ಮೈಸೂರು: ನಾವು ಎಲ್ಲಾ ಲೆಕ್ಕಾಚಾರ ಮಾಡಿಯೇ ಜನರಿಗೆ ಭರವಸೆ ಕೊಟ್ಟಿದ್ದೇವೆ. ನಾವು ಲಂಚ ಕೊಟ್ಟು ಮತ ಕೇಳುತ್ತಿಲ್ಲ. ಬದ್ಧತೆಯ ಭರವಸೆ ನೀಡಿ ಮತ ಕೇಳುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಇಂಧನ ಸಚಿವನಾಗಿದ್ದವನು. ನನಗೆ ಗೊತ್ತಿದೆ ಜನರಿಗೆ ಹೇಗೆ ಉಚಿತ ವಿದ್ಯುತ್ ಕೊಡಬೇಕೆಂಬುದು. ಸಿದ್ದರಾಮಯ್ಯನವರು ವಿತ್ತ ಸಚಿವರಾಗಿದ್ದವರು. ಅವರಿಗೂ ಗೊತ್ತಿದೆ ಹೇಗೆ ಹಣಕಾಸು ವ್ಯವಸ್ಥೆ ಮಾಡಬೇಕು ಎಂಬುದು. ಈ ಬಿಜೆಪಿ ಸರ್ಕಾರ 40% ನಿಲ್ಲಿಸಿದರೆ ಅದೇ ದುಡ್ಡಲ್ಲಿ ಜನರ ಕಲ್ಯಾಣ ಮಾಡಬಹುದು. ದೇಶದಲ್ಲೇ ಈ ಭ್ರಷ್ಟ ಸರ್ಕಾರದಿಂದ ಕರ್ನಾಟಕಕ್ಕೆ ಕೆಟ್ಟ ಹೆಸರು ಬಂದಿದೆ. ಹೋಟೆಲ್ ತಿಂಡಿ ಬೋರ್ಡ್ ರೀತಿ ಇವರು ಎಲ್ಲದಕ್ಕೂ ಬೋರ್ಡ್ ಹಾಕುತ್ತಿದ್ದಾರೆ ಇಂತಹ ಸರ್ಕಾರವನ್ನ ಯಾವತ್ತೂ ನೋಡಿರಲಿಲ್ಲ ಎಂದರು.
ರಾಜ್ಯ ನಾಯಕರ ಹೆಸರು ಹೇಳಿದರೆ ಮೋದಿ ಅನರನ್ನು ಪದೇ ಪದೇ ಕರೆಸುತ್ತಿದ್ದಾರೆ. ರಾಜ್ಯದ ಜನರ ಕಷ್ಟ ಕೇಳಲು ಮೋದಿ ಯಾವತ್ತು ಕರ್ನಾಟಕಕ್ಕೆ ಬರಲಿಲ್ಲ. ಈಗ ಪದೇ ಪದೇ ಬರುತ್ತಿದ್ದಾರೆ. ಮೋದಿ ಎಷ್ಟೇ ಬಾರಿ ಬಂದರೂ ಏನು ಪ್ರಯೋಜನವಾಗುವುದಿಲ್ಲ ಎಂದರು.
ಫೆ.3 ರಿಂದ ಕಾಂಗ್ರೆಸ್ ನಾಯಕರಿಂದ ಮತ್ತೊಂದು ಸುತ್ತಿನ ಪ್ರವಾಸ ಹಾಗೂ ಈ ಬಾರಿ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಂದ ಪ್ರತ್ಯೇಕ ಪ್ರವಾಸದ ಕುರಿತು ಪ್ರತಿಕ್ರಿಯಿಸಿದ ಅವರು, ಉತ್ತರಕರ್ನಾಟಕ ತಾಲೂಕು ಭಾಗದಿಂದ ಸಿದ್ದರಾಮಯ್ಯ ಪ್ರವಾಸ ಆರಂಭವಾಗುತ್ತದೆ. ದಕ್ಷಿಣ ಕರ್ನಾಟಕ ಭಾಗದಿಂದ ನಾನು ಪ್ರವಾಸ ಆರಂಭಿಸುತ್ತೇನೆ. ಇದು ಮುಗಿದ ಬಳಿಕ ನಾನು ಉತ್ತರ ಭಾಗಕ್ಕೆ ಹೋಗುತ್ತೇನೆ, ಅವರು ದಕ್ಷಿಣ ಭಾಗಕ್ಕೆ ಬರುತ್ತಾರೆ ಎಂದು ಹೇಳಿದರು.