ಬೆಂಗಳೂರು: ರಾಜ್ಯದ ಸಚಿವರು ಹಾಗೂ ಅಧಿಕಾರಿಗಳೇ ನಮಗೆ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಪದ್ಮನಾಭ ನಗರದಲ್ಲಿ ನೂತನ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ನಾವು ದಾಖಲೆಗಳನ್ನು ಹುಡುಕಬೇಕಾಗಿಲ್ಲ. ಅವುಗಳೇ ನಮ್ಮ ಬಳಿಗೆ ಬರುತ್ತಿವೆ. ಬೆಂಕಿ ಇಲ್ಲದೆ ಹೊಗೆ ಬರುತ್ತದಾ ಎಂದು ಪ್ರಶ್ನಿಸಿದರು.
ಸೂಕ್ತ ಸಮಯ ಬಂದಾಗ ನಾವು ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ. ರಾಜ್ಯ ಸರಕಾರ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ತಮಗೆ ಅನುಕೂಲವಾಗುವಂಥ ವಿಷಯಗಳನ್ನು ಮಾತ್ರವೇ ಸರಕಾರ ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದೆ ಎಂದರು.
ಪ್ರಧಾನಮಂತ್ರಿಗೆ ಬರೆಯಲಾಗಿರುವ ಪತ್ರದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಬಿಟ್ ಕಾಯಿನ್ ವ್ಯವಹಾರದ ಬಗ್ಗೆ ತಕರಾರಿಲ್ಲ. ಅದರಲ್ಲಿ ಹ್ಯಾಕಿಂಗ್ ನಡೆದಿದೆಯೇ ಎಂಬುದಷ್ಟೇ ಮುಖ್ಯ. ಸತ್ಯಾಂಶವನ್ನು ಸರಕಾರ ಜನರ ಮುಂದಿಡಬೇಕು ಎಂದು ಆಗ್ರಹಿಸಿದರು.
ಪ್ರಧಾನಮಂತ್ರಿಗಳು ಬಿಟ್ಟುಬಿಡಿ ಎಂದ ಮಾತ್ರಕ್ಕೆ ನಾವ್ಯಾಕೆ ಬಿಟ್ಟುಬಿಡಬೇಕು? ಇದು ಜನರ ವಿಚಾರವಾಗಿದ್ದು, ದೇಶದಲ್ಲಿ ಯಾರು ಅವ್ಯವಹಾರ ಮಾಡಿದರೂ ತಪ್ಪೇ ಎಂದರು.
ಬಿಟ್ ಕಾಯಿನ್ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಚಿವರು ಭಾಗಿಯಾಗಿದ್ದಾರೆ ಎಂಬ ಮಾತುಗಳಿರುವ ಆಡಿಯೋ ಇದೆ ಎಂದು ಹೇಳಲಾಗಿದೆ. ಸಮಯ ಬಂದಾಗ ಎಲ್ಲವೂ ಹೊರ ಬರಲಿವೆ.
-ಡಿ.ಕೆ.ಶಿವಕುಮಾರ್