ಬಾಗಲಕೋಟೆ: ರಾಜಕೀಯದಲ್ಲಿ ಯಾರಿಗೆ ಯಾರೂ ಬ್ರೇಕ್ ಹಾಕಲು ಆಗಲ್ಲ. ಡಿ.ಕೆ.ಶಿವಕುಮಾರ ನನ್ನ ಬೆಳವಣಿಗೆಗೆ ಬ್ರೇಕ್ ಹಾಕಲು ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಸಾವಳಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನಲ್ಲಿ ಯಾರು, ಯಾರಿಗೂ ಬ್ರೇಕ್ ಹಾಕಲು ಆಗಲ್ಲ. ಸಚಿವ ಶಿವಕುಮಾರ ಅವರಿಗೆ ನಾನಾಗಲಿ, ನನಗೆ ಶಿವಕುಮಾರ ಆಗಲಿ ಬ್ರೇಕ್ ಹಾಕಲು ಆಗಲ್ಲ. ಅವರು ನನ್ನ ರಾಜಕೀಯ ಬೆಳವಣಿಗೆಗೆ ಬ್ರೇಕ್ ಹಾಕುವ ಪ್ರಯತ್ನವನ್ನೂ ಮಾಡಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ವಿಷಯದಲ್ಲಿ ಸಚಿವ ಡಿ.ಕೆ. ಶಿವಕುಮಾರ ನೀಡಿರುವ ಹೇಳಿಕೆ ಅವರ ವೈಯಕ್ತಿಕ. ಅದಕ್ಕೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ. ಅದು ಸದ್ಯಕ್ಕೆ ಮುಗಿದ ಅಧ್ಯಾಯ. ಆದರೆ, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ನಮ್ಮ ಅಸ್ಮಿತೆ ಎಂದರು.
ರಾಹುಲ್ ಗಾಂಧಿ ಅವರೇ ನಮ್ಮ ಮುಂದಿನ ಪ್ರಧಾನಿ ಅಭ್ಯರ್ಥಿ. ಆದರೆ, ಹಿರಿಯ ನಾಯಕ ಪಿ.ಚಿದಂಬರಂ ಇದಕ್ಕೆ ಅಪಸ್ವರ ಎತ್ತಿರುವುದು ಅವರ ವೈಯಕ್ತಿಕ ಹೇಳಿಕೆ. ಅವರು ಯಾವ ಅರ್ಥದಲ್ಲಿ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ.
● ಎಂ.ಬಿ.ಪಾಟೀಲ್, ಮಾಜಿ ಸಚಿವ