ಮಂಡ್ಯ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಜೇಬನ್ನು ಪಿಕ್ ಪ್ಯಾಕೆಟ್ ಮಾಡುವ ಕೆಲಸ ಮಾಡಿದ್ದು, ಇವು ಪಿಕ್ ಪ್ಯಾಕೆಟ್ ಸರ್ಕಾರಗಳಾಗಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.
ತಾಲೂಕಿನ ಯಲಿಯೂರು ಸರ್ಕಲ್‌ನಲ್ಲಿರುವ ಪೆಟ್ರೋಲ್ ಬಂಕ್ ಬಳಿ ಜಮಾಯಿಸಿ ಬೆಲೆ ಏರಿಕೆ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ನಡೆದ ಪ್ರತಿಭಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪೆಟ್ರೋಲ್, ಡಿಸೇಲ್ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಸರ್ಕಾರಗಳು ದುಡಿಯುವ ವರ್ಗದ ಜನರ ಸಂಬಳವನ್ನು ಮಾತ್ರ ಏರಿಕೆ ಮಾಡಲಿಲ್ಲ. ದರ ಏರಿಕೆ ಮಾಡಿರುವ ಸರ್ಕಾರಗಳು ಸಂಬಳವನ್ನು ಹೆಚ್ಚು ಮಾಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.
ಇದೇ ತಿಂಗಳು ತೈಲ ಬೆಲೆಯನ್ನು 17 ಬಾರಿ ಏರಿಕೆ ಮಾಡಿದ್ದು, ಈ ವರ್ಷ 51 ಬಾರಿ ಏರಿಕೆ ಮಾಡಿದ್ದಾರೆ. ಮಧ್ಯೆ ಮಾರ್ಚ್, ಏಪ್ರಿಲ್‌ನಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಮಾಡಿಲ್ಲ. ಬೆಲೆ ಏರಿಕೆ ಮಾಡಿದವರು ಸರ್ಕಾರಿ, ಖಾಸಗಿಯವರ ಯಾರ ಸಂಬಳವನ್ನು ಏರಿಕೆ ಮಾಡಲಿಲ್ಲ. ಕೂಡಲೇ ತೆರಿಗೆ ವಾಪಸ್ ಪಡೆದು, ಅಕ್ಕಪಕ್ಕದ ದೇಶದಲ್ಲಿ ಯಾವ ರೀತಿ ಬೆಲೆ ಇದೆಯೋ ಅದೇ ರೀತಿ ಕಡಿಮೆ ಮಾಡಬೇಕು. ಪಕ್ಕದ ಬಾಂಗ್ಲಾದೇಶ, ಶ್ರೀಲಂಕಾ, ಅಮೆರಿಕಾದಲ್ಲೂ ಕಡಿಮೆ ಇದೆ. ಎಲ್ಲ ಕಡೆ ಶೇ.60ರಷ್ಟು ಕಡಿಮೆ ಇದ್ದರೆ, ಭಾರತದಲ್ಲಿ ಮಾತ್ರ ಹೆಚ್ಚಿದೆ. ಇದರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದರು.
ದರ ಏರಿಕೆ ವಿರುದ್ಧ ಹೋರಾಟ: ರಾಜ್ಯಾದ್ಯಂತ 5 ಸಾವಿರ ಕಡೆ 100 ನಾಟ್‌ಔಟ್ ಘೋಷಣೆ ಮೂಲಕ ತೈಲ ಬೆಲೆ ಏರಿಕೆ ಹಾಗೂ ಅಗತ್ಯ ವಸ್ತುಗಳ ದರ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ತಾಲೂಕು, ಜಿಲ್ಲಾ, ಜಿಪಂ, ಗ್ರಾಪಂ, ಹೋಬಳಿ ಮಟ್ಟದಲ್ಲೂ ನಡೆಸಲಾಗಿದೆ. ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಲ್ಲ. ಇದೊಂದು ಶ್ರೀ ಸಾಮಾನ್ಯರ ಕಾರ್ಯಕ್ರಮವಾಗಿದೆ. ಇದರಲ್ಲಿ ಎಲ್ಲ ಪಕ್ಷದವರು ಪಾಲ್ಗೊಂಡಿದ್ದಾರೆ. ಕೆಲವೊಂದು ಕಡೆ 25, 50 ರೂ.ಗಳನ್ನು ಗ್ರಾಹಕರಿಗೆ ಹಂಚಿದ್ದಾರೆ. ಕೆಲವರು ಜಾಗಟೆ, ಸಿಹಿ ಹಂಚಿ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ ಎಂದು ತಿಳಿಸಿದರು.
ಈಶ್ವರಪ್ಪಗೆ ತಿರುಗೇಟು: ಈಶ್ವರಪ್ಪನ ಸುದ್ದಿ ನಾನ್ ಯಾಕೆ ಮಾತನಾಡಲಿ. ಈಶ್ವರಪ್ಪ ಅವನ ಪಾರ್ಟಿ, ಗವರ್ನರ್ ಲೆಟರ್, ಅವನ ಪರಿಸ್ಥಿತಿ ವ್ಯಾಖ್ಯಾನ ಮಾಡಿಕೊಂಡರೆ ಸಾಕು. ನನ್ನ ಸುದ್ದಿ ಯಾಕೆ ಪಾಪ ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು.
ರಾಮ ಜನ್ಮಭೂಮಿ ಅವ್ಯವಹಾರ ದೇಶಕ್ಕೆ ಅವಮಾನ: ರಾಮ ಜನ್ಮಭೂಮಿ ಅವ್ಯವಹಾರದಿಂದ ಇದು ದೇಶಕ್ಕೆ ದೊಡ್ಡ ಅವಮಾನವಾಗಿದೆ. ಇಡೀ ನಮ್ಮ ಜನ ಕೈಲಾದ ಸಹಾಯ ಮಾಡಿದ್ದಾರೆ. ಇದು ನಮ್ಮ ಸಂಸ್ಕೃತಿಗೆ ದೊಡ್ಡ ಅವಮಾನವಾಗಿದೆ. ನಮ್ಮ ಭಾವನೆ, ಧರ್ಮ, ದೇವಸ್ಥಾನಕ್ಕೆ ಸಹಾಯವಾಗಬೇಕು ಹಳ್ಳಿ ಹಳ್ಳಿಯ ಜನ ಹಣ ನೀಡಿದ್ದಾರೆ. ಜಮೀನು ಖರೀದಿ ಮಾಡಿ ಬಿಜಿನೆಸ್ ಮಾಡಲಿ ಅಂತ ದುಡ್ಡು ನೀಡಿಲ್ಲ. ಇಡೀ ದೇಶ ಇದನ್ನು ಖಂಡಿಸಬೇಕಿದೆ. ಜನರು ನೀಡಿರುವ ಹಣವನ್ನು ವಾಪಸ್ ನೀಡಬೇಕು. ಯಾರು ಅವ್ಯವಹಾರದಲ್ಲಿ ಭಾಗಿಯಾಗಿರುವವರನ್ನು ಕೇಂದ್ರ ಹಾಗೂ ಯೋಗಿ ಸರ್ಕಾರ ಬಂಧಿಸಬೇಕು ಎಂದು ಒತ್ತಾಯಿಸಿದರು.