Advertisement
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಅನ್ಯ ಪಕ್ಷಗಳ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೋಮವಾರ ಸೇರ್ಪಡೆ ಮಾಡಿಕೊಂಡ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;
Related Articles
Advertisement
ದಿನನಿತ್ಯ ಬಳಸುವ ಅಡುಗೆ ಎಣ್ಣೆ 95 ರೂ ನಿಂದ 220 ಆಗಿದೆ. ಅಡುಗೆ ಅನಿಲದ ಬೆಲೆ ಮಾತನಾಡುವಂತಿಲ್ಲ. ಹೀಗೆ ದಿನಸಿ ಸಾಮಾಗ್ರಿ ದುಪ್ಪಟ್ಟಾಗಿದೆ. ಜನರ ದಿನನಿತ್ಯದ ವೆಚ್ಚ ಈ ಹಿಂದೆಗಿಂತ ಶೇ.60ರಷ್ಟು ಹೆಚ್ಚಾಗಿದೆ. ಈ ಸಮಸ್ಯೆ ಹೇಗೆ ಬಗೆಹರಿಸಬೇಕು ಎಂದು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷ ಡಾ.ಪರಮೇಶ್ವರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಸಿದ್ಧ ಮಾಡಲಾಗುತ್ತಿದೆ ಎಂದು ಹೇಳಿದರು.
ನಾಡಿದ್ದಿನಿಂದ ನಾನು ಹಾಗೂ ಸಿದ್ದರಾಮಯ್ಯ ಅವರ ಯಾತ್ರೆ ಆರಂಭವಾಗುತ್ತಿದೆ. ಇದರ ಬಗ್ಗೆ ನಾಳೆ ವಿವರವಾದ ಮಾಹಿತಿ ನೀಡುತ್ತೇವೆ.
ರಾಜ್ಯ ಹಾಗೂ ದೇಶದ ಜನಸಂಖ್ಯೆಯಲ್ಲಿ ಶೇ.50ರಷ್ಟು ಮಹಿಳೆಯರಿದ್ದಾರೆ. ಹೀಗಾಗಿ ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಅವರ ಬದುಕಿನಲ್ಲಿ ಕಾಂಗ್ರೆಸ್ ಪಕ್ಷ ಕೊಡುಗೆ ನೀಡಿ, ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ನಾಯಕತ್ವ, ಶಕ್ತಿ ನೀಡುತ್ತಾ ಬಂದಿದೆ. ಈ ಹಿಂದೆ ಅಂಗನವಾಡಿ ಕಾರ್ಯಕ್ರಮ, ಆಶಾಕಾರ್ಯಕರ್ತರು, ಸ್ತ್ರೀಶಕ್ತಿ ಸ್ವಸಹಾಯ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಪಕ್ಷ ಮಾತ್ರ ಮಾಡಿಕೊಂಡು ಬಂದಿದೆ ಎಂದರು.
ಚುನಾವಣೆಗೂ ಮುನ್ನ ಮಹಿಳೆಯರ ಸಬಲೀಕರಣಕ್ಕೆ ಮಹಿಳೆಯರಿಗೆ ನೀಡುವ ಭರವಸೆ ಬಿಡುಗಡೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಜ.15ರ ಒಳಗೆ ಎಲ್ಲ ಹೆಣ್ಣು ಮಕ್ಕಳು ಹಾಗೂ ನಾಯಕರುಗಳು ತಮ್ಮ ಸಲಹೆ ನೀಡಬಹುದು. ಮಹಿಳೆಯರ ಆಚಾರ, ವಿಚಾರ, ಅಭಿಪ್ರಾಯ ನಮ್ಮ ಧ್ವನಿ ಆಗಬೇಕು, ಮಹಿಳೆಯರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಮಹಿಳೆಯರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಸಾರ್ವಜನಿಕರು, ಬೇರೆ ಪಕ್ಷದ ಮಹಿಳೆಯರು ಕೂ ಸಲಹೆ ನೀಡಬಹುದು. ಸಾಮಾಜಿಕ ಜಾಲತಾಣ, ಇಮೇಲ್, ವಾಟ್ಸಪ್ ಹಾಗೂ ಪತ್ರದ ಮೂಲಕ ತಮ್ಮ ಸಲಹೆ ನೀಡಬಹುದು ಎಂದರು.
