ಇಲ್ಲವೆನ್ನುವ ಸ್ಥಿತಿ ನಿರ್ಮಾಣವಾಗಿದೆ. ಖಾಲಿ ಇರುವ ಪಂಚಾಯತ್‌ಗಳಿಗೆ ಇನ್ನೊಂದು ಗ್ರಾ.ಪಂ.ನ ಪಿಡಿಒಗಳನ್ನು ಡೆಪ್ಯೂಟೇಷನಡಿ ನಿಯೋಜಿಸಲಾಗುತ್ತಿದೆ. ಕೆಲವು ಪಿಡಿಒಗಳಿಗೆ ಎರಡ ಕ್ಕಿಂತ ಹೆಚ್ಚಿನ ಗ್ರಾ.ಪಂ. ಹೊಣೆ ಇರುವುದರಿಂದ ಯಾವ ಪಂಚಾಯತ್‌ನಲ್ಲೂ ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗದ ಸ್ಥಿತಿ ಅವರದ್ದಾಗಿದೆ.

ಗ್ರೇಡ್‌-1, 2 ಕಾರ್ಯದರ್ಶಿ
ಒಟ್ಟು 84 ಹುದ್ದೆ ಖಾಲಿ
ಪಿಡಿಒಗಳು ಇಲ್ಲದ ಪಂಚಾಯತ್‌ಗಳಲ್ಲಿ ಕಾರ್ಯನಿರ್ವಹಣೆಯ ದೃಷ್ಟಿಯಿಂದ ಕಾರ್ಯದರ್ಶಿಗಳ ಹುದ್ದೆ ಪ್ರಮುಖವಾಗಿರುತ್ತದೆ. ಆದರೆ ಆ ಹುದ್ದೆಗಳು ಕೂಡ ಖಾಲಿ ಇವೆ. ದ.ಕ. ಜಿಲ್ಲೆಯ 41 ಗ್ರೇಡ್‌-1 ಕಾರ್ಯದರ್ಶಿ ಹುದ್ದೆಗಳಲ್ಲಿ 22, ಗ್ರೇಡ್‌-2 ಕಾರ್ಯದರ್ಶಿ ಮಂಜೂರಾತಿ 126 ಹುದ್ದೆಗಳಲ್ಲಿ 34 ಹುದ್ದೆಗಳು ಖಾಲಿ ಇವೆ. ಉಡುಪಿಯಲ್ಲಿ 57 ಗ್ರೇಡ್‌-1 ಕಾರ್ಯದರ್ಶಿ ಹುದ್ದೆಗಳಲ್ಲಿ 1, ಗ್ರೇಡ್‌-2 ಕಾರ್ಯದರ್ಶಿ 98 ಹುದ್ದೆಗಳಲ್ಲಿ 27 ಹುದ್ದೆಗಳು ಖಾಲಿ ಇವೆ ಎಂದು ಉಭಯ ಜಿಲ್ಲೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವರ್ಗಾವಣೆ ಹೊಣೆ
ರಾಜ್ಯ ಮಟ್ಟಕ್ಕೆ!
ಈ ಹಿಂದೆ ಗ್ರಾ.ಪಂ. ಪಿಡಿಒಗಳನ್ನು ಆಯಾ ಜಿಲ್ಲೆಯೊಳಗೆ ಅಂತರ್‌ ತಾಲೂಕು ವ್ಯಾಪ್ತಿಯಲ್ಲಿ ವರ್ಗಾಯಿಸುವ ಅಧಿಕಾರವನ್ನು ಜಿ.ಪಂ. ಸಿಇಒಗಳು ಹೊಂದಿದ್ದರು. ಅಂತರ್‌ ಜಿಲ್ಲೆಯ ವರ್ಗಾವಣೆಯಾಗಿದ್ದರೆ ಮಾತ್ರ ಅದು ಪಂಚಾಯತ್‌ ರಾಜ್‌ ಇಲಾಖೆಯ ಕಮಿಷನರ್‌ ವ್ಯಾಪ್ತಿಗೆ ಒಳಪಡುತ್ತಿತ್ತು. ಹಾಲಿ ಸರಕಾರವು ಎಲ್ಲ ಹಂತದ ವರ್ಗಾವಣೆಯ ಜವಾಬ್ದಾರಿಯನ್ನು ಪಂಚಾಯತ್‌ ರಾಜ್‌ ಇಲಾಖೆಯ ಆಯುಕ್ತರಿಗೆ ವಹಿಸಿದೆ.

Advertisement

ಆಡಳಿತ ಸ್ತಬ್ಧದ ಆತಂಕ
ಗ್ರಾ.ಪಂ. ವ್ಯವಸ್ಥೆಯ ಪ್ರಧಾನ ಭಾಗವಾಗಿರುವ ಪಿಡಿಒ ಹುದ್ದೆಗಳೇ ಖಾಲಿ ಇರುವ ಕಾರಣ ವಸತಿ ಯೋಜನೆ, ನರೇಗಾ ಸೇರಿದಂತೆ ಪ್ರಮುಖ ಕೆಲಸಗಳ ನಿರ್ವಹಣೆಗೆ ಸಮಸ್ಯೆ ಉಂಟಾಗಿದೆ.

ಕೆಲವು ಗ್ರಾಮ ಪಂಚಾಯತ್‌ಗಳಲ್ಲಿ ಪಿಡಿಒ ಹುದ್ದೆ ಖಾಲಿ ಇರುವುದು ನಿಜ. ಈಗ ಪಿಡಿಒಗಳ ವರ್ಗಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ತಾತ್ಕಾಲಿಕ ನೆಲೆಯಲ್ಲಿ ಇನ್ನೊಂದು ಗ್ರಾ.ಪಂ.ನ ಪಿಡಿಒಗಳನ್ನು ಖಾಲಿ ಇರುವ ಪಂಚಾಯತ್‌ಗಳಿಗೆ ಡೆಪ್ಯೂಟೇಷನ್‌ನಡಿ ನಿಯೋಜಿಸಲಾಗಿದೆ. ಪಿಡಿಒ ಹುದ್ದೆ ಖಾಲಿ ಇರುವ ಗ್ರಾ.ಪಂ.ಗಳಿಗೆ ಸರಕಾರದ ಹಂತದಲ್ಲಿ ಪೂರ್ಣಕಾಲಿಕ ಪಿಡಿಒಗಳನ್ನು ನೇಮಿಸುವ ಪ್ರಕ್ರಿಯೆ
ನಡೆಯಲಿದೆ.
– ಡಾ| ಆನಂದ್‌ ಕೆ., ಸಿಇಒ, ಜಿ.ಪಂ. ದ.ಕ.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next