ಮಂಡ್ಯ: ಲೋಕಸಭಾ ಕ್ಷೇತ್ರದಲ್ಲಿ ಜಿಲ್ಲೆಯ ಸ್ವಾಭಿಮಾನಿ ಜನತೆ ಇದುವರೆಗೆ ಮನೆ ಗೌಡಿಕೆಯ ಆಡಳಿತವನ್ನು ಬೇರೆಯವರಿಗೆ ಕೊಟ್ಟ ನಿದರ್ಶನ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇ ಗೌಡ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ ಅವರು, ಕೆ.ವಿ.ಶಂಕರೇ ಗೌಡ, ಎಸ್.ಎಂ.ಕೃಷ್ಣ, ಅಂಬರೀಷ್ ಆದಿಯಾಗಿ ಜಿಲ್ಲೆಯವರನ್ನು ಗೆಲ್ಲಿಸಿದ್ದೀರಿ. ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಹಾಸನ ಆಯ್ತು, ರಾಮನಗರ ಆಯ್ತು, ಈಗ ಮಂಡ್ಯ ನನ್ನ ಭೂಮಿ ಎಂದು ಬಂದಿದ್ದಾರೆ. ಎಲ್ಲ ಕಡೆ ನೀವೇ ನಿಂತರೆ ಕಾರ್ಯಕರ್ತರು ಏನು ಮಾಡುತ್ತಾರೆ? ಪುಟ್ಟರಾಜುಗೆ ಟಿಕೆಟ್ ಸಿಗಲಿದೆ ಎಂದು ನಿರೀಕ್ಷೆಯಲ್ಲಿದ್ದರು. ಆದರೆ ಅವರ ಕಥೆ ಏನು ಎಂದು ಪ್ರಶ್ನಿಸಿದ ಅವರು, ರಾಮನಗರ ಜಿಲ್ಲೆ ಎಚ್.ಡಿ.ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದ್ದಲ್ಲದೆ, ಪ್ರಧಾನಿ ಮಟ್ಟದವರೆಗೆ ಬೆಳೆಸಿತು. ಎಚ್.ಡಿ.ಕುಮಾರಸ್ವಾಮಿ ಅವರನ್ನು ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿತು. ಈಗ ಅನ್ನ ಹಾಕಿದ ಮನೆಯನ್ನು ಬಿಟ್ಟು ಬಂದಿದ್ದಾರೆ ಎಂದು ತಿಳಿಸಿದರು.
ಸಿಎಂ ಸ್ಥಾನದ ಆಶಯ ವ್ಯಕ್ತಪಡಿಸಿದ ಡಿಕೆಶಿ
ಜಿಲ್ಲೆಯ ಜನ ನನ್ನ ನೋಡಿಕೊಂಡು ಆರು ಸ್ಥಾನಗಳನ್ನು ನೀಡಿದ್ದೀರಿ. ಅದು ಎಂದಿಗೂ ಹುಸಿಯಾಗುವುದಿಲ್ಲ ಎಂದು ಸಿಎಂ ಸ್ಥಾನದ ಆಶಯ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್, ಲೋಕಸಭೆ ಚುನಾವಣೆಯಲ್ಲಿ 8 ಮಂದಿ ಒಕ್ಕಲಿಗರಿಗೆ ಟಿಕೆಟ್ ನೀಡಿದ್ದೇವೆ. 6 ಮಂದಿ ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.