ಇದನ್ನೂ ಓದಿ: ಜ.12 ರಂದು ಪ್ರಧಾನಿ ಮೋದಿ ಹುಬ್ಬಳ್ಳಿಗೆ ಆಗಮನ: ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗಿ
ಇನ್ನು ಜ.16ರಂದು ಅರಮನೆ ಮೈದಾನದಲ್ಲಿ ಮಹಿಳೆಯರ ನಾ ನಾಯಕಿ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ. ಈ ಸಮಾವೇಶದಲ್ಲಿ ಪಂಚಾಯ್ತಿ, ಸಹಕಾರ ಸಂಘಗಳಲ್ಲಿ ಸ್ಪರ್ಧೆ ಮಾಡಿದ ಮಹಿಳಾ ನಾಯಕಿಯರು ಭಾಗವಹಿಸುತ್ತಾರೆ. ರಾಜ್ಯದ ಮೂಲೆ ಮೂಲೆಗಳಿಂದ ಪ್ರತಿ ಬೂತ್, ಪಂಚಾಯ್ತಿಗಳಿಂದ ಕನಿಷ್ಠ 3-10 ಹೆಣ್ಣು ಮಕ್ಕಳು ಈ ಸಮಾವೇಶಕ್ಕೆ ಆಗಮಿಸಬೇಕು ಎಂದು ಕರೆ ನೀಡುತ್ತಿದ್ದೇನೆ. ಹೆಣ್ಣು ಸಮಾಜದ ಕಣ್ಣು ಅವರು ಒಂದು ಶಕ್ತಿಯಾಗಿದ್ದು, ಅವರ ಸಬಲೀಕರಣಕ್ಕೆ ಸಮಾವೇಶ ಹಮ್ಮಿಕೊಂಡಿದ್ದೇವೆ. ಈ ಸಮಾವೇಶಕ್ಕೆ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಿದ್ದೇವೆ. ಈಗಾಗಲೇ ಸಾವಿರಾರು ಸಲಹೆಗಳು ಬಂದಿದ್ದು, ಇವುಗಳನ್ನು ಒಂದು ಸಮಿತಿ ಪರಿಶೀಲನೆ ನಡೆಸುತ್ತಿವೆ. ಈ ಸಮಾವೇಶಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆಗಮಿಸಲಿದ್ದಾರೆ. ಪ್ರಿಯಾಂಕಾ ಅವರು ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ನೀಡುವ ಭರವಸೆಗಳನ್ನು ಘೋಷಣೆ ಮಾಡಲಿದ್ದಾರೆ. ಮಹಿಳೆಯರಿಗೆ ರಾಜಕೀಯವಾಗಿ ಪ್ರಿಯಾಂಕಾ ಗಾಂಧಿ ಅರು ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿ ಮಹಿಳೆಯರ ಧ್ವನಿಯಾಗಿ ಸಂದೇಶ ನೀಡುತ್ತಿದ್ದಾರೆ.
ಪ್ರಶ್ನೋತ್ತರ :
ಮಹಿಳೆಯರಿಗೆ ನೀಡಲಾಗುವ ಘೋಷಣೆಗಳನ್ನು ಈಡೇರಿಸುವ ಕುರಿತು ಕೇಳಿದ ಪ್ರಶ್ನೆಗೆ, ‘ನಾವು ನುಡಿದಂತೆ ನಡೆಯುತ್ತೇವೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ 600 ಭರವಸೆ ನೀಡಿದ್ದು, 550 ಭರವಸೆ ಈಡೇರಿಸಿಲ್ಲ. ಈ ಬಗ್ಗೆ ನಿತ್ಯ ಒಂದು ಪ್ರಶ್ನೆ ಕೇಳುತ್ತಿದ್ದು, ಅದಕ್ಕೆ ಉತ್ತರ ನೀಡಲಾಗುತ್ತಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರ ಬರುವ ಮುನ್ನ ನಾವು ಕೊಟ್ಟ ಭರವಸೆಗಳಲ್ಲಿ ಶೇ.95ರಷ್ಟು ಪೂರ್ಣಗೊಳಿಸಿ ನಂತರ ಹೆಚ್ಚುವರಿ ಕಾರ್ಯಕ್ರಮ ನೀಡಲಾಗಿತ್ತು’ ಎಂದು ಹೇಳಿದರು.
ಮಹಿಳೆಯರಿಗೆ ರಾಜಕೀಯ ಪ್ರಾತಿನಿದ್ಯ ನೀಡುವ ಬಗ್ಗೆ ಕೇಳಿದಾಗ, ‘ನಾವು ಸೋನಿಯಾ ಗಾಂಧಿ ಅವರ ಮುಖಂಡತ್ವದಲ್ಲಿ ಮಹಿಳೆಯರಿಗೆ ರಾಯಕೀಯದಲ್ಲಿ ಶೇ.33ರಷ್ಟು ಮೀಸಲಾತಿ ಬಗ್ಗೆ ರಾಜ್ಯಸಭೆಯಲ್ಲಿ ಮಂಡಿಸಿದ್ದೇವೆ. ಎರಡೂ ಪಕ್ಷಗಳು ಈ ಬಗ್ಗೆ ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಿವೆ. ನಾವು ಅಧಿಕಾರದಲ್ಲಿಲ್ಲ. ಅವರು ಅಧಿಕಾರದಲ್ಲಿ ಇದ್ದರೂ ನೀಡುತ್ತಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಶೇ.50ರಷ್ಟು ಮೀಸಲಾತಿ ನೀಡಬೇಕು ಎಂದಿದ್ದು ಕಾಂಗ್ರೆಸ್. ರಾಜೀವ್ ಗಾಂಧಿ ಅವರು ಸಂವಿಧಾನದ 73-74ನೇ ತಿದ್ದುಪಡಿಯಲ್ಲಿ ಈ ವಿಚಾರ ತಂದರು. ನಾವು ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಶಕ್ತಿ ತುಂಬಲು ಕಾರ್ಯಕ್ರಮ ನೀಡುತ್ತಾ ಬಂದಿದ್ದು, ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಇಂದಿರಾ ಗಾಂಧಿ ಅವರು ಅಂಗನವಾಡಿ ಕಾರ್ಯಕ್ರಮ, ಮನಮೋಹನ್ ಸಿಂಗ್ ಅವರು ಆಶಾ ಕಾರ್ಯಕರ್ತರ ಕಾರ್ಯಕ್ರಮ, ಎಸ್.ಎಂ ಕೃಷ್ಣಾ ಅವರ ಸರ್ಕಾರದಲ್ಲಿ ಸ್ತ್ರೀಶಕ್ತಿ ಕಾರ್ಯಕ್ರಮ ನೀಡಿದ್ದೆವು. ಬಿಜೆಪಿ ಇಂತಹ ಒಂದು ಕಾರ್ಯಕ್ರಮವನ್ನು ಇಡೀ ದೇಶದಲ್ಲಿ ನೀಡಿಲ್ಲ’ ಎಂದು ಉತ್ತರಿಸಿದರು.
ದೆಹಲಿಯಂತೆ ರಾಜ್ಯದಲ್ಲೂ ಮಹಿಳೆಯರಿಗೆ ಉಚಿತ ಕೊಡುಗೆಗಳನ್ನು ನೀಡುತ್ತೀರಾ ಎಂದು ಕೇಳಿದಾಗ, ‘ಇದು ಕರ್ನಾಟಕ ರಾಜ್ಯ, ನಮ್ಮ ಆಡಳಿತ ಇಡೀ ದೇಶಕ್ಕೆ ಮಾದರಿ. ನಮ್ಮ ಆರ್ಥಿಕ ಶಕ್ತಿ, ನಮ್ಮ ನೀತಿಯನ್ನು ದೆಹಲಿಗೆ ಹೋಲಿಕೆ ಮಾಡುವುದು ಬೇಡ. ನಮಗೆ ನಮ್ಮದೇ ಆದ ಇತಿಹಾಸವಿದೆ. ನಾವು ಉತ್ತಮ ರೀತಿಯಲ್ಲಿ ಮಹಿಳೆಯರಿಗೆ ಕಾರ್ಯಕ್ರಮ ನೀಡುತ್ತೇವೆ. ಈಗ ನಮ್ಮ ರಾಜ್ಯದಲ್ಲಿ 40% ಕಮಿಷನ್ ಹಾಗೂ ಭ್ರಷ್ಟಾಚಾರ ಹೆಚ್ಚಾಗಿ ರಾಜ್ಯದ ಘನತೆ ಹಾಳಾಗಿದೆ’ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ನಿಜ ಕನಸುಗಳು ಎಂಬ ಪುಸ್ತಕವನ್ನು ಬಿಜೆಪಿ ನಾಯಕರು ಬಿಡುಗಡೆ ಮಾಡುತ್ತಿರುವ ಬಗ್ಗೆ ಕೇಳಿದಾಗ, ‘ಕಾಂಗ್ರೆಸ್ ಪಕ್ಷ ಇಷ್ಟು ಹೊತ್ತು ಬದುಕು, ಜನರ ಹೊಟ್ಟೆ ತುಂಬುವ ವಿಚಾರ. ಬಿಜೆಪಿ ಭಾವನೆ ವಿಚಾರವಾಗಿ ರಾಜಕೀಯ ಮಾಡುತ್ತದೆ. ನನ್ನ ಕ್ಷೇತ್ರದಲ್ಲಿ 300ಕ್ಕೂ ಹೆಚ್ಚು ದೇವಾಲಯ ಕಟ್ಟಲು ನಾನು ನೆರವು ಮಾಡಿದ್ದು, ಆ ಬಗ್ಗೆ ಯಾರೂ ಮಾತನಾಡಲ್ಲ. ಆದರೆ ನಮ್ಮ ಕ್ಷೇತ್ರದ ಒಂದು ಗ್ರಾಮದಲ್ಲಿ ಕ್ರೀಸ್ತರ ಶಿಲುಬೆ ನಿರ್ಮಿಸಲು ಮುಂದಾದಾಗ ನನ್ನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ರಾಷ್ಟ್ರಪತಿಗಳಾಗಿದ್ದ ರಾಮನಾಥ್ ಕೋವಿಂದ್ ಅವರು ಟಿಪ್ಪು ಅವರ ಬಗ್ಗೆ ನಮ್ಮ ಸದನದಲ್ಲಿ ಭಾಷಣ ಮಾಡಿ ಹೋಗಿದ್ದಾರೆ. ಬಿಜೆಪಿ ಅವರು ಜನರಿಗೆ ಬದುಕು ಕಟ್ಟಿಕೊಟ್ಟಿರುವ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಬಡವರಿಗೆ ಊಟ ನೀಡುವುದು, ಕೋವಿಡ್ ನಲ್ಲಿ ಜನ ಸತ್ತಾಗ ಅವರಿಗೆ ಪರಿಹಾರ ನೀಡಿರುವುದರ ಬಗ್ಗೆ, ಆದಾಯ ಡಬಲ್ ಮಾಡಿದ್ದರ ಬಗ್ಗೆ, ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುವುದರ ಬಗ್ಗೆ, 2 ಕೋಟಿ ಉದ್ಯೋಗ ನೀಡಿದರ ಬಗ್ಗೆ, ಕಳೆದ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸಿರುವುದರ ಬಗ್ಗೆ ಅವರಿಂದ ಮಾತನಾಡಲು ಆಗುತ್ತಿಲ್ಲ. ಹೀಗಾಗಿ ಅವರು ಭಾವನೆ ಮೇಲೆ ದೇಶ ಹಾಗೂ ಸಮಾಜವನ್ನು ಇಬ್ಭಾಗ ಮಾಡಲು ಹೋಗುತ್ತಿದ್ದಾರೆ. ಶಿವಮೊಗ್ಗ, ಕರಾವಳಿ ಭಾಗದಲ್ಲಿ ಎಷ್ಟು ಬಂಡವಾಳ ಹೂಡಿಕೆ ಆಗಿದೆ. ರಾಜ್ಯದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆ ಬಂದಿದೆ ಎನ್ನುತ್ತಾರೆ. ಶಿವಮೊಗ್ಗದಲ್ಲಿ ಯಾರಾದರೂ 500 ಕೋಟಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದ್ದಾರಾ? ದಕ್ಷಿಣ ಕನ್ನಡದಲ್ಲಿ ಕನಿಷ್ಠ 1 ಲಕ್ಷ ಕೋಟಿಯಾದರೂ ಬಂಡವವಾಳ ಹೂಡಿಕೆಯಾಗಬೇಕಲ್ಲವೇ? ಈ ವೈಫಲ್ಯಗಳನ್ನು ಮುಚ್ಚಿಹಾಕಲು ನಮ್ಮ ನಾಯಕರ ಮೇಲೆ ಕಳಂಕ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯವರ ಈ ಪ್ರಯತ್ನಗಳು ಕೆಲಸಕ್ಕೆ ಬರುವುದಿಲ್ಲ. ಶೃಂಗೇರಿ, ನಂಜನಗೂಡಿನಲ್ಲಿ ಸಲಾಂ ಆರತಿ ನಾವು ಹೆಸರಿಟ್ಟಿದ್ದೆವಾ? ಟಿಪ್ಪು ಇತಿಹಾಸ ನಾವು ಬರೆದಿದ್ದೇವಾ? ಸ್ವಾತಂತ್ರ್ಯ ಬರುವ ಮುನ್ನವೇ ಟಿಪ್ಪು ಅವರ ಇತಿಹಾಸ ಬರೆಯಲಾಗಿತ್ತು. ರಾಷ್ಟ್ರಪತಿಗಳು ಟಿಪ್ಪು ತ್ಯಾಗದ ಬಗ್ಗೆ ಮಾತನಾಡಿದ್ದಾರೆ. ಅವರು ಪುಸ್ತಕ ಬರೆದು ಸಂತೋಷ ಪಡಲಿ’ ಎಂದು ತಿಳಿಸಿದರು.
ಸ್ಯಾಂಟ್ರೋ ರವಿ ಹಾಗೂ ದಲಿತ ಮಹಿಳೆಯರ ಮೇಲೆ ಬೋಗಸ್ ಪ್ರಕರಣ ದಾಖಲಿಸಿರುವ ವಿಚಾರವಾಗಿ ಕೇಳಿದಾಗ, ‘ನನಗೆ ಈ ಸ್ಯಾಂಟ್ರೋ, ಜಾಗ್ವಾರ್, ಮರ್ಸಿಡೀಸ್, ಬಿಎಂಡಬ್ಲ್ಯೂ ಬಗ್ಗೆ ಗೊತ್ತಿರಲಿಲ್ಲ. ನಿನ್ನೆ ಮಾಧ್ಯಮ ಸ್ನೇಹಿತರನ್ನು ಕೇಳಿ ತಿಳಿದುಕೊಂಡೆ. ಇದು ಅವರಿಗೂ ಹಾಗೂ ಬಿಜೆಪಿಗೂ ಇರುವ ಸಂಬಂಧ. ಅದರ ಬಗ್ಗೆ ನಾನು ಯಾಕೆ ಮಾತನಾಡಲಿ. ಮಾಧ್ಯಮಗಳು ಹಾಗೂ ಕುಮಾರಸ್ವಾಮಿ ಅವರು ಎಲ್ಲವನ್ನು ಬಿಚ್ಚಿಡುತ್ತಿದ್ದಾರೆ. ಬೋಗಸ್ ಪ್ರಕರಣದ ಬಗ್ಗೆ ಮುಖ್ಯಮಂತ್ರಿಗಳು, ಗೃಹ ಸಚಿವರು ಪಾರದರ್ಶಕ ತನಿಖೆ ಮಾಡಿಸಬೇಕಾಗಿದೆ. ರಾಜಕೀಯದಲ್ಲಿ ಯಾರೋ ಬಂದು ನಮ್ಮ ಜತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಅದು ಬೇರೆ ವಿಚಾರ. ಆದರೆ ದೂರವಾಣಿ ಸಂಭಾಷಣೆ, ಚಾಟ್, ಮಾತುಕತೆಗಳು ಏನಾದರೂ ವ್ಯವಹಾರ ಇದ್ದರೆ ಮಾತ್ರ ಇದು ನಡೆಯುತ್ತದೆ’ ಎಂದರು.
ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ರಾಮಮಂದಿರ ಕಟ್ಟುವ ಘೋಷಣೆ ಮಾಡಿದ ಜಿಲ್ಲಾ ಸಚಿವರು ರಾಮನಗರ ಕ್ಲೀನ್ ಮಾಡುವುದಾಗಿ ಹೇಳಿದ್ದರು. ಅವರು ರಾಮ ಮಂದಿರವಾದರೂ ಕಟ್ಟಲಿ, ಏನಾದರೂ ಕಟ್ಟಲಿ. ಜನ ದಡ್ಡರಿಲ್ಲ. ಅವರು ಭಾವನೆ ಮೇಲೆ ಹೋದರೆ, ನಾವು ಬದುಕಿನ ಮೇಲೆ ಹೋಗುತ್ತೇವೆ. ಅವರಿಗೆ ಅಧಿಕಾರ ಕೊಟ್ಟಾಗ ಬದಲಾವಣೆ ತಂದಿದ್ದೀರಾ? ರೈತರ ಆದಾಯ ಡಬಲ್ ಮಾಡಿದ್ದಾರಾ?’ ಎಂದು ಕೇಳಿದರು